ಮಂಗಳವಾರ, ಜೂನ್ 28, 2022
25 °C
ಜೂ 7ರ ತನಕ ಕಠಿಣ ಲಾಕ್‌ಡೌನ್‌: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿಕೆ

ಬಿಗಿ ಕ್ರಮದಿಂದ ಸೋಂಕು ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಗುಂದ: ಜಿಲ್ಲೆಯಲ್ಲಿ ಐದು ದಿನ ವಿಶೇಷ ಬಿಗಿ ಲಾಕ್‌ಡೌನ್ ಮಾಡಿದ್ದರಿಂದ ಕೋವಿಡ್‌ ಸೋಂಕಿತರ ಸಂಖ್ಯೆ ಕಡಿಮೆಯಾಗಿವೆ. ಆದ್ದರಿಂದ ಎಲ್ಲರೂ ಕಟ್ಟುನಿಟ್ಟಾಗಿ ಲಾಕಡೌನ್ ನಿಯಮ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಮಂಗಳವಾರ ಪಟ್ಟಣದ ಭಾಸ್ಕರರಾವ್ ಭಾವೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕರ ₹17.50 ಲಕ್ಷ ಅನುದಾನದಲ್ಲಿ 23 ಆಮ್ಲಜನಕ ಸಾಂದ್ರಕ ಹಾಗೂ 137 ಪಲ್ಸ್ ಆಕ್ಸಿಮೀಟರ್‌ಗಳನ್ನು ಕೋವಿಡ್ ಸೋಕಿತರ ಹಸ್ತಾಂತರಿಸಿ ಮಾತನಾಡಿದರು.

’ಸೋಂಕಿನ ಪ್ರಮಾಣ ಕಡಿಮೆ ಮಾಡಲು ರಾಜ್ಯ ಸರ್ಕಾರ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸರ್ಕಾರದ ಜತೆಗೆ ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರು, ಪೊಲೀಸರು, ಪುರಸಭೆ, ಪಂಚಾಯ್ತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಚರ್ಚಿಸಿ ಮಂಗಳವಾರ, ಬುಧವಾರ ದಿನಸಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಮತ್ತೆ ಜೂನ್ 7ರ ವರೆಗೆ ಕಠಿಣ ಲಾಕ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ‘ ಎಂದರು.

‘ದಾನಿಗಳ ನೆರವಿನಿಂದ ಇನ್ನು 30 ಆಮ್ಲಜನಕ ಸಾಂದ್ರಕ ಆಸ್ಪತ್ರೆಗೆ ಬರಲಿವೆ. ಆಸ್ಪತ್ರೆ ಆವರಣದಲ್ಲಿ 390ಎಲ್.ಪಿ.ಎಂ ಆಮ್ಲಜನಕ ಘಟಕ ನಿರ್ಮಾಣ ಕಾಮಗಾರಿ ನಡೆದಿದೆ. ಈ ಘಟಕದಿಂದ 150 ಜನಕ್ಕೆ ಆಕ್ಸಿಜನ್ ನೀಡಲು ಸಾಧ್ಯವಿದೆ. ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ 250 ಹಾಸಿಗೆ ಸೌಲಭ್ಯ ಕಲ್ಪಿಸಲಾಗುವುದು‘ ಎಂದು ತಿಳಿಸಿದರು.

’ಖನಿಜ ಇಲಾಖೆಯಿಂದ ₹15ಲಕ್ಷ ಸಹಾಯಧನ ಕೇಳಲಾಗಿದೆ. ಇದಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಣದಿಂದ ಆಸ್ಪತ್ರೆಗೆ ಸಲಕರಣೆ ಖರೀದಿ ಮಾಡಲಾಗುವುದು. ಶಾಸಕರ ಅನುದಾನದಲ್ಲಿ ನರಗುಂದ ಆಸ್ಪತ್ರೆಗೆ ₹20 ಲಕ್ಷ, ಜಿಲ್ಲಾ ಆಸ್ಪತ್ರೆಗೆ ₹15 ಲಕ್ಷ ನೀಡಲಾಗುವುದು‘ ಎಂದು ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಸದಸ್ಯರಾದ ಸುನೀಲ ಕುಷ್ಟಗಿ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಬಿ.ಬಿ.ಐನಾಪೂರ, ಅಜ್ಜಪ್ಪ ಹುಡೇದ, ಚಂದ್ರು ದಂಡಿನ, ಬಸು ಪಾಟೀಲ, ಪವಾಡೆಪ್ಪ ವಡ್ಡಗೇರಿ, ಮಂಜು ಮೆಣಸಗಿ, ಕಿರಣ ಮುಧೋಳೆ, ಅನೀಲ ಧರಿಯಣ್ಣವರ, ಹುಸೇನಸಾಬ ನವಲೆ, ಡಾ.ಪ್ರವೀಣ ಮೇಟಿ, ಡಾ.ಜಡೇಶ ಭದ್ರಗೌಡ, ಎಂ.ಸಿ.ಹಿರೇಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.