ಗುರುವಾರ , ಮಾರ್ಚ್ 23, 2023
30 °C
ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸಲಹೆ

ಗ್ರಾಮದ ಏಳಿಗೆಗೆ ಶ್ರಮಿಸಿ: ಎಂ. ಸುಂದರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕಂದಾಯ ಇಲಾಖೆಯ ಪಾತ್ರ ಪ್ರಮುಖ. ಗ್ರಾಮ ಮತ್ತು ತಾಲ್ಲೂಕು ಮಟ್ಟದಲ್ಲಿ ಇಲಾಖೆಯ ಆಧಾರಸ್ತಂಭವಾಗಿರುವ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯ ಪ್ರಶಂಶನೀಯ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹೇಳಿದರು.

ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಕಂದಾಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕೋವಿಡ್–19 ಕಾರಣದಿಂದಾಗಿ ಕಂದಾಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸರ್ಕಾರದ ಮುಖ್ಯ ಇಲಾಖೆಯಾಗಿರುವ ಕಂದಾಯ ಇಲಾಖೆಗೆ ಅಭಿನಂದನೆ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ’ ಎಂದು ಹೇಳಿದರು.

‘ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಾಧಿಕಾರಿಯಾದಿಯಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಇಲಾಖೆಯ ಉದ್ಯೋಗಿಗಳಿಗೆ ಆರೋಗ್ಯ ಶಿಬಿರ ಆಯೋಜಿಸುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.

‘ಜನರ ಜನನದಿಂದ ಮರಣದವರೆಗೂ ಕಂದಾಯ ಇಲಾಖೆಯ ಪಾತ್ರ ಬಹುಮುಖ್ಯವಾಗಿದೆ. ಜಿಲ್ಲೆಯ ಸಕಲ ಏಳಿಗೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಗ್ರಾಮದ ಏಳಿಗೆಗೆ ಶ್ರಮಿಸುವ ಗ್ರಾಮ ಸಹಾಯಕರು ಇಲಾಖೆಯ ಪ್ರಮುಖ ಭಾಗವಾಗಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಸಹಾಯಕರಿಗೆ ಗುರುತಿನ ಚೀಟಿ ನೀಡಲಾಯಿತು. ರೋಣ ಮತ್ತು ಗಜೇಂದ್ರಗಡ ತಾಲ್ಲೂಕಿನ ಗ್ರಾಮ ಸಹಾಯಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗೆ ಆರೋಗ್ಯ ಕಿಟ್ ಮತ್ತು ದಿನಸಿ ಕಿಟ್ ವಿತರಿಸಲಾಯಿತು. ಜಿಲ್ಲೆಯ ಎಲ್ಲಾ ಗ್ರಾಮ ಸಹಾಯಕರಿಗೆ ಮತ್ತು ಗ್ರಾಮಲೆಕ್ಕಾಧಿಕಾರಿಗಳಿಗೆ ಹಂತ ಹಂತವಾಗಿ ಕಿಟ್‌ಗಳನ್ನು ವಿತರಿಸಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ್‌ಗಳಾದ ಕುಮಾರ್ ಅಣ್ಣಿಗೇರಿ, ಅಶೋಕ ಕಲಘಟಗಿ, ಜೆ.ಬಿ.ಜಕ್ಕನಗೌಡ್ರ, ಜಯಲಕ್ಷ್ಮೀ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮ ಸಹಾಯಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು