ಬುಧವಾರ, ಫೆಬ್ರವರಿ 1, 2023
16 °C
ಗುರವ್ವ ಸ್ಮರಣಾರ್ಥ ತೋಂಟದಾರ್ಯ ಮಠದಲ್ಲಿ ಶಿವಾನುಭವ

‘ಅವ್ವನ ಮಮಕಾರಕ್ಕೆ ಎಣೆಯುಂಟೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಅವ್ವ ಅಂದರೆ ಪ್ರೇರಕ ಶಕ್ತಿ. ಆಕೆ ಕೊಟ್ಟ ಕೈ ತುತ್ತಿನ ರುಚಿ ವರ್ಣಿಸಲಸದಳ. ಅವ್ವ ಹೇಳಿದ ಕಥೆಯನ್ನು ಮರೆಯಲು ಸಾಧ್ಯವೇ? ಆಕೆಯ ಮಮಕಾರದ ಮುಖವನ್ನು ನಾವು ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಸೋತಾಗ ಧೈರ್ಯ ತುಂಬುವ ಅವ್ವ ಶಕ್ತಿಯ ಪ್ರತಿರೂಪ. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರ ಹಿಂದಿರುವ ಶಕ್ತಿ ಕೂಡ ಅವರ ಅಮ್ಮ, ಗುರವ್ವ’ ಎಂದು ಸಾಂಸ್ಕೃತಿಕ ಚಿಂತಕಿ ಸವಿತಾ ಅಮರಶೆಟ್ಟಿ ಹೇಳಿದರು. 

ನಗರದ ತೋಂಟದಾರ್ಯ ಮಠದಲ್ಲಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಸೋಮವಾರ ನಡೆದ ವಿಶೇಷ ಶಿವಾನುಭವದಲ್ಲಿ ಅವರು ಮಾತನಾಡಿದರು.

‘ಜನ್ಮ ಕೊಟ್ಟ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಎಲ್ಲರೂ ಕಾಲ ಬದಲಾಗಿದೆ ಎನ್ನುತ್ತಾರೆ. ಆದರೆ, ಕಾಲ ಇದ್ದಂತೆಯೇ ಇದೆ. ಬದಲಾಗಿರುವುದು ಮನುಷ್ಯ. ಅವನೊಳಗಿನ ಮಾನವೀಯ ಮೌಲ್ಯಗಳು. ಮಕ್ಕಳ ಏಳಿಗೆಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಅವ್ವ ನಮ್ಮಿಂದ ಬಯಸುವುದು ಎರಡಕ್ಷರದ ಪ್ರೀತಿಯನ್ನು ಮಾತ್ರ’ ಎಂದು ಹೇಳಿದರು.

‘ತಮ್ಮ ಮಕ್ಕಳು ಉನ್ನತ ಹುದ್ದೆಗೇರಲಿ ಎಂದು ಎಲ್ಲ ತಾಯಂದಿರು ಬುತ್ತಿಗಂಟು ಕಟ್ಟಿ, ಅವರ ಓದಿಗಾಗಿ ಶ್ರಮಿಸುತ್ತಾರೆ. ಅಂತಹ ತಾಯಿಯ ಪರಿಶ್ರಮದಿಂದ ಬೆಳೆದ ಮಕ್ಕಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಅವತ್ತು ಗುರವ್ವ ಅವರು ಹೊರಟ್ಟಿ ಅವರಿಗೆ ಕಟ್ಟಿಕೊಟ್ಟ ಬುತ್ತಿ, ಹಲವರಿಗೆ ನೆರವಾಗುವಷ್ಟರ ಮಟ್ಟಿಗೆ ಅವರನ್ನು ಬೆಳೆಸಿದೆ’ ಎಂದು ಹೇಳಿದರು.

ಅಮ್ಮಂದಿರ ದಿನ ಆಚರಣೆ ವಿದೇಶಿಗರ ಸಂಸ್ಕೃತಿ. ನಮ್ಮ ಸಂಸ್ಕೃತಿಯಲ್ಲಿ ಪ್ರತಿದಿನವೂ ಅಮ್ಮಂದಿರದ್ದೇ. ಅಪ್ಪನೇ ನಮ್ಮ ನಿಜಜೀವನದ ಹಿರೋ. ಅವ್ವನೇ ನಿಜಾರ್ಥದ ದೇವತೆ’ ಎಂದು ಬಣ್ಣಿಸಿದರು.

ಆಧುನೀಕತೆ ಹೆಸರಿನಲ್ಲಿ ಕೂಡು ಕುಟುಂಬಗಳು ಕಣ್ಮರೆ ಆಗುತ್ತಿವೆ. ಕುಟುಂಬದ ಸದಸ್ಯರ ನಡುವೆ ಬಾಂಧವ್ಯಗಳು ಕಡಿಮೆ ಆಗುತ್ತಿವೆ. ಆದರೆ, ಹಿರಿಯರು ಇರುವ ಮನೆಯ ಗೌರವವೇ ಬೇರೆ. ಎಷ್ಟೇ ದೊಡ್ಡವರಾದರೂ ನಮ್ಮ ಈಗಿನ ಮಕ್ಕಳಿಗೆ ಕೌಟುಂಬಿಕ ಮೌಲ್ಯವನ್ನು ಹೇಳಿಕೊಡಬೇಕು. ಆಗ ಅವರ ಬಾಳು ಸುಂದರವಾಗಿರುತ್ತದೆ. ಅಜ್ಜ ಅವ್ವನ ಜತೆಗೆ ಬೆಳೆದ ಮಕ್ಕಳಿಗೆ ಜೀವನ ಮೌಲ್ಯಗಳು ತಿಳಿದಿರುತ್ತವೆ. ಸೇವೆ ಮಾಡುವುದರಿಂದ ಮೌಲ್ಯಗಳು ಉಳಿಯುತ್ತವೆ. ಧರ್ಮ ಸಂರಕ್ಷಣೆಯಾಗುತ್ತದೆ’ ಎಂದು ಹೇಳಿದರು. 

ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥವಾಗಿ 12 ಮಂದಿ ತಾಯಂದಿರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಮಠದಲ್ಲಿರುವ ಸೇವಾಕಾರ್ಯಕರ್ತರಿಗೆ ಬಟ್ಟೆ ವಿತರಣೆ ಮಾಡಲಾಯಿತು.

ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಅವ್ವ ಸೇವಾ ಟ್ರಸ್ಟ್‌ ಸಂಚಾಲಯ ಡಾ. ಬಸವರಾಜ ಧಾರವಾಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.