ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ: ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದ ಮಳೆ

ತೇವಾಂಶದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ಸಾಹಸ
Last Updated 21 ಸೆಪ್ಟೆಂಬರ್ 2020, 1:18 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಜನ ಜೀವನ ಅಸ್ತವ್ಯಸ್ತಗೊಳಿಸುವುದರ ಜೊತೆಗೆ ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.

ಈಗಾಗಲೇ ಕೆಲವು ದಿನಗಳಿಂದ ಸುರಿದ ಜಿಟಿ ಜಿಟಿ ಮಳೆಗೆ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ರೈತರು ಬಿತ್ತನೆ ಮಾಡಿದ್ದ ಗೋವಿನಜೋಳ, ಸಜ್ಜೆ, ಹತ್ತಿ, ಶೇಂಗಾ, ಎಳ್ಳು, ಗುರೆಳ್ಳು ಸೇರಿದಂತೆ ಇನ್ನಿತರ ಬೆಳೆಗಳನ್ನು ತೇವಾಂಶದಿಂದ ರಕ್ಷಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡಿ ಯೂರಿಯಾ ಬಳಕೆ ಮಾಡಿದ್ದಾರೆ.

ಆದರೆ ಪ್ರಖರವಾದ ಬಿಸಿಲು ಬಿಳದೇ ಪ್ರತಿದಿನ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ಚೇತರಿಕೆ ಕಾಣುತ್ತಿಲ್ಲ. ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಬೀಜ, ಗೊಬ್ಬರ, ಆಳುಗಳಿಗೆ ಮಾಡಿದ ಖರ್ಚಾದರೂ ಬಂದರೆ ಸಾಕು ಎಂಬ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಉತ್ತರಿ ಮಳೆ ಆರಂಭವಾಗಿದ್ದು, ಪ್ರತಿ ವರ್ಷ ಉರಿ ಉರಿ ಎನ್ನುವಷ್ಟು ಉತ್ತರಿ ಬಿಸಿಲಿಗೆ ಮಹಿಳೆಯರು ತಮ್ಮ ಹೊಸ ಸೇರಿದಂತೆ ರೇಷ್ಮೆ, ಪಿತಾಂಭರ ಬಟ್ಟೆಗಳನ್ನು ಹಾಕಿ ಒಣಗಿದ ನಂತರ ಶುಭ್ರವಾಗಿ ಮಡಿಚಿ ಇಡುತ್ತಿದ್ದರು. ಆದರೆ ಈ ಬಾರಿ ಕಳೆದೊಂದು ವಾರದಿಂದ ಬಿಸಿಲಿನ ದರ್ಶನವಾಗುತ್ತಿಲ್ಲ.

‘ಈ ಬಾರಿ ಗೋವಿನಜೋಳಕ್ಕೆ ಹುಳುವಿನ ಬಾಧೆ ಇತ್ತು. ಅದಕ ಸಾಕಷ್ಟು ಖರ್ಚು ಮಾಡಿ ಔಷಧಿ ಸಿಂಪಡಿಸಿದ್ವಿ, ನಂತರ ಸತತ ಮಳೆಯಿಂದ ಭೂಮಿ ತಂಪು ಹಿಡಿದಿದ್ರಿಂದ ಬೆಳೆ ಉಳಿಸಿಕೊಳ್ಳಾಕ ಮತ್ತೆ ಸಾಕಷ್ಟು ಖರ್ಚು ಮಾಡಿ ಯೂರಿಯಾ ಹಾಕಿದ್ವಿ. ಆದ್ರ ಮಳೆ ಹೆಚ್ಚಿ ಬೆಳೆಗಳೆಲ್ಲ ಹಾಳಾದ್ವು. ಇದ್ರಿಂದ ಹಾಕಿದ ಬಂಡವಾಳನೂ ಬರಲಾರದಂಗ ಆಗೈತಿ‘ ಎನ್ನುತ್ತಾರೆ ಕೊಡಗಾನೂರ ಗ್ರಾಮದ ರೈತರಾದ ಮಲ್ಲಪ್ಪ ವಾಲ್ಮೀಕಿ, ಯಲ್ಲಪ್ಪ ರಾಮಜೀ, ಈರಪ್ಪ ತೋಟದ, ಬಸಯ್ಯ ಕಪ್ಲಿಮಠ ಅವರುಗಳು.

ಹೊಲ ಹದಗೊಳಿಸಲು ಬಿಡದ ಮಳೆ: ಈಗಾಗಲೇ ಮುಂಗಾರು ಮುಗಿಯುವ ಹಂತಕ್ಕೆ ಬಂದಿದ್ದು, ವಾಡಿಕೆಯಂತೆ ಮುಂಬರುವ ಹಸ್ತ ಮಳೆಗೆ ಹಿಂಗಾರು ಬೆಳೆಗಳಾದ ಬಿಳಿ ಜೋಳ, ಕಡಲೆ, ಗೋಧಿ, ಕುಸುಬಿ ಬಿತ್ತನೆಯಾಗಬೇಕು.

ಆದರೆ ಈ ಬಾರಿ ಸತತ ಮಳೆಯಿಂದಾಗಿ ಹೊಲಗಳ ತುಂಬ ಕಸ ಬೆಳೆದು ನಿಂತಿದ್ದು, ರೈತರು ಹೊಲಗಳನ್ನು ಹದಗೊಳಿಸಿ ಬಿತ್ತನೆಗೆ ಅಣಿಗೊಳಿಸಲು ಈ ಮಳೆ ಬಿಡುತ್ತಿಲ್ಲ. ಇದರಿಂದಾಗಿ ಈ ಬಾರಿ ಹಿಂಗಾರು ಬಿತ್ತನೆ ತಡವಾಗುವ ಸಾಧ್ಯತೆಗಳಿವೆ.

ಕೆಸರು ಗದ್ದೆಯಾಗಿರುವ ರಸ್ತೆಗಳು: ಸತತ ಮಳೆಯಿಂದಾಗಿ ಮೊದಲೇ ಗುಂಡಿಗಳಿಂದ ಕೂಡಿದ್ದ ರಸ್ತೆಗಳಲ್ಲಿ ಮಳೆ ನೀರು ನಿಂತು ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಅಲ್ಲದೆ ಇತ್ತ ಹಳ್ಳಿಗಳಲ್ಲಿ ರೈತರ ಜಮಿನುಗಳಿಗೆ ಸಂಪರ್ಕಿಸುವ ರಸ್ತೆಗಳು ಸಹ ಹಾಳಾಗಿದ್ದು, ರೈತರು ತಮ್ಮ ಜಮಿನುಗಳಿಗೆ ತೆರಳಲು ಹರಸಾಹಸ ಪಡುವಂತಾಗಿದೆ. ತ್ಯಾಜ್ಯ ತುಂಬಿಕೊಂಡಿರುವ ಚರಂಡಿಗಳು ಮಳೆಯಿಂದಾಗಿ ಉಕ್ಕಿ ಹರಿದು ತ್ಯಾಜ್ಯವೆಲ್ಲ ರಸ್ತೆ ತುಂಬೆಲ್ಲ ಚೆಲ್ಲಾಪಿಲ್ಲಿಯಾಗುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT