ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಹಿತ ಕಾಯ್ದ ನಾಗನೂರು ಮಠ: ಸಿದ್ಧರಾಮ ಸ್ವಾಮೀಜಿ ಅಭಿಮತ

ಶಿವಾನುಭವ ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಮತ
Last Updated 4 ನವೆಂಬರ್ 2020, 1:46 IST
ಅಕ್ಷರ ಗಾತ್ರ

ಗದಗ: ‘ಬೆಳಗಾವಿ ಗಡಿ ಭಾಗದಲ್ಲಿ ಸ್ವಾತಂತ್ರ್ಯ ಚಳವಳಿ ಮೂಲಕ ರಾಷ್ಟ್ರೀಯ ಪ್ರಜ್ಞೆ ಮತ್ತು ಕರ್ನಾಟಕ ಏಕೀಕರಣ ಚಳವಳಿ ಮೂಲಕ ಕನ್ನಡದ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ನಾಗನೂರು ಮಠದ ಶಿವಬಸವ ಸ್ವಾಮೀಜಿ ಅವರ ಪ್ರಯತ್ನ ಐತಿಹಾಸಿಕವಾದುದು’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಲು ಮತ್ತು ಮರಾಠಿ ಭಾಷಿಕ ಪ್ರದೇಶದಲ್ಲಿ ಕನ್ನಡ ಅಸ್ಮಿತೆ ಪ್ರಬಲಗೊಳಿಸಲು ಅವರು ಮಾಡಿದ ಹೋರಾಟ ಅವಿಸ್ಮರಣೀಯ. ಮರಾಠಿ ಭಾಷಿಕರ ಪುಂಡಾಟಕ್ಕೆ ಜಗ್ಗದೇ ಕನ್ನಡ ಸಂಸ್ಕೃತಿಯ ಉಳಿವಿಗೆ ನಾಗನೂರು ಮಠದ ಕೊಡುಗೆ ಅಪಾರವಾದುದು. ಅನ್ನ ದಾಸೋಹದ ಮೂಲಕ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಿ ಕನ್ನಡಿಗರಲ್ಲಿ ಸ್ವಾಭಿಮಾನ ಬೆಳೆಸಿದ ಕೀರ್ತಿ ಶಿವಬಸವ ಸ್ವಾಮಿಗಳದ್ದಾಗಿದೆ ಎಂದು ತಿಳಿಸಿದರು.

ನಾಗನೂರು ರುದ್ರಾಕ್ಷಿಮಠದ ಕೊಡುಗೆ ಕುರಿತು ಉಪನ್ಯಾಸ ನೀಡಿದ ಡಾ. ರಾಮಕೃಷ್ಣ ಮರಾಠೆ, ‘1932ರಲ್ಲಿ ಪ್ರಸಾದ ನಿಲಯ ಸ್ಥಾಪಿಸಿ ಸ್ವಾತಂತ್ರ್ಯ ಚಳವಳಿಯ ಹೋರಾಟಗಾರರಿಗೆ ಅನ್ನ, ಆಶ್ರಯವನ್ನು ಕಲ್ಪಿಸುವ ಮೂಲಕ ಸಹಾಯ ಮಾಡಿದರು. ಇದಕ್ಕಾಗಿ ಬ್ರಿಟಿಷ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಸ್ವಾಮಿಗಳು ಕೂಡ ಭೂಗತರಾಗುವ ಸಂದರ್ಭ ಸೃಷ್ಟಿಯಾಯಿತು’ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಬಿ.ಎಫ್.ದಂಡಿನ ಮತ್ತು ರಾಮಣ್ಣ ಬ್ಯಾಟಿ ಮಾತನಾಡಿದರು. ಪ್ರಸನ್ನಗೌಡ ಪಾಟೀಲ, ಅಕ್ಕಮಹಾದೇವಿ ಪಾಟೀಲ, ಬಸಪ್ಪ ಅಮೃತಪ್ಪ ಪಲ್ಲೇದ, ಶಕುಂತಲಾ ದಂಡಿನ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಎಂ.ಸಿ.ಐಲಿ, ಗೌರಕ್ಕ ಬಡಿಗಣ್ಣವರ, ವೀರಣ್ಣ ಗೊಡಚಿ, ವಿಜಯಕುಮಾರ ಹಿರೇಮಠ, ಶಶಿಧರ ಬೀರನೂರ, ಪ್ರಭು ಗಂಜಿಹಾಳ, ರತ್ನಕ್ಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT