ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೋಣ ಪುರಸಭೆ: ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ

ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನ
ಉಮೇಶ ಬಸನಗೌಡರ
Published 14 ಆಗಸ್ಟ್ 2024, 5:16 IST
Last Updated 14 ಆಗಸ್ಟ್ 2024, 5:16 IST
ಅಕ್ಷರ ಗಾತ್ರ

ರೋಣ: ಇಲ್ಲಿನ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾದ ಬೆನ್ನಲ್ಲೆ ಗದ್ದುಗೆ ಏರಲು ತೀವ್ರ ಪೈಪೋಟಿ ನಡೆದಿದೆ.

ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ರೋಣ ಪುರಸಭೆ 23 ಸದಸ್ಯರ ಬಲ ಹೊಂದಿದ್ದು, ಇದರಲ್ಲಿ 17 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, 6 ಜನ ಬಿಜೆಪಿ ಸದಸ್ಯರಿದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೇರಲು ಮಹಿಳಾ ಸದಸ್ಯರು ಪಕ್ಷದ ಪ್ರಭಾವಿ ನಾಯಕರ ವಿಶ್ವಾಸ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ರೋಣ ಪಟ್ಟಣದ 5ನೇ ವಾರ್ಡ್‌ನ ಸದಸ್ಯೆ ಗೀತಾ ಕೊಪ್ಪದ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, 20ನೇ ವಾರ್ಡ್‌ನ ಸದಸ್ಯೆ ಚನ್ನಬಸಮ್ಮ ಹಿರೇಮಠ, 18ನೇ ವಾರ್ಡ್‌ನ ಸದಸ್ಯೆ ಬಸಮ್ಮ ಕೊಪ್ಪದ ಹಾಗೂ 12ನೇ ವಾರ್ಡ್‌ನ ಶಕುಂತಲಾ ಚಿತ್ರಗಾರ ಕೂಡ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇದ್ದಾರೆ. ನಾಲ್ಕು ಮಂದಿ ಮಹಿಳಾ ಸದಸ್ಯರು ಕೂಡ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲೇಬೇಕು ಎಂಬ ನಿಟ್ಟಿನಲ್ಲಿ ಪ್ರಬಲ ಪೈಪೋಟಿ ನಡೆಸುತ್ತಿದ್ದು, ಅಧ್ಯಕ್ಷ ಗಾದಿ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ಇದ್ದು 9ನೇ ವಾರ್ಡ್‌ನ ಸದಸ್ಯ ದುರಗಪ್ಪ ಹಿರೇಮನಿ ಹಾಗೂ 22ನೇ ವಾರ್ಡ್‌ನ ಹನುಮಂತ ತಳ್ಳಿಕೇರಿ ಇಬ್ಬರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರ ಪೈಪೋಟಿಯಲ್ಲಿ ಉಪಾಧಕ್ಷ ಸ್ಥಾನದ ಪಟ್ಟ ಯಾರಿಗೆ ದೊರೆಯಲಿದೆ ಎಂದು ಕಾದು ನೋಡಬೇಕಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು ಗಾಣಿಗ ಸಮುದಾಯಕ್ಕೆ ನೀಡಬೇಕು ಎಂಬುದು ಸಮಾಜದ ಬೇಡಿಕೆಯಾಗಿದೆ. ಶಾಸಕ ಜಿ.ಎಸ್.ಪಾಟೀಲ ಅವರನ್ನು ಸಮಾಜದ ಮುಖಂಡರು ಮನವೊಲಿಸಲಿದ್ದಾರೆ
- ಗೀತಾ ಮಾಡಲಗೇರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ಜಾತಿ ಲೆಕ್ಕಾಚಾರ

ಕಳೆದ ಬಾರಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಮೂರನೇ ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಇರುವುದರಿಂದ ಆಕಾಂಕ್ಷಿಗಳು ಜಾತಿ ಲೆಕ್ಕಾಚಾರದಲ್ಲಿದ್ದಾರೆ. ಗೀತಾ ಮಾಡಲಗೇರಿ ಪ್ರಬಲ ಗಾಣಿಗ ಸಮುದಾದವರಾಗಿದ್ದಾರೆ; ಬಸಮ್ಮ ಕೊಪ್ಪದ ಕುರುಬ ಸಮುದಾಯಕ್ಕೆ ಸೇರಿದ್ದು ಚನ್ನಬಸಮ್ಮ ಹಿರೇಮಠ ಲಿಂಗಾಯತ ಸಮುದಾಯದಕ್ಕೆ ಸೇರಿದ್ದಾರೆ. ಇವರೆಲ್ಲರೂ ತಮ್ಮ ಸಮಾಜದ ನಾಯಕರ ಮೂಲಕ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಶಾಸಕರಿಗೆ ದುಂಬಾಲು ಬಿದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT