ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ ಸರ್ಕಾರಿ ಪಿಯು ಕಾಲೇಜು: ಬೇಡಿಕೆಗೆ ತಕ್ಕಂತೆ ಹೆಚ್ಚುವುದೇ ಸೌಲಭ್ಯ?

Published 27 ಮೇ 2024, 4:50 IST
Last Updated 27 ಮೇ 2024, 4:50 IST
ಅಕ್ಷರ ಗಾತ್ರ

ನರಗುಂದ: ಅರ್ಧ ಶತಮಾನಕ್ಕೂ ಹಳೆಯದಾದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ತಾಲ್ಲೂಕಿನಲ್ಲಿ ಬನಹಟ್ಟಿ, ಚಿಕ್ಕನರಗುಂದ ಸೇರಿ ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಿಗೆ ಮೂಲಸೌಲಭ್ಯಗಳ ಕೊರತೆ ಜತೆಗೆ; ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದಾರೆ. 

ನರಗುಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪದವಿ ಕಾಲೇಜಿನಿಂದ ಬೇರ್ಪಟ್ಟು ಮೂರು ದಶಕಗಳು ಕಳೆದಿವೆ. ಇಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿವೆ. ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಪಟ್ಟಣದಲ್ಲಿ ಇದೊಂದೇ ವಿಜ್ಞಾನ ವಿಭಾಗ ಇರುವ ಕಾಲೇಜು. ಆದರೆ, ಇಲ್ಲಿ ಜೀವಶಾಸ್ತ್ರ ಉಪನ್ಯಾಸಕರೊಬ್ಬರೇ ಕಾಯಂ ಇದ್ದು, ಐದಾರು ವರ್ಷಗಳಿಂದ ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದಾರೆ.

ಇಲ್ಲಿ ಸುಸಜ್ಜಿತ ಪ್ರಯೋಗಾಲಯಗಳಿವೆ. ಈಚೆಗಷ್ಟೇ ವಿಜ್ಞಾನ ವಿಭಾಗ ಬಲಪಡಿಸಲು ಆದರ್ಶ ಯಾಜನೆಯಡಿ ಉನ್ನತೀಕರಿಸಿದ ವಿಜ್ಞಾನ ವಿಭಾಗವಾಗಿದೆ. ಕಳೆದ ವರ್ಷ 186 ವಿದ್ಯಾರ್ಥಿಗಳು ವಿಭಾಗದಲ್ಲಿದ್ದರು. ದ್ವಿತೀಯ ವರ್ಷದ ಪಿಯುಸಿ ಫಲಿತಾಂಶ ಶೇ 90ರಷ್ಟಾಗಿದೆ. ಈ ವರ್ಷವೂ 125ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಆದ್ದರಿಂದ ವಿಜ್ಞಾನ ವಿಭಾಗಕ್ಕೆ ಕಾಯಂ ಉಪನ್ಯಾಸಕರನ್ನು ನೀಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

ಕಲಾ, ವಾಣಿಜ್ಯ ವಿಭಾಗ ಸೇರಿದಂತೆ ಒಟ್ಟು 858 ವಿದ್ಯಾರ್ಥಿಗಳು (ಕಳೆದ ಶೈಕ್ಷಣಿಕ ವರ್ಷ) ಅಭ್ಯಾಸ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ತಕ್ಕಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇಲ್ಲ. ಇದರಿಂದ ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ ಕಾಲೇಜು ತೊಂದರೆ ಅನುಭವಿಸುವಂತಾಗಿದೆ.

500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿಗೆ ಪ್ರಾಚಾರ್ಯ, ಅಧೀಕ್ಷಕ, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಹಾಗೂ ಪೂರ್ಣಕಾಲಿಕ ಜವಾನರಿರಬೇಕು. ಆದರೆ ಇಲ್ಲಿರುವುದು ದ್ವಿತೀಯ ದರ್ಜೆ ಸಹಾಯಕ ಮಾತ್ರ. ಬೋಧಕ ಸಿಬ್ಬಂದಿಯವರಲ್ಲಿ 16 ಜನ ಕಾಯಂ ಉಪನ್ಯಾಸಕರು ಇರಬೇಕು. ಇದರಲ್ಲಿ 7 ಜನ ಮಾತ್ರ ಕಾಯಂ ಉಪನ್ಯಾಸಕರು. ಉಳಿದವರೆಲ್ಲರೂ ಅತಿಥಿ ಬೋಧಕರೇ.

ಇಲ್ಲಿ ಎಲ್ಲ ವಿಭಾಗಕ್ಕೆ ಅಗತ್ಯವಿರುವ ಇಂಗ್ಲಿಷ್ ಉಪನ್ಯಾಸಕರೇ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆ ಮತ್ತಷ್ಟು ಕಠಿಣವಾಗಿದೆ.

ವಾಣಿಜ್ಯ ವಿಭಾಗದಲ್ಲಂತೂ ದಶಕದಿಂದ ವಾಣಿಜ್ಯ ಉಪನ್ಯಾಸಕರೇ ಇಲ್ಲ. ಜೊತೆಗೆ ಸಮಾಜಶಾಸ್ತ್ರ ಉಪನ್ಯಾಸಕರೇ ಪ್ರಭಾರ ಪ್ರಾಚಾರ್ಯರಾಗಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಕಟ್ಟಡ ಸುಸಜ್ಜಿತವಾಗಿದೆ. ಕೊಠಡಿಗಳು ಕಲಿಕೆಗೆ ಪೂರಕವಾಗಿವೆ. ಆದರೆ ಪ್ರಯೋಗಾಲಯಕ್ಕೆ ಅಟೆಂಡರ್‌ಗಳೇ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಗುಡ್ಡದ ಓರೆಗೆ ಹೊಂದಿಕೊಂಡಿರುವ ಕಾಲೇಜಿಗೆ ಕಾಂಪೌಂಡ್‌ ಕೂಡ ಇಲ್ಲ. ಗೇಟ್ ಇಲ್ಲ. ಇದರಿಂದ ಕಾಲೇಜು ಕಟ್ಟಡಕ್ಕೆ ಸುರಕ್ಷತೆ ಇಲ್ಲದಂತಾಗಿದೆ.

ಮುಖ್ಯ ರಸ್ತೆಯಿಂದ ಕಾಲೇಜಿಗೆ ತೆರಳಲು 200 ಮೀಟರ್‌ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ತೊಂದರೆ ಪಡುವಂತಾಗಿದೆ. ದೊಡ್ಡ ಕಾಲೇಜು ಆದರೂ ಗ್ರಂಥಾಲಯವಿಲ್ಲ.

ಈ ವರ್ಷ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಜೊತೆ ಕಂಪ್ಯೂಟರ್ ಸೈನ್ಸ್ ವಿಷಯ ಸೇರ್ಪಡೆಯಾಗಿದೆ. ಇದರಿಂದ ರೋಣ, ಸವದತ್ತಿ, ಬಾದಾಮಿ, ನವಲಗುಂದ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಲು ದುಂಬಾಲು ಬಿದ್ದಿದ್ದಾರೆ. ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ತಾಲ್ಲೂಕಿನ ಏಕೈಕ ದೊಡ್ಡ ಕಾಲೇಜಾಗಿರುವ ಪಟ್ಟಣದ ಸರ್ಕಾರಿ ಕಾಲೇಜಿಗೆ ಅಗತ್ಯ ಸೌಲಭ್ಯ ಒದಗಿಸಿ, ಪೂರ್ಣಕಾಲಿಕ ಬೋಧಕ, ಬೋಧಕೇತರ ಸಿಬ್ಬಂದಿ ಒದಗಿಸುವಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಬೇಕಿದೆ ಎಂಬುದು ಸ್ಥಳೀಯರ ಆಗ್ರಹ.

ನರಗುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳುವ ರಸ್ತೆ ಹಾಳಾಗಿರುವ ದೃಶ್ಯ
ನರಗುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳುವ ರಸ್ತೆ ಹಾಳಾಗಿರುವ ದೃಶ್ಯ
ನರಗುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳುವ ರಸ್ತೆ ಹಾಳಾಗಿರುವ ದೃಶ್ಯ
ನರಗುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳುವ ರಸ್ತೆ ಹಾಳಾಗಿರುವ ದೃಶ್ಯ

ಚಿಕ್ಕನರಗುಂದ ಬನಹಟ್ಟಿ ಕಾಲೇಜಿಗೂ ಬೇಕಿದೆ ಸೌಲಭ್ಯ

ತಾಲ್ಲೂಕಿನ ಚಿಕ್ಕನರಗುಂದದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲಾ ಹಾಗೂ ವಿಜ್ಞಾನ ವಿಭಾಗಗಳನ್ನು ಹೊಂದಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇಲ್ಲಿಯೂ ವಿಜ್ಞಾನ ವಿಭಾಗಕ್ಕೆ ಬೇಡಿಕೆ ಇದೆ. ಭೌತಶಾಸ್ತ್ರ ಉಪನ್ಯಾಸಕರು ಮಾತ್ರ ಇದ್ದಾರೆ. ಉಳಿದಂತೆ ಅತಿಥಿ ಉಪನ್ಯಾಸಕರೇ ಆಧಾರ. ಕಟ್ಟಡದ ಕೊರತೆಯಿಂದ ವಿಜ್ಞಾನ ಪ್ರಯೋಗಾಲಯಗಳಿಗೆ ಪ್ರತ್ಯೇಕ ಕೋಣೆಗಳಿಲ್ಲ.

ಕೇವಲ ನಾಲ್ಕು ಕೋಣೆಗಳಲ್ಲಿ ಕಚೇರಿ ಸೇರಿದಂತೆ ಎರಡು ವಿಭಾಗಗಳ ತರಗತಿಗಳು ನಡೆಯಬೇಕಿದೆ. ಪ್ರೌಢಶಾಲಾ ಕೋಣೆ ಎರವಲು ಪಡೆಯಬೇಕಿದೆ. ಕೆಪಿಎಸ್ ಶಾಲೆಯಾದರೂ ಹೊಸ ಕಟ್ಟಡ ನಿರ್ಮಾಣ ಆಗುವವರೆಗೂ ಇಲ್ಲಿ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ.

ಕಲಾ ವಿಭಾಗದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರೊಬ್ಬರೇ ಇದ್ದು ಉಳಿದಂತೆ ಅತಿಥಿ ಬೋಧಕರೇ ಆಧಾರವಾಗಿದ್ದಾರೆ. ತಾಲ್ಲೂಕಿನ ಬನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲಾ ಹಾಗೂ ವಾಣಿಜ್ಯ ವಿಭಾಗಗಳನ್ನು ಹೊಂದಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಎರಡು ವಿಭಾಗ ಸೇರಿ ಕೇವಲ 63 ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿ ಹೆಚ್ಚಿನ ಪೂರ್ಣಕಾಲಿಕ ಉಪನ್ಯಾಸಕರಿದ್ದರೂ ವಿದ್ಯಾರ್ಥಿಗಳ ಕೊರತೆ ಕಾಡುತ್ತಿದೆ.

ನಮ್ಮ ಕಾಲೇಜು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಆದರೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆ ಇದೆ. ಇದಕ್ಕಾಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಈಚೆಗೆ ವಿಜ್ಞಾನ ವಿಭಾಗ ಬಲಪಡಿಸಲು ಆದರ್ಶ ಯೋಜನೆಗೆ ಆಯ್ಕೆಯಾದ ಜಿಲ್ಲೆಯ ಐದು ಕಾಲೇಜುಗಳಲ್ಲಿ ನಮ್ಮದು ಒಂದು –ಸಿ.ಎಸ್. ಸುಳ್ಭದ ಪ್ರಭಾರಿ ಪ್ರಾಚಾರ್ಯರು ಸರ್ಕಾರಿ ಪದವಿ ಪೂರ್ವ ಕಾಲೇಜು ನರಗುಂದ ಕಟ್ಟಡದ ಕೊರತೆ ಇದ್ದು ಇಬ್ಬರು ಕಾಯಂ ಉಪನ್ಯಾಸಕರು ಇದ್ದಾರೆ. ಕಟ್ಟಡ ಹಾಗೂ ಪೂರ್ಣಕಾಲಿಕ ಬೋಧಕ ಸಿಬ್ಬಂದಿಗಾಗಿ ಪದವಿಪೂರ್ವಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ–ಎಸ್.ವಿ.ದಂಡನಾಯ್ಕರ ಪ್ರಭಾರ ಪ್ರಾಚಾರ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಚಿಕ್ಕ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT