ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಸ್ಮರಣೆ ವೇಳೆ ಗದುಗಿನ ಅಜ್ಜನಿಗೆ ‘ಶಬ್ದವೃಷ್ಟಿ’

ತೋಂಟದ ಸಿದ್ಧಲಿಂಗ ಶ್ರೀಗಳಿಗೆ ನುಡಿನಮನ ಸಲ್ಲಿಸಿದ ಸ್ವಾಮೀಜಿಗಳು, ಪುಸ್ತಕ ಲೋಕಾರ್ಪಣೆ
Last Updated 28 ಅಕ್ಟೋಬರ್ 2020, 3:00 IST
ಅಕ್ಷರ ಗಾತ್ರ

ಗದಗ: ‘ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಭವ್ಯ ವ್ಯಕ್ತಿತ್ವವನ್ನು ಶಬ್ದಗಳಲ್ಲಿ ಸಮಗ್ರವಾಗಿ ಹಿಡಿದಿಡುವುದು ಕಷ್ಟಸಾಧ್ಯ’ ಎಂದು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗದಗನ ತೋಂಟದಾರ್ಯ ಮಠದಲ್ಲಿ ಮಂಗಳವಾರ ನಡೆದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿಯವರ ದ್ವಿತೀಯ ಪುಣ್ಯಸ್ಮರಣೆ ‘ಮರಣವೇ ಮಹಾನವಮಿ’ ಆಚರಣೆ ಮತ್ತು ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಿದ್ಧಲಿಂಗ ಶ್ರೀಗಳದ್ದು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ. ಸಮಾಜದ ಸಮಸ್ಯೆಗಳಿಗೆ ಮಠಗಳು ಯಾವ ರೀತಿ ಸ್ಪಂದಿಸಬೇಕು ಎಂಬುದನ್ನು ತೋರಿಸಿಕೊಟ್ಟ ಅವರು, ಜಡವಾಗಿದ್ದಂತಹ ಮಠಗಳು ಮತ್ತು ಸ್ವಾಮೀಜಿಗಳಲ್ಲಿ ಚೈತನ್ಯ ತುಂಬಿದರು. ಪೀಠಾಧಿಪತಿಯಾದವ ಹರಿಯುವ ನೀರಿನಂತೆ ಸದಾಕಾಲ ಚಲನಶೀಲ ಗುಣ ಹೊಂದಿದ್ದರೆ ಮಾತ್ರ ನಿರ್ಮಲ, ಪರಿಶುದ್ಧನಾಗಿರಲು ಸಾಧ್ಯ ಎಂದು ನಂಬಿದ್ದರು. ಈ ಕಾರಣದಿಂದಲೇ ಅವರ ಸಂಪರ್ಕಕ್ಕೆ ಬಂದ ಅನೇಕ ಸ್ವಾಮೀಜಿಗಳು ಚಲನಶೀಲ ಗುಣ ಬೆಳೆಸಿಕೊಂಡರು’ ಎಂದು ಹೇಳಿದರು.

ಮುಂಡರಗಿಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ಸಿದ್ಧಾಂತದ ನೆಲೆಗಟ್ಟಿನ ಮೇಲೆ ಬಹಳ ಗಟ್ಟಿತನದಿಂದ ಉಳಿದಂತಹ ಮಠಾಧೀಶರು ಯಾರಾದರೂ ಇದ್ದರೆ ಅದು ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಮಾತ್ರ. ಗದುಗಿನ ಶ್ರೀಗಳ ನಡೆಯನ್ನು ಪ್ರಶ್ನೆ ಮಾಡುವುದಕ್ಕೆ ಯಾವ ಮಠಾಧೀಶರು, ರಾಜಕಾರಣಿ, ಸಾಹಿತಿಗಳಿಗೂ ಸಾಧ್ಯವಿರಲಿಲ್ಲ. ಮೋಸ, ವಂಚನೆ ಇಲ್ಲದಂತಹ ತೆರೆದ ವ್ಯಕ್ತಿತ್ವದ ಅವರು ಹೃದಯವನ್ನೇ ನಾಲಗೆಯಾಗಿಸಿಕೊಂಡಿದ್ದರು’ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಸ್ವಾಮೀಜಿ, ‘ಎಡ ಕೈಯಲ್ಲಿ ಲಿಂಗ ಹಿಡಿದು, ಬಲ ಕೈಯಲ್ಲಿ ಜಂಗಮ ಸೇವೆ ಮಾಡಿದ ತೋಂಟದ ಶ್ರೀಗಳು ಬಸವ ತತ್ವಗಳನ್ನು ಅಕ್ಷರಶಃ ಜೀವನದುದ್ದಕ್ಕೂ ಅಳವಡಿಸಿಕೊಂಡು ನಡೆದವರು. ಬಸವಣ್ಣನವರ ತತ್ವಗಳಿಗೆ ದಂಡನಾಯಕನಂತೆ ಇದ್ದರು’ ಎಂದು ಹೇಳಿದರು.

ಸಂಡೂರು ಶ್ರೀಗಳು, ‘ಗದುಗಿನ ಗುರು ಅಂದರೆ ಒಂದು ರೀತಿಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ. 40 ವರ್ಷಗಳ ಹಿಂದೆ ಲಿಂಗಾಯತ ಮಠಗಳಲ್ಲಿ ‘ಲಿಂಗ ಧರಿಸದವರಿಗೆ ಪ್ರವೇಶವಿಲ್ಲ’ ಎಂಬ ಫಲಕಗಳನ್ನು ತೂಗುಹಾಕುತ್ತಿದ್ದರು. ಆದರೆ, ಗದುಗಿನ ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ಮಾಡಿದ ಮೊದಲ ಕೆಲಸವೆಂದರೆ ಅಂತಹ ಫಲಕಗಳನ್ನು ಕಿತ್ತೊಗೆದು ಧರ್ಮದ ಬೇಲಿಯನ್ನು ವಿಸ್ತಾರ ಮಾಡಿದರು. ಈ ಮೂಲಕ ಲಿಂಗಾಯತ ಮಠಗಳಿಗೆ ಹೊಸ ದಿಕ್ಕು ತೋರಿಸಿದರು’ ಎಂದು ಹೇಳಿದರು.

‘ರೈತರು ಭೂಮಿಯನ್ನು ಕಳೆದುಕೊಳ್ಳುವ ಪ್ರಸಂಗದೊಳಗೆ ಗುಡುಗು ಹಾಕಿ, ಸರ್ಕಾರವೇ ಮಠದ ಬಾಗಿಲಿಗೆ ಬಂದು ನಿಲ್ಲುವಂತೆ ಮಾಡಿದ್ದು ತೋಂಟದ ಶ್ರೀಗಳು. ಅವರು ಆಶೀರ್ವಚನ ನೀಡುತ್ತಾರೆ ಅಂದರೆ, ಸಿಂದಗಿ ಬಜಾರ್‌ ಬಂದ್‌ ಆಗುತ್ತಿತ್ತು’ ಎಂದು ಶ್ರೀಗಳು ನೆನಪಿಸಿಕೊಂಡರು.

ತೋಂಟದಾರ್ಯ ಮಠದ ಗುರುಬಸವ ಸ್ವಾಮೀಜಿ ಅವರು ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಉಪಯೋಗಿಸಿದಂತಹ ಪರಿಕರಗಳನ್ನು ಸಂಗ್ರಹಿಸಿ, ಪ್ರದರ್ಶನ ಏರ್ಪಡಿಸಿದ್ದರು. ಮಠದ ಆಡಳಿತಾಧಿಕಾರಿ ಎಸ್‌.ಎಸ್‌.ಪಟ್ಟಣಶೆಟ್ಟಿ ಅವುಗಳನ್ನು ಒಟ್ಟುಗೂಡಿಸಿ ವಸ್ತುಸಂಗ್ರಹಾಲಯ ಮಾಡುವ ಆಶಯ ವ್ಯಕ್ತಪಡಿಸಿದರು.

ಭೈರನಹಟ್ಟಿಯ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಅರಸಿಕೇರಿ, ಗುಳೇದಗುಡ್ಡ, ಬಸವಬೆಳವಿ, ಯಶವಂತ ನಗರ, ರಟಗಲ್ಲ, ಬಸವಕಲ್ಯಾಣ ಶ್ರೀಗಳು ಹಾಗೂ ದೆಹಲಿ ಮಹಾಂತ ದೇವರು ಇದ್ದರು.

ರೇವಣಸಿದ್ಧಯ್ಯ ಮರಿದೇವರ ಮಠ ಹಾಗೂ ಮೃತ್ಯುಂಜಯ ಹಿರೇಮಠ ಸಂಗೀತ ಪ್ರಸ್ತುತಪಡಿಸಿದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

ಐದು ಪುಸ್ತಕಗಳ ಲೋಕಾರ್ಪಣೆ

ಡಾ.ಸೋಮನಾಥ ಯಾಳವಾರ ಬರೆದ ‘ಕಲ್ಯಾಣ ಬಂಧು ತೋಂಟದ ಸಿಂಧು’, ಡಾ.ಬಾಲಚಂದ್ರ ಜಯಶೆಟ್ಟಿ ವಿರಚಿತ ‘ಪವಾಡವಲ್ಲದ ಪವಾಡಪುರುಷ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು’, ಪತ್ರಕರ್ತ ಎಲ್.ಎಸ್.ಶಾಸ್ತ್ರೀ ಅವರು ಬರೆದ ‘ವಿಶ್ವವಂದ್ಯ ಬಸವೇಶ್ವರರು’ ಹಾಗೂ ಶಿವನಗೌಡ ಗೌಡರ ಸಂಗ್ರಹಿಸಿದ, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಸಂದರ್ಶನಗಳನ್ನು ಒಳಗೊಂಡ ‘ತೋಂಟದ ಶ್ರೀಗಳ ದರ್ಶನ; ಸಂದರ್ಶನ’ ಮತ್ತು ‘ತೋಂಟದ ಶ್ರೀಗಳ ಚಿಂತನೆಗಳು’ ಪುಸ್ತಕಗಳು ಲೋಕಾರ್ಪಣೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT