ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ:ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಬೋಧನೆಗೆ ಅತಿಥಿ ಉಪನ್ಯಾಸಕರೇ ಆಸರೆ

Published 24 ಮೇ 2024, 5:28 IST
Last Updated 24 ಮೇ 2024, 5:28 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣವು ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು ಮೂರು ಸರ್ಕಾರಿ ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳನ್ನು ಒಳಗೊಂಡಿರುವ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿದೆ.

ಪಟ್ಟಣದ ಸರ್ಕಾರಿ ಪಿಯು ಕಾಲೇಜು ಸುಸಜ್ಜಿತವಾದ ಎರಡು ಪ್ರತ್ಯೇಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳನ್ನು ಒಳಗೊಂಡಿದೆ. ಕಾಲೇಜು ತಾಲ್ಲೂಕು ಕೇಂದ್ರದಲ್ಲಿರುವುದರಿಂದ ಪಟ್ಟಣ ಹಾಗೂ ತಾಲ್ಲೂಕು ಸೇರಿದಂತೆ ಪಕ್ಕದ ಕೊಪ್ಪಳ, ಹೂವಿನಹಡಗಲಿ, ಶಿರಹಟ್ಟಿ ಮೊದಲಾದ ತಾಲ್ಲೂಕುಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.

ಎಸ್ಎಸ್ಎಲ್‌ಸಿ ಪಾಸಾದವರಿಗಿಲ್ಲಾ ಇಲ್ಲಿ ಮುಕ್ತ ಪ್ರವೇಶ ದೊರೆಯುತ್ತದೆ. ಪಟ್ಟಣದಲ್ಲಿ ಹಲವಾರು ಸರ್ಕಾರಿ ವಸತಿ ನಿಲಯಗಳಿವೆ. ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ ಮೊದಲಾದ ಸೌಲಭ್ಯಗಳಿವೆ. ಹೀಗಾಗಿ ಪ್ರತಿ ವರ್ಷ ಇಲ್ಲಿಯ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ದಾಟುತ್ತಲಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು 1,047 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಪ್ರಸ್ತುತ ವರ್ಷ ಕಾಲೇಜಿಗೆ ಸಂಸ್ಕೃತ, ಶಿಕ್ಷಣ, ಐಚ್ಛಿಕ ಕನ್ನಡ ಮೊದಲಾದ ವಿಷಯಗಳು ಮಂಜೂರಾಗಿವೆ. ಜೊತೆಗೆ ಕಾಲೇಜಿನ ವಿಜ್ಞಾನ ವಿಭಾಗವು ಪ್ರಸ್ತುತ ವರ್ಷ ಜಿಲ್ಲೆಯ ಉನ್ನತೀಕರಿಸಿದ ಆದರ್ಶ ವಿಜ್ಞಾನ ವಿಭಾಗವೆಂದು ಮನ್ನಣೆ ಪಡೆದುಕೊಂಡಿದೆ.

ಈ ವರ್ಷ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಗೊಂಡಿದ್ದು, ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿಯನ್ನೂ ನೀಡಲಾಗುತ್ತಿದೆ. ಕಾಲೇಜು ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಲಿದ್ದು, ಕಳೆದ ವರ್ಷ ಕಾಲೇಜಿನ ಒಟ್ಟು ಪಲಿತಾಂಶ ಶೇ 78.89ರಷ್ಟಾಗಿದೆ.

ಈಚೆಗೆ ನಡೆದ ದ್ವಿತಿಯ ವರ್ಷದ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಎ.ಮಹೇಶ ಶೇ 98.3 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈ ಎಲ್ಲ ಕಾರಣಗಳಿಂದಾಗಿ ಪ್ರಸ್ತುತ ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಭಾರಿ ಹೆಚ್ಚಳವಾಗುವ ನಿರೀಕ್ಷೆ ಇದೆ.

ತಾಲ್ಲೂಕಿನ ಡೋಣಿ ಗ್ರಾಮದಲ್ಲಿ ದಶಕದ ಹಿಂದೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗಿದ್ದು, ಅದು 1ರಿಂದ 12ನೇ ತರಗತಿಯ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಪ್ರೌಢ ವಿಭಾಗ ಹಾಗೂ ಕಾಲೇಜು ವಿಭಾಗಗಳು ಒಂದೇ ಆವರಣದಲ್ಲಿ ಎರಡು ಪ್ರತ್ಯೇಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಲಿವೆ. ಕಾಲೇಜು ಕೇವಲ ಕಲಾ ವಿಭಾಗವನ್ನು ಮಾತ್ರ ಹೊಂದಿದ್ದು, ಒಟ್ಟು 84 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

1ರಿಂದ 12ನೇ ತರಗತಿಯ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಒಂದೊಂದು ಶೌಚಾಲಯವಿದ್ದು, ವಿರಾಮದ ವೇಳೆಯಲ್ಲಿ ಏಕಕಾಲಕ್ಕೆ ಶೌಚಾಲಯ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯದ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.

ಹಿರೇವಡ್ಡಟ್ಟಿ: ವಸತಿ ನಿಲಯ ಆರಂಭಕ್ಕೆ ಬೇಡಿಕೆ

ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಪಿಯು ಕಾಲೇಜು ಕಲಾ ಹಾಗೂ ವಾಣಿಜ್ಯ ವಿಭಾಗಗಳನ್ನು ಒಳಗೊಂಡಿದೆ. ಸ್ವಂತ ಸುಸಜ್ಜಿತ ಕಟ್ಟಡವನ್ನು ಒಳಗೊಂಡಿರುವ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರು ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಕಳೆದ ಶೈಕ್ಷಣಿಕ ವರ್ಷ 72 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಹಿರೇವಡ್ಡಟ್ಟಿ ಗ್ರಾಮವು ತಾಲ್ಲೂಕಿನ ಮೂಲೆಯಲ್ಲಿದ್ದು ರಾಜ್ಯ ರಸ್ತೆ ಸಾರಿಗೆ ಸೇರಿದಂತೆ ವಾಹನ ಸಂಚಾರ ತುಂಬಾ ವಿರಳವಾಗಿದೆ. ಸಮರ್ಪಕವಾಗಿ ವಾಹನ ಸಂಚಾರವಿಲ್ಲದ್ದರಿಂದ ಅನ್ಯ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಗಳ ಸರ್ಕಾರಿ ವಸತಿ ನಿಲಯಗಳಿಲ್ಲದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಗ್ರಾಮದಲ್ಲಿ ಒಂದು ವಸತಿ ನಿಲಯ ಆರಂಭಿಸಬೇಕು ಎನ್ನುವುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದೆ.

ಕಾಯಂ ಸಿಬ್ಬಂದಿ ಕೊರತೆ

ಮುಂಡರಗಿ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಪ್ರಾಚಾರ್ಯರನ್ನು ಒಳಗೊಂಡು ಕೇವಲ ನಾಲ್ಕು ಮಂದಿ ಉಪನ್ಯಾಸಕರು ಪೂರ್ಣಾವಧಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 17 ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಥಮ ದರ್ಜೆ ದ್ವಿತೀಯ ದರ್ಜೆ ಸಹಾಯಕ ಸಿಪಾಯಿ ಸೇರಿದಂತೆ ಯಾವ ಬೋಧಕೇತರ ಸಿಬ್ಬಂದಿಯೂ ಇಲ್ಲವಾದ್ದರಿಂದ ಕಾಲೇಜಿನ ದೈನಂದಿನ ಆಡಳಿತಾತ್ಮಕ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹಿರೇವಡ್ಡಟ್ಟಿ ಪಿಯು ಕಾಲೇಜಿನಲ್ಲಿ ಐದು ಮಂದಿ ಪೂರ್ಣಾವಧಿ ಹಾಗೂ ಇಬ್ಬರು ಅತಿಥಿ ಉಪನ್ಯಾಸಕರಿದ್ದಾರೆ. ಡೋಣಿ ಗ್ರಾಮದಲ್ಲಿ ಮೂವರು ಪೂರ್ಣಾವಧಿ ಉಪನ್ಯಾಸಕರಿದ್ದು ನಾಲ್ಕು ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಬಹುತೇಕ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರೇ ಆಸರೆಯಾಗಿದ್ದು ಅವರ ನೆರವಿನಿಂದಲೇ ಪಾಠ ಪ್ರವಚನಗಳು ಸುಸೂತ್ರವಾಗಿ ನಡೆಯುತ್ತಿವೆ.

ಮುಂಡರಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು ಕಾಲೇಜಿಗೆ ವಿಶಾಲ ಕ್ರೀಡಾಂಗಣದ ಅಗತ್ಯವಿದೆ. ಸರ್ಕಾರ ತಕ್ಷಣ ಮಂಜೂರು ಮಾಡಬೇಕು.
-ಕೊಟ್ರೇಶಪ್ಪ ಅಂಗಡಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT