ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಸಿಗೆಯಲ್ಲಿ ಸಂಡಿಗೆ ತಯಾರಿ ಜೋರು

ಗ್ರಾಮೀಣ ಭಾಗದ ಮಹಿಳೆಯರಿಗೆ ವರವಾದ ಬಿಸಿಲಿನ ಧಗೆ
ಚಂದ್ರು ಎಂ. ರಾಥೋಡ್
Published : 6 ಮೇ 2024, 5:13 IST
Last Updated : 6 ಮೇ 2024, 5:13 IST
ಫಾಲೋ ಮಾಡಿ
Comments

ನರೇಗಲ್: ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಧಗೆಗೆ ಹೆದರಿರುವ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಕೆಲಸ ಇಲ್ಲದ ಕಾರಣ ಹೊಲಗಳು ಜನರಿಲ್ಲದೆ ಭಣಗುಡುತ್ತಿವೆ. ಆದರೆ ಇದೇ 41 ಡಿಗ್ರಿ ತಾಪಮಾನವನ್ನು ವರವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಮಹಿಳೆಯರು ಕೈ ಶ್ಯಾವಿಗೆ, ಹಪ್ಪಳ, ಗೌಲಿ, ಸಂಡಿಗೆ, ಹಪ್ಪಳ ಇತರೆ ಆಹಾರ ಪದಾರ್ಥಗಳ ತಯಾರಿ ನಡೆಸಿದ್ದಾರೆ.

ರಜೆಯ ಕಾರಣ ಮನೆಯಲ್ಲಿರುವ ಮಕ್ಕಳು ಅಮ್ಮ ಮಾಡುವ ಕೆಲಸಕ್ಕೆ ಉತ್ಸಾಹದಿಂದ ಸಹಾಯ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಸಾಂಪ್ರದಾಯಿಕ ತಿನಿಸು ಮನೆಯಲ್ಲಿಯೇ ಸಿದ್ದಪಡಿಸುವ ಪಾಠವಾಗಿ ಮಕ್ಕಳಿಗೆ ತಾಯಂದಿರು, ಓಣಿಯ ಮಹಿಳೆಯರು ಹೇಳಿಕೊಡುತ್ತಿದ್ದಾರೆ.

‘ಪ್ರತಿವರ್ಷ ಗ್ರಾಮೀಣ ಭಾಗದಲ್ಲಿ ಏಪ್ರಿಲ್‌, ಮೇ ತಿಂಗಳ ಬೇಸಿಗೆಯಲ್ಲಿ ಆಹಾ ಓಣಿಯ ಮಹಿಳೆಯರು ಒಂದು ಕಡೆ ಸೇರಿ ಇವುಗಳನ್ನು ಮಾಡುವುದು ಸಾಮಾನ್ಯ. ಒಬ್ಬರ ಮನೆಯಿಂದ ತಯಾರು ಮಾಡುವ ಸಾಮಗ್ರಿಗಳನ್ನು ತಂದರೆ, ಮೊತ್ತೊಬ್ಬರು ಹಿಟ್ಟು ತರುತ್ತಾರೆ. ನಂತರ ಮನೆಯ ಮಹಡಿ ಮೇಲೆ, ತಗಡಿನ ಮೇಲೆ, ಮನೆಯ ಮುಂದಿನ ಕಂಪೌಂಡ್ ಒಳಗೆ ಅದರಲ್ಲೂ ಸೂರ್ಯನ ಕಿರಣಗಳು ನೇರವಾಗಿ ಬೀಳುವ ಜಾಗದಲ್ಲಿ ಸಂಡಿಗೆ, ಹಪ್ಪಳ, ಚಕ್ಕಲಿ ಹಾಕುತ್ತಾರೆ. ಸರತಿಯಂತೆ ಒಬ್ಬೊಬ್ಬರ ಮನೆಯ ತಿನಿಸುಗಳನ್ನು ತಯಾರಿಸಲು ಅಕ್ಕಿಹಿಟ್ಟು ನೀರಿನಲ್ಲಿ ಒಂದು ದಿನ ಮುಂಚಿತವಾಗಿ ನನೆಹಾಕುತ್ತಾರೆ. ನಂತರ ಮರುದಿನ ಬೆಳಗ್ಗೆ 8 ರಿಂದ 10ಗಂಟೆ ಒಳಗೆ ಮಾಡಿ ನಂತರ ಬಿಸಿಲೇರುವ ಮುನ್ನವೆ ಮನೆಯೊಳಗೆ ಸೇರಿಕೊಳ್ಳುತ್ತಿದ್ದಾರೆ. ಸಂಜೆ 5 ಗಂಟೆಯ ನಂತರ ಬಿಸಿಲಿಗೆ ಒಣಗಿದ ಆಹಾರ ಪದಾರ್ಥಗಳನ್ನು ಶೇಖರಿಸಿ ಡಬ್ಬಿಗಳಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಮುಂದಿನ ವರ್ಷದವರೆಗೂ ಕೆಡದಂತೆ, ವಾಸನೆ ಬರದಂತೆ ಕಾಪಾಡಬಹುದು’ ಎನ್ನುತ್ತಾರೆ ಶರಣಮ್ಮ ರಾಥೋಡ.

‘ಹಪ್ಪಳ, ಚಕ್ಕುಲಿ, ಚಿಪ್ಸ್‌, ಖಾರ ಬೆರೆಸಿದ ಅವಲಕ್ಕಿ, ಮಂಡಕ್ಕಿ ಸೇರಿದಂತೆ ಬಾಯಿ ಚಪಲದ ಕುರುಕಲು ತಿನಿಸುಗಳನ್ನು ಬೆಳಿಗ್ಗೆ ಮತ್ತು ಸಂಜೆ ಬಾಯಿ ರುಚಿ ನೀಗಿಸುತ್ತಿವೆ. ಮುಂದೆ ಬಂಧುಗಳು, ಇಷ್ಟರು ಬಂದಾಗ ಊಟ, ಉಪಾಹಾರ ಅಥವಾ ಕಾಫಿ ಟೀ ಜತೆಯಲ್ಲಿ ಹಪ್ಪಳ, ಸಂಡಿಗೆ ಕೊಟ್ಟರೆ ಪ್ರೀತಿ ಹೆಚ್ಚುತ್ತದೆ. ಹೊರಗಿನವರು ಬಂದಾಗ ಜೇಬಲ್ಲಿ ಕಾಸು ಇಲ್ಲದಿದ್ದಾಗ ಗೌರವ ಕಾಪಾಡುತ್ತದೆ ಎಂದು ಮನೆ ಮನೆಗಳಲ್ಲಿ ಈಗಾಗಲೆ ಹಳೇ ಹಂಡೆ, ತಪ್ಪಲಿ, ದೊಡ್ಡ ಸ್ಟೀಲ್‌ ಡಬ್ಬಿಗಳಲ್ಲಿ ಹಪ್ಪಳ ಸಂಡಿಗೆಗಳನ್ನು ಭರ್ತಿ ಮಾಡುತ್ತಿದ್ದಾರೆ. ಆದ್ದರಿಂದ ಈ ಬಾರಿಯ ಬಿಸಿಲು ಕುರುಕಲು ತಿನಿಸುಗಳನ್ನು ತಯಾರಿಸುವ ಉದ್ಯಮಿಗಳಿಗೆ ಕೊಂಚ ಪೆಟ್ಟು ಬೀಳುವ ಸಾಧ್ಯತೆಯಿದೆ’ ಎನ್ನುತ್ತಾರೆ ಹಿರಿಯ ಮಹಿಳೆಯರು.

ನರೇಗಲ್ ಪಟ್ಟಣದ 3ನೇ ವಾರ್ಡಿನ ಆಶ್ರಯ ಕಾಲೋನಿಯ ಮನೆಯೊಂದರ ಮಹಡಿ ಮೇಲೆ ಮಹಿಳೆಯರು ಬಿಸಿಲಿಗೆ ಕೈ ಸಂಡಿಗೆ ಹಾಕುತ್ತಿರುವುದು
ನರೇಗಲ್ ಪಟ್ಟಣದ 3ನೇ ವಾರ್ಡಿನ ಆಶ್ರಯ ಕಾಲೋನಿಯ ಮನೆಯೊಂದರ ಮಹಡಿ ಮೇಲೆ ಮಹಿಳೆಯರು ಬಿಸಿಲಿಗೆ ಕೈ ಸಂಡಿಗೆ ಹಾಕುತ್ತಿರುವುದು

ಈ ಬಾರಿಯ ತಾಪಮಾನ ಸಂಡಿಗೆ ಹಪ್ಪಳ ಮಾಡಲು ಅನಾನುಕೂಲಕರ ವಾತಾವರಣ ಒದಗಿಸಿದೆ. ಇದರಿಂದ ಸಾಂಪ್ರದಾಯಿಕ ತಿನಿಸುಗಳು‌ ಮನೆಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಸಿದ್ದಗೊಳ್ಳುತ್ತಿವೆ

–ಸರೋಜಾ ರಾಥೋಡ್ ನರೇಗಲ್

ಸಂಡಿಗೆ ತಯಾರಿಸುವ ಸುಲಭ ವಿಧಾನ ಗೋಧಿಯನ್ನು ಸ್ವಚ್ಛವಾಗಿ ತೊಳೆದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿಕೊಂಡು ಹಿಟ್ಟಿನ ಗಿರಣಿಯಲ್ಲಿ ಬೀಸಿ ನಂತರ ಹಿಟ್ಟಿನ ಸಾಣಿಗೆಯಿಂದ ಸೋಸಿ ರವೆ ಹಾಗೂ ಹಿಟ್ಟನ್ನು ಬೇರ್ಪಡಿಸುತ್ತಾರೆ. ನಂತರ ಹಿಟ್ಟನ್ನು ತಮಗೆ ಬೇಕಾದ ಬಣ್ಣದೊಂದಿಗೆ ಕಲಿಸಿ ಮೂರು ಗಂಟೆ ಇಡುತ್ತಾರೆ. ನಂತರ ಹಿಟ್ಟನ್ನು ಹದವಾಗಿ ಮಿದ್ದುವದರಿಂದ ಉತ್ತಮವಾದ ಶಾವಿಗೆ ಸಂಡಿಗೆ ಹಾಗೂ ಕುರುಕಲು ತಿನಿಸುಗಳನ್ನು ತಯಾರಾಗುತ್ತವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT