ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಕಾಳು ಖರೀದಿ ಪ್ರಮಾಣ ಕಡಿತ: ನರಗುಂದದಲ್ಲಿ ಹೆದ್ದಾರಿ ತಡೆ

ನಿರ್ಬಂಧ ಸಡಿಲಿಸದಿದ್ದರೆ ಸೆ.28ರಂದು ನರಗುಂದ ಬಂದ್‌ ಆಚರಿಸಲು ರೈತರ ನಿರ್ಧಾರ
Last Updated 24 ಸೆಪ್ಟೆಂಬರ್ 2018, 13:35 IST
ಅಕ್ಷರ ಗಾತ್ರ

‘ನರಗುಂದ: ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಪ್ರಮಾಣವನ್ನು 10 ಕ್ವಿಂಟಲ್‌ನಿಂದ 4 ಕ್ವಿಂಟಲ್‌ಗೆ ತಗ್ಗಿಸಿರುವ ಕ್ರಮವನ್ನು ವಿರೋಧಿಸಿ, ತಾಲ್ಲೂಕಿನ ಹೆಸರು ಬೆಳೆಗಾರರು ಸೋಮವಾರ 1 ಗಂಟೆ ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆಯಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದರು.

ಹೆದ್ದಾರಿ ತಡೆಗೂ ಮುನ್ನ, ಪುರಸಭೆ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬೆಂಬಲ ಬೆಲೆ ನೀತಿಯನ್ನು ಖಂಡಿಸಿದರು.
‘ಬೆಂಬಲ ಬೆಲೆ ಕೇಂದ್ರಗಳಲ್ಲಿ ನೋಂದಣಿ ಮಾಡುವಾಗ ಒಬ್ಬ ರೈತನಿಂದ 10 ಕ್ವಿಂಟಲ್‌ ಹೆಸರು ಖರೀದಿಸುವುದಾಗಿ ಹೇಳಿದ್ದರು. ಈಗ ದಿಢೀರನೆ ಅದನ್ನು 4 ಕ್ವಿಂಟಲ್‌ ತಗ್ಗಿಸಿದ್ದಾರೆ. ಇದನ್ನು ಈ ಭಾಗದ ರೈತರು ಸಹಿಸುವುದಿಲ್ಲ. 10 ಕ್ವಿಂಟಲ್‌ನಂತೆಯೇ ಹೆಸರು ಖರೀದಿ ಮಾಡಬೇಕು ಇಲ್ಲವಾದರೆ ಸೆ.28ರಂದು ನರಗುಂದ ಬಂದ್‌ ಆಚರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಪಿಎಂಸಿ ಸದಸ್ಯ ಎಸ್.ಆರ್.ಪಾಟೀಲ ಎಚ್ಚರಿಕೆ ನೀಡಿದರು.

‘ರೈತರನ್ನು ಮೋಸಗೊಳಿಸುವ ನೀತಿ ಸರ್ಕಾರದಿಂದ ನಡೆಯುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ಹೆಸರು ಕಾಳು ಖರೀದಿ ನೋಂದಣಿ ಆರಂಭವಾದಾಗಿನಿಂದ ಒಂದಿಲ್ಲೊಂದು ಸಮಸ್ಯೆಗೆ ರೈತರು ತುತ್ತಾಗುವಂತೆ ಸರ್ಕಾರ ಮಾಡಿದೆ. ಇದು ಸಲ್ಲದ. ಕೂಡಲೇ 10ಕ್ವಿಂಟಲ್‌ನಂತೆ ಖರೀದಿ ಆರಂಭವಾಗಬೇಕು’ ಎಂದು ರೈತ ಮುಖಂಡ ಎಸ್‌.ಬಿ.ಜೋಗಣ್ಣವರ ಒತ್ತಾಯಿಸಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ, ಶಿರಸ್ತೆದಾರ ಎ.ಜಿ.ಪಾಟೀಲ ಅವರು ರೈತರಿಂದ ಮನವಿ ಸ್ವೀಕರಿಸಿದರು. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ನೀಲಪ್ಪ ಗುಡದನ್ನವರ, ಶಂಕ್ರಪ್ಪ ಸಂಗಟಿ, ಮಂಜುನಾಥ ಸವದತ್ತಿ, ಎಂ.ಎಂ.ಮುಳ್ಳೂರ, ಫಕೀರಪ್ಪ ಜೋಗಣ್ಣವರ, ಬಸರಾಜ ಕೆಳಗೇರಿ, ಹನಮಂತ ಸರನಾಯ್ಕರ, ದ್ಯಾಮಣ್ಣ ಸವದತ್ತಿ, ಪರಶುರಾಮ ಜಂಬಗಿ, ರಾಜಣ್ಣ ಗಿರಿಯಮ್ಮಣವರ, ಎಸ್.ಕೆ.ದಂಡಾಪೂರ, ಶಿವಪ್ಪ ಕಿತ್ತೂರ, ಫಕೀರಪ್ಪ ಕಪ್ಪಲಿ, ಲಕ್ಷಣ ಸಾಬಳೆ, ಫಕೀರಪ್ಪ ಮೂಗನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT