ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ | ವಿಠಲಾಪುರದ ವಿಶೇಷ ಶಕ್ತಿಯ ರಸಲಿಂಗ

ಬಿಷ್ಟಪ್ಪಯ್ಯನವರು ಸ್ಥಾಪಿಸಿದ ಪಾದರಸ ತುಂಬಿದ ಶಿವಲಿಂಗ
ಕಾಶೀನಾಥ ಬಿಳಿಮಗ್ಗದ
Published 10 ಮಾರ್ಚ್ 2024, 5:15 IST
Last Updated 10 ಮಾರ್ಚ್ 2024, 5:15 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿರುವ ರಸಲಿಂಗ ದೇವಸ್ಥಾನ ತುಂಬಾ ವಿಶಿಷ್ಟವಾದ ದೇವಸ್ಥಾನ. ದೇವಸ್ಥಾನದಲ್ಲಿ ಸ್ಥಾಪಿಸಿರುವ ರಸಲಿಂಗವು ಧಾರ್ಮಿಕವಾಗಿ ತುಂಬಾ ಮಹತ್ವ ಪಡೆದುಕೊಂಡಿದೆ. ರಸಲಿಂಗ ತುಂಬಾ ಅಪರೂಪದ ಲಿಂಗವಾಗಿದ್ದು, ಶಿವಾರಾಧಕರಿಗೆ ತುಂಬಾ ಮಹತ್ವದ್ದಾಗಿದೆ.

ವಿಠಲಾಪುರ ಗ್ರಾಮದ ಮಹಾಪುರುಷ ಮನೆತನದ ಬಿಷ್ಟಪ್ಪಯ್ಯನವರು 1630ರಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮೊದಲಾದ ಪಂಚಲೋಹಗಳಿಂದ 30 ಕೆಜಿ ತೂಕದ ರಸಲಿಂಗವನ್ನು ನಿರ್ಮಿಸಿದ್ದಾರೆ. ರಸಲಿಂಗದ ಮಧ್ಯದಲ್ಲಿ ಪಾದರಸವನ್ನು ಸೇರಿಸಲಾಗಿದ್ದು, ಲಿಂಗವು ವಿಶಿಷ್ಟ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯ ಹಿರಿಯರು ಹೇಳುತ್ತಿದ್ದಾರೆ.

ಪಂಚಲೋಹಗಳಿಂದ ನಿರ್ಮಿಸಿರುವ ಲಿಂಗ ಹಾಗೂ ಮತ್ತಿತರ ಮೂರ್ತಿಗಳು ಸಾಮಾನ್ಯವಾಗಿ ಎಲ್ಲ ಭಾಗಗಳಲ್ಲಿಯೂ ದೊರೆಯುತ್ತವೆ. ಆದರೆ ಮೂರ್ತಿಯೊಳಗೆ ಪಾದರಸ ಸೇರಿಸಿ ತಯಾರಿಸುವ ಮೂರ್ತಿಗಳು ತುಂಬಾ ಅಪರೂಪ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ವಿಠಲಾಪುರದ ರಸಲಿಂಗಕ್ಕೆ ತುಂಬಾ ಮಹತ್ವವಿದೆ.

ಬಿಷ್ಟಪ್ಪಯ್ಯನವರು ವಿಠಲಾಪುರದ ಪಕ್ಕದಲ್ಲಿರುವ ರಂಗಾಪುರದಲ್ಲಿ 1630ರಲ್ಲಿ ರಸಲಿಂಗವನ್ನು ನಿರ್ಮಿಸುತ್ತಾರೆ. ಮೊದಲು ಅದು ಅಲ್ಲಿಯೇ ಪೂಜೆಗೊಳ್ಳುತ್ತಿತ್ತು. ಮೊಗಲರ ದಾಳಿಯ ಸಂದರ್ಭದಲ್ಲಿ ರಂಗಾಪುರದ ಬಹುತೇಕ ಗ್ರಾಮಸ್ಥರು ರಂಗಾಪುರವನ್ನು ತೊರೆದು ವಿಠಲಾಪುರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಬಿಷ್ಟಪ್ಪಯ್ಯನವರು ರಸಲಿಂಗದೊಂದಿಗೆ ವಿಠಲಾಪುರ ಗ್ರಾಮಕ್ಕೆ ಆಗಮಿಸಿದರು. ವಿಠಲಾಪುರ ಗ್ರಾಮದಲ್ಲಿದ್ದ ವಿಠಲ ದೇವಸ್ಥಾನದಲ್ಲಿ ರಸಲಿಂಗವನ್ನಿಟ್ಟು ಪೂಜಿಸತೊಡಗಿದರು ಎಂದು ತಿಳಿದು ಬಂದಿದೆ.

ಶಿವರಾತ್ರಿ ಹಾಗೂ ಮತ್ತಿತರ ಸಂದರ್ಭದಲ್ಲಿ ರಸಲಿಂಗಕ್ಕೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಳ್ಳಲಾಗುತ್ತದೆ. ದೇವಸ್ಥಾನದ ಗರ್ಭಗುಡಿಯ ಬಲಭಾಗದಲ್ಲಿ ರಸಲಿಂಗವನ್ನು ಸ್ಥಾಪಿಸಲಾಗಿದ್ದು, ಎಡ ಭಾಗದಲ್ಲಿ ಬಿಷ್ಟಪ್ಪಯ್ಯನವರ ಕಲ್ಲಿನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಮೂರು ಮೂರ್ತಿಗಳಿಗೆ ನಿತ್ಯ ಏಕಲಾಲದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ರಸಲಿಂಗ ದೇವಸ್ಥಾನವು ಸದ್ಯ ಮಹಾಪುರುಷ ಮನೆತನದ ಉಸ್ತುವಾರಿಯಲ್ಲಿದ್ದು, ನಿತ್ಯ ಪೂಜೆಗೆ ಅರ್ಚಕರನ್ನು ನಿಯಮಿಸಲಾಗಿದೆ. ಅರ್ಚಕರು ನಿತ್ಯ ಪೂಜೆ ಹಾಗೂ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳಲ್ಲಿ ನೆರವೇರಿಸುತ್ತಿದ್ದಾರೆ. ವಿಶೇಷ ಸಂದರ್ಭದಲ್ಲಿ ಮಹಾಪುರುಷ ಮನೆತನದವರು ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದ ದಕ್ಷಿಣ ದಿಕ್ಕಿಗೆ ಪಾಕಸಾಲೆ ಹಾಗೂ ಭೋಜನಾಲಯಗಳಿವೆ.

ಮುಂಡರಗಿ ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿರುವ ಪ್ರಾಚೀನ ರಸಲಿಂಗ ದೇವಸ್ಥಾನ
ಮುಂಡರಗಿ ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿರುವ ಪ್ರಾಚೀನ ರಸಲಿಂಗ ದೇವಸ್ಥಾನ

ಮಹಾಪುರುಷರಾಗಿದ್ದ ಬಿಷ್ಟಪ್ಪಯ್ಯನವರು ಒಬ್ಬ ಶ್ರೇಷ್ಠ ಸಾಧಕರಾಗಿದ್ದು ಅವರ ಜೀವನ ಸಾಧನೆ ಕುರಿತ ಗ್ರಂಥ ರಚನೆ ಹಾಗೂ ಮತ್ತಿತರ ಕೆಲಸ ಕಾರ್ಯ ಕೈಗೊಳ್ಳಬೇಕಿದೆ - ಸುನೀಲ ಮಹಾಪುರುಷ ಬಿಷ್ಟಪ್ಪಯ್ಯನ ವಂಶಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT