ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರದಲ್ಲಿನ ಅಪರೂಪದ ಶಿಲಾಮೂರ್ತಿಗಳು

Last Updated 10 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪುರಾತನ ಶಿಲ್ಪಕಲೆಗಳು ಶತಮಾನಗಳು ಉರುಳಿದರೂ ಸಹ ಸಹಜ ಸೌಂದರ್ಯದ ಮೂಲಕ ಕಲಾರಸಿಕರನ್ನು ಸೆಳೆಯುತ್ತಲೇ ಇರುತ್ತವೆ. 10ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾದ ಗದಗ ಜಿಲ್ಲೆ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ನೇಮಿನಾಥ ಅಥವಾ ಶಂಖ ಬಸದಿಯಲ್ಲಿನ ಮೂರ್ತಿಗಳು ಆಕರ್ಷಕವಾಗಿದ್ದು ಕಲಾಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಸೋಮೇಶ್ವರ ದೇವಸ್ಥಾನದ ಗರ್ಭ ಗುಡಿಯಲ್ಲಿನ 4 ಅಡಿ ಎತ್ತರ 3 ಅಡಿ ಅಗಲದ ಶಿಲಾಮೂರ್ತಿ ಇದ್ದು, ಇದು ಬಹಳ ಅಪರೂಪದ ಶಿಲ್ಪಕಲಾಕೃತಿಯಾಗಿದೆ. ಸರ್ವಾಲಂಕೃತನಾದ ಶಿವನ ಹಿಂದೆ ಪಾರ್ವತಿಯೂ ಸಹ ಅಲಂಕಾರಭೂಷಿತೆಯಾಗಿ ವೃಷಭವನ್ನೇರಿ ಕುಳಿತ್ತಿದ್ದಾಳೆ. ಇಂತಹ ಅಪರೂಪದ ಮೂರ್ತಿ ದಕ್ಷಿಣ ಭಾರತದಲ್ಲಿ ಲಕ್ಷ್ಮೇಶ್ವರದಲ್ಲೇ ಇರುವುದು ಎನ್ನಲಾಗುತ್ತಿದೆ. ಗಂಡ ಹೆಂಡತಿ ವಾಹನವೊಂದರಲ್ಲಿ ಹೋಗುವ, ಆ ಕಾಲದ ಕಲಾವಿದನ ಕಲ್ಪನೆ ಇದು. ಶಿವಶರಣ ಆದಯ್ಯ ಸೌರಾಷ್ಟ್ರದಿಂದ ತಂದು ಈ ಮೂರ್ತಿಯನ್ನು ಇಲ್ಲಿ ಸ್ಥಾಪಿಸಿದನು ಎಂಬ ಉಲ್ಲೇಖವಿದೆ.

ಇದೇ ದೇವಸ್ಥಾನದ ಆವರಣದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಲಜ್ಜಾ ಗೌರಿ ಮೂರ್ತಿ ಇದೆ. ಇದು ಸಹ ಬಲು ಅಪರೂಪದ ಮೂರ್ತಿ ಎನ್ನುತ್ತಾರೆ ಇತಿಹಾಸಕಾರರು. ದೇಶದಲ್ಲಿ ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಲಜ್ಜಾಗೌರಿ ಮೂರ್ತಿ ಇದೆ. ಆದರೆ, ಈ ಮೂರ್ತಿ ಅಶ್ಲೀಲ ಭಂಗಿಯಲ್ಲಿದೆ ಎಂಬ ಕಾರಣಕ್ಕೆ ಮೂರ್ತಿಯನ್ನು ದೇವಸ್ಥಾನದ ಹಿಂಭಾಗದ ಕಲ್ಲಿನ ದೊಡ್ಡ ಬಾವಿಯಲ್ಲಿ ಬಿಸಾಕಲಾಗಿತ್ತು. ಐದು ವರ್ಷಗಳ ಹಿಂದೆ ಇನ್ಫೊಸಿಸ್‌ ಪ್ರತಿಷ್ಠಾನದ ಡಾ.ಸುಧಾಮೂರ್ತಿ ಅವರು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವಾಗ ಬಾವಿಯನ್ನು ಸ್ವಚ್ಛಗೊಳಿಸುವ ಸಂದರ್ಭ ಬಂತು. ಆಗ ಅಪರೂಪದ ಈ ವಿಗ್ರಹ ಗೋಚರಿಸಿತು. ಇದರ ಐತಿಹಾಸಿಕ ಮಹತ್ವ ಅರಿತ ಸುಧಾಮೂರ್ತಿ ಅವರು, ಅದನ್ನು ಬಹಳ ಜತನದಿಂದ ಹೊರತೆಗೆಸಿ ಗುಡಿಯೊಂದರಲ್ಲಿ ಪ್ರತಿಷ್ಠಾಪಿಸಿದ್ದಾರೆ. ಗರ್ಭಿಣಿ ಮಹಿಳೆ ಪ್ರಸವ ವೇಳೆಯಲ್ಲಿ ಯಾವ ಭಂಗಿಯಲ್ಲಿ ಕುಳಿತರೆ ಹೆರಿಗೆ ಸುಲಭವಾಗಿ ಆಗುತ್ತದೆ ಎಂಬ ಅಂಶವನ್ನು ಲಜ್ಜಾಗೌರಿ ಮೂರ್ತಿ ಬಿಂಬಿಸುತ್ತದೆ.

ನೇಮಿನಾಥ ಅಥವಾ ಶಂಖ ಬಸದಿಯಲ್ಲಿನ ಸಹಸ್ರಕೂಟ ಜಿನಬಿಂಬದ ವರ್ಣನೆ ಶಬ್ದಗಳಿಗೆ ನಿಲುಕದ್ದು. ನೂರಾರು ವರ್ಷಗಳಿಂದ ಅದು ತನ್ನ ವೈಭವವನ್ನು ಉಳಿಸಿಕೊಂಡು ಇಡೀ ಭಾರತದಲ್ಲಿಯೇ ಖ್ಯಾತಿ ಪಡೆದ ಅಪರೂಪದ ಮೂರ್ತಿಯಾಗಿದೆ. ಕಪ್ಪು ವರ್ಣದ ಏಕಶಿಲೆಯಲ್ಲಿ ಸಾವಿರ ಜಿನಬಿಂಬಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಹೀಗಾಗಿ ಇದಕ್ಕೆ ಸಹಸ್ರಕೂಟ ಜಿನಬಿಂಬ ಎಂದು ಕರೆಯುತ್ತಾರೆ. ಒಂದೇ ಕಲ್ಲಿನಲ್ಲಿ ನಾಲ್ಕೂ ಬದಿಗೆ ದೊಡ್ಡ ಜಿನ ಮೂರ್ತಿ ಮತ್ತು ಗೋಪುರದವರೆಗೆ ಸಣ್ಣ ಸಣ್ಣ ಆಕಾರದ ಬಿಂಬಗಳನ್ನು ಬಿಡಿಸಿರುವಲ್ಲಿ ಕಲಾವಿದನ ಕೈಚಳಕ ಎದ್ದು ಕಾಣುತ್ತದೆ.

ಇದೇ ಬಸದಿಯ ಕಂಬವೊಂದನ್ನು ಆಶ್ರಯವನ್ನಾಗಿ ಮಾಡಿಕೊಂಡು ಕನ್ನಡ ಆದಿಕವಿ ಪಂಪ ತನ್ನ ಕೃತಿನು ರಚಿಸಿದ್ದಾನೆ ಎನ್ನುತ್ತದೆ ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT