ಸೋಮವಾರ, ಜನವರಿ 20, 2020
20 °C
ಸನ್ಮಾರ್ಗ ಪಿಯು ಕಾಲೇಜಿನ ವಿದ್ಯಾರ್ಥಿನಿ; ರಾಷ್ಟ್ರಮಟ್ಟದ ಕ್ರೀಡಾಪಟು

ಕರಾಟೆಯಲ್ಲಿ ಭರವಸೆ ಮಿಂಚು ‘ದೀಪಾ’

ಚಂದ್ರು ಎಂ. ರಾಥೋಡ್ Updated:

ಅಕ್ಷರ ಗಾತ್ರ : | |

Prajavani

ನರೇಗಲ್‌: ಶಿಕ್ಷಣದ ಜತೆ ಆತ್ಮರಕ್ಷಣೆ ಕಲೆ ಕರಾಟೆಗೂ ಹೆಚ್ಚಿನ ಮಹತ್ವ ನೀಡಿ, ಈ ಕ್ಷೇತ್ರದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಾನು ಕಲಿತ ಕಾಲೇಜಿನ ಹೆಸರನ್ನು ಎತ್ತಿ ಹಿಡಿದಿದ್ದಾರೆ ಗದುಗಿನ ಸನ್ಮಾರ್ಗ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಾ ಹೂಗಾರ. 

ಆರನೆಯ ತರಗತಿಯಲ್ಲಿರುವಾಗಲೇ, ಕರಾಟೆಯತ್ತ ಆಕರ್ಷಿತರಾದ ದೀಪಾ ಈಗ ಈ ಕ್ರೀಡೆಯನ್ನೇ ಉಸಿರಾಗಿಸಿಕೊಂಡಿದ್ದಾಳೆ. 2018–19ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಅದೇ ವರ್ಷ ಅಸ್ಸಾಂನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಗದುಗಿನಲ್ಲಿ ನಡೆದ ಜಿಲ್ಲಾಮಟ್ಟದ ಪಿಯು ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯಲ್ಲಿ ಸತತ ಎರಡು ವರ್ಷ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 2018ರಲ್ಲಿ ಬೆಳಗಾವಿಯ ಅಥಣಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ, 2019ರಲ್ಲಿ ಮುರುಡೇಶ್ವರದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದರು. ಇತ್ತೀಚೆಗೆ ಹುಬ್ಬಳಿಯಲ್ಲಿ ನಡೆದ ಖಾಸಗಿ ಕರಾಟೆ ಚಾಂಪಿಯನ್‌ಶಿಪ್‌ನಲ್ಲೂ ಮಿಂಚಿನ ಪ್ರದರ್ಶನದ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.

ದೀಪಾ ಅವರ ತಂದೆ ನಿಂಗಪ್ಪ ಹೂಗಾರ ಬಿಎಸ್ಎಫ್‌ ಯೋಧರು. ಕ್ರೀಡಾ ಕೋಟಾದಡಿ ಭಾರತೀಯ ವಾಯುಸೇನೆ ಸೇರಿ, ತಂದೆಯಂತೆ ದೇಶಕ್ಕಾಗಿ ಸೇವೆ ಸಲ್ಲಿಸುವ ಗುರಿಯನ್ನು ದೀಪಾ ಕೂಡ ಹೊಂದಿದ್ದಾರೆ. ಗದುಗಿನ ಮುಷ್ಠಿ ಕರಾಟೆ ಫೌಂಡೇಶನ್‌ನ ಬಸವರಾಜ ಹೊಂಬಾಳೆ ಅವರ ಬಳಿ ಸದ್ಯ ದೀಪಾ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

‘ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳಿಗೂ ಸನ್ಮಾರ್ಗ ಕಾಲೇಜು ಪ್ರೋತ್ಸಾಹ ನೀಡುತ್ತಿದೆ. ದೀಪಾ ಕರಾಟೆಯಲ್ಲಿ ಹೊಸ ಭರವಸೆ ಮೂಡಿಸುತ್ತಿದ್ದಾರೆ’ ಎಂದು ಪ್ರಾಚಾರ್ಯ ಉಡುಪಿ ದೇಶಪಾಂಡೆ ಹೇಳಿದರು.

‘ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಮಗಳ ಸಾಧನೆಗೆ ಬೆನ್ನೆಲುಬಾಗಿ ನಿಂತು ಕಲಿಸುತ್ತೇವೆ‘ ಎನ್ನುತ್ತಾರೆ ದೀಪಾ ಅವರ ಪೋಷಕರು. ‘ಎಲ್ಲರ ನಂಬಿಕೆ ಉಳಿಸುವಂತೆ ಸಾಧನೆ ಮಾಡಲು ಕರಾಟೆಯೇ ಆತ್ಮಶಕ್ತಿ ನೀಡಿದೆ’ ಎನ್ನುವುದು ದೀಪಾ ಅವರ ಆತ್ಮವಿಶ್ವಾಸದ ಮಾತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು