ಗುರುವಾರ , ಮೇ 26, 2022
24 °C
ಎಲ್ಲೆಲ್ಲೂ ಕೇಸರಿ ಧ್ವಜ, ಮೋದಿ, ಬೊಮ್ಮಾಯಿಗೆ ಜೈಕಾರ– ಉತ್ಸಾಹ ತುಂಬಿದ ಸಚಿವ

ಶ್ರೀರಾಮುಲು ಭರ್ಜರಿ ರೋಡ್‌ ಶೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ನಗರಸಭೆ ಚುನಾವಣೆ ಕಾವು ತಾರಕಕ್ಕೇರಿದ್ದು ಸೋಮವಾರ ಗದಗ ಬೆಟಗೇರಿ ಅವಳಿ ನಗರ ಸಂಪೂರ್ಣ ಕೇಸರಿಮಯವಾಗಿತ್ತು. ಸಚಿವ ಶ್ರೀರಾಮುಲು ಹಾಗೂ ಬಿಜೆಪಿ ನಾಯಕ ಅನಿಲ ಮೆಣಸಿನಕಾಯಿ ಅವರು ಇಡೀ ದಿನ ನಗರದ ವಿವಿಧ ವಾರ್ಡ್‌ಗಳಲ್ಲಿ ರೋಡ್‌ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ಗದಗ ಬೆಟಗೇರಿ ನಗರಸಭೆಯಲ್ಲಿ ಶತಾಯಗತಾಯ ಪಕ್ಷದ ಬಾವುಟ ಹಾರಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಒಂದು ವಾರದಿಂದ ಎಲ್ಲೆಡೆ ಭರ್ಜರಿ ಪ್ರಚಾರ ನಡೆಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಬೆಳಗಾವಿ ಅಧಿವೇಶನಕ್ಕೆ ಗೈರಾಗಿ ಮೂರು ದಿನಗಳ ಕಾಲ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಹೋಗಿದ್ದು, ಅವರು ಈ ಚುನಾವಣೆ
ಯನ್ನು ಎಷ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಇದರ ಜತೆಗೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಶಾಸಕ ಕಳಕಪ್ಪ ಬಂಡಿ, ಸಂಸದ ಶಿವಕುಮಾರ ಉದಾಸಿ ಮೊದಲಾದ ಮುಖಂಡರು ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಸಭೆ ನಡೆಸುತ್ತಿದ್ದಾರೆ. ಸೋಮವಾರ ನಗರಕ್ಕೆ ಬಂದಿದ್ದ ಸಚಿವ ಶ್ರೀರಾಮುಲು ಅವರು ಕೂಡ ಇಡೀ ದಿನ ನಗರವನ್ನು ಅಡ್ಡಾಡಿ ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ಮುಳಗುಂದ ರಸ್ತೆಯ ಅಂಬಾ ಭವಾನಿ ದೇವಸ್ಥಾನದಿಂದ ಆರಂಭ ಗೊಂಡ ಸಚಿವ ಬಿ. ಶ್ರೀರಾಮುಲು ರೋಡ್ ಶೋನಲ್ಲಿ ಅಭ್ಯರ್ಥಿಗಳ ಜತೆಗೆ ಅಪಾರ ಬೆಂಬಲಿಗರು ಭಾಗವಹಿಸಿದ್ದರು. ರೋಡ್‌ ಶೋ ಉದ್ದಕ್ಕೂ ಬಿಜೆಪಿ ಪರ ಜಯಘೋಷ ಕೂಗಲಾಯಿತು. ಕಾರ್ಯಕರ್ತರ ಉತ್ಸಾಹ ಹಾಗೂ ಡೊಳ್ಳಿನ ಮೇಳ ಶೋಗೆ ಮತ್ತಷ್ಟು ಮೆರುಗು ತುಂಬಿತ್ತು. 

ವಿವಿಧ ವಾರ್ಡ್‌ಗಳಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಸಚಿವ ಶ್ರೀರಾಮುಲು, ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವ ಮೂಲಕ ಗದಗ ಬೆಟಗೇರಿ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ವರ್ಗದ ಅಭಿವೃದ್ಧಿಗೆ ಬದ್ಧವಾಗಿದ್ದು, ನನ್ನ ಮೇಲೆ ಭರವಸೆ ಇಟ್ಟು ಬಿಜೆಪಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘ಹಲವು ವರ್ಷಗಳಿಂದ ಆಡಳಿತ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಗದಗ-ಬೆಟಗೇರಿ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿಲ್ಲ. ಆದ್ದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಹೇಳಿದರು.

ಮುಳಗುಂದ ರಸ್ತೆ ಅಂಭಾ ಭವಾನಿ ದೇವಸ್ಥಾನದಿಂದ ಆರಂಭಗೊಂಡ ರೋಡ್ ಶೋ ಮುಳಗುಂದ ನಾಕಾ, ರಾಚೋಟೇಶ್ವರ ನಗರ, ಬಸವೇಶ್ವರ ವೃತ್ತ, ಟಾಂಗಾ ಕೂಟ್‌, ಮಹಾತ್ಮಗಾಂಧಿ ವೃತ್ತ, ಹೆಲ್ತ್ ಕ್ಯಾಂಪ್ ಮೂಲಕ ಬೆಟಗೇರಿಯ ಟೆಂಗಿನಕಾಯಿ ಬಜಾರ್‌ನಲ್ಲಿ ಮುಕ್ತಾಯಗೊಂಡಿತು.

‘ಐದು ವರ್ಷಕ್ಕೊಮ್ಮೆ ಮಾತ್ರ ಜನರ ಬಳಿ ಬರುವ ಕಾಂಗ್ರೆಸ್‌’

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ‘ಗದುಗಿನ ಜನತೆ ಬಗ್ಗೆ ಸಚಿವ ಶ್ರೀರಾಮುಲು ವಿಶೇಷ ಪ್ರೀತಿ ಹೊಂದಿದ್ದಾರೆ. ಪಕ್ಷ ಬಲಪಡಿಸುವ ಸಲುವಾಗಿ ಅವರು ರೋಡ್‌ ಶೋ ನಡೆಸುತ್ತಿದ್ದಾರೆ. ಇದು ಬದಲಾವಣೆಯ ಸಮಯ. ಗದಗ ಬೆಟಗೇರಿ ಅವಳಿ ನಗರದ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ’ ಎಂದು ಹೇಳಿದರು.

‘ಗದುಗಿಗೆ ಸಚಿವರಾದ ಸಿ.ಸಿ.ಪಾಟೀಲ, ಶ್ರೀರಾಮುಲು ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡಿದ ಬಳಿಕ ಕಾಂಗ್ರೆಸ್‌ ಪಾಳೆಯದಲ್ಲಿ ಟಾರ್ಚ್‌ ಹೊತ್ತಿಕೊಳ್ಳಲಿದೆ. ಕಾಂಗ್ರೆಸ್‌ ನಾಯಕರೂ ನಾಳೆಯಿಂದ ನಿಮ್ಮ ಬಳಿಗೆ ಬರುತ್ತಾರೆ. ಗದುಗಿನ ಇಬ್ಬರು ಪಾಟೀಲರು ಐದು ವರ್ಷಕ್ಕೊಮ್ಮೆ ಮಾತ್ರ ಜನರ ಬಳಿ ಬರುತ್ತಾರೆ. ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡಿದ ಆ ಇಬ್ಬರೂ ನಾಯಕರನ್ನು ದೂರ ಇಟ್ಟು, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯ ವಿಜಯಕುಮಾರ ಗಡ್ಡಿ, ಶ್ರೀಕಾಂತ ಖಟವಟೆ, ಈಶಣ್ಣ ಮುನವಳ್ಳಿ, ಜಗನ್ನಾಥ ಭಾಂಡಗೆ ಪಾಲ್ಗೊಂಡಿದ್ದರು.

ಹುಬ್ಬಳ್ಳಿ ಧಾರವಾಡದಂತೆ ಗದಗ ಬೆಟಗೇರಿ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ರೂಪಿಸುವುದರ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು

ಶ್ರೀರಾಮುಲು, ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.