ಹಾಂಗ್‌ಝೌ: ಭಾರತದ ನವೊರೆಮ್ ರೊಶಿಬಿನಾ ದೇವಿ ಅವರು ಏಷ್ಯನ್ ಕ್ರೀಡಾಕೂಟದ ವುಶು ಸ್ಪರ್ಧೆಯ ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಸೋಮವಾರ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.
ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಕಜಕಸ್ತಾನದ ಯಿಮನ್ ಕರ್ಶಿಗಾ ಅವರನ್ನು ಪಾಯಿಂಟ್‌ಗಳ ಆಧಾರದಲ್ಲಿ ಸೋಲಿಸಿದರು. ರೊಶಿಬಿನಾ ದೇವಿ ಅವರು ಈ ಹಿಂದಿನ ಜಕಾರ್ತಾ ಕ್ರೀಡೆಗಳಲ್ಲಿ ಇದೇ ತೂಕ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು.
ಪುರುಷರ 60 ಕೆ.ಜಿ. ಸಾಂಡ ವಿಭಾಗದಲ್ಲಿ ಸೂರ್ಯಭಾನು ಪ್ರತಾಪ್ ಸಿಂಗ್ ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಇಸ್ಲೊಮ್‌ಬೆಕ್ ಖಾಯ್ದರೊವ್ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು. ಮೂರು ಸುತ್ತುಗಳಲ್ಲಿ ಅವರು 2–1 ರಿಂದ ಜಯಗಳಿಸಿದರು. ಪ್ರತಾಪ್ ಸಹ 2019ರ ಕ್ರೀಡೆಗಳಲ್ಲಿ ಕಂಚಿನ ಪದಕ ಗಳಿಸಿದ್ದರು. 2016ರ ದಕ್ಷಿಣ ಏಷ್ಯಾ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
ದಿನದ ಅಂತಿಮ ಸೆಣಸಾಟವಾದ 65 ಕೆ.ಜಿ. ವಿಭಾಗದಲ್ಲಿ ವಿಕ್ರಮ್ ಬಲಿಯಾನ್, ಇಂಡೊನೇಷ್ಯಾದ ಸಾಮ್ಯುಯೆಲ್ ಮಾರ್ಬನ್ ಅವರಿಗೆ 1–2 ರಲ್ಲಿ ಮಣಿದರು. ಬಲಿಯಾನ್ 2019ರ ವಿಶ್ವ ವುಶು ಚಾಂಪಿಯನ್‌ಷಿಪ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ಅದೇ ವರ್ಷ ದಕ್ಷಿಣ ಏಷ್ಯಾ ಕ್ರೀಡೆಗಳಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದರು.