ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬತ್ತಿದ ತುಂಗಭದ್ರಾ ನದಿ: ದೇವರಿಗೆ ಟ್ಯಾಂಕರ್ ನೀರಿನ ‘ಗಂಗಾಪೂಜೆ’

ಬತ್ತಿದ ತುಂಗಭದ್ರಾ ನದಿ: ಊರುಗಳಿಂದಲೇ ನೀರು ತರುತ್ತಿರುವ ಭಕ್ತರು
ಲಕ್ಷ್ಮಣ ಎಚ್. ದೊಡ್ಡಮನಿ
Published 9 ಏಪ್ರಿಲ್ 2024, 6:40 IST
Last Updated 9 ಏಪ್ರಿಲ್ 2024, 6:40 IST
ಅಕ್ಷರ ಗಾತ್ರ

ಡಂಬಳ (ಗದಗ ಜಿಲ್ಲೆ): ಯುಗಾದಿ ಮತ್ತು ಜಾತ್ರಾಮಹೋತ್ಸವದ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಭಕ್ತರು ತುಂಗಭದ್ರಾ ನದಿಗೆ ಬಂದು ದೇವರಿಗೆ ಗಂಗಾಪೂಜೆ ಮಾಡಿಸುತ್ತಾರೆ. ಆದರೆ, ಈ ವರ್ಷ ನದಿಯಲ್ಲಿ ನೀರಿಲ್ಲದ ಕಾರಣ ಭಕ್ತರು ಸ್ವಗ್ರಾಮದಿಂದಲೇ ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಿಕೊಂಡು ಹೋಗಿ ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದಾರೆ.

ಗದಗ ತಾಲ್ಲೂಕು, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲ್ಲೂಕುಗಳ ಗ್ರಾಮಸ್ಥರು ಪಲ್ಲಕ್ಕಿಯಲ್ಲಿ ಪಾಲಕಿಯಲ್ಲಿ ದೇವರನ್ನು ಕೂರಿಸಿಕೊಂಡು ಕಾಲ್ನಡಿಗೆಯಲ್ಲಿ ತುಂಗಭದ್ರಾ ನದಿಗೆ ಹೋಗಿ, ನೀರಿನಲ್ಲಿ ದೇವರಿಗೆ ಗಂಗಾಪೂಜೆ ಮಾಡಿಸುತ್ತಿದ್ದರು. ಅಲ್ಲಿಯೇ ತಿಂಡಿ, ಪ್ರಸಾದ ಸಿದ್ಧಪಡಿಸಿ ವಿತರಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ಆದರೆ, ಈ ವರ್ಷ ಭೀಕರ ಬಿಸಿಲಿಗೆ ತಾಪಕ್ಕೆ ಜನ, ಜಾನುವಾರು ತತ್ತರಿಸಿವೆ. ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ತುಂಗಭದ್ರೆಯ ಒಡಲು ಆಟದ ಮೈದಾನದಂತೆ ಕಾಣುತ್ತಿದೆ.

‘ನಮ್ಮ ಗ್ರಾಮದ ಕೆಂಚಮ್ಮದೇವಿ ಮತ್ತು ಮಾಯಮ್ಮದೇವಿ ಮೂರ್ತಿಗಳನ್ನು ಪಾಲಕಿಯಲ್ಲಿ ಡಂಬಳ ಗ್ರಾಮದಿಂದ ತುಂಗಭದ್ರಾ ನದಿಗೆ ಕಾಲ್ನಡಿಗೆಯಲ್ಲಿ ಹೊತ್ತು ತಂದಿದ್ದೇವೆ. ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಡಂಬಳ ಗ್ರಾಮದಿಂದ 25 ಕಿ.ಮೀ. ದೂರದ ತುಂಗಭದ್ರಾ ನದಿಗೆ ಟ್ಯಾಂಕರ್‌ನಲ್ಲಿ ನೀರು ತುಂಬಿಸಿಕೊಂಡು ಬಂದಿದ್ದೇವೆ’ ಎಂದು ಡಂಬಳ ಗ್ರಾಮದ ಮಲ್ಲಪ್ಪ ಕೆಂಚಪ್ಪ ಪೂಜಾರ ಮತ್ತು ಕುಬೇರಪ್ಪ ಕೊಳ್ಳಾರ ತಿಳಿಸಿದರು.

‘ಟ್ಯಾಂಕರ್ ನೀರಿನಿಂದಲೇ ದೇವರಿಗೆ ಗಂಗಾಪೂಜೆ ಮಾಡಿ, ಒಲೆ ಹಚ್ಚಿ ಅಡುಗೆ ಮಾಡಿದ್ದೇವೆ. ಟ್ಯಾಂಕರ್ ನೀರಿನಿಂದ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಪ್ರಸಾದ ಸ್ವೀಕರಿಸಿದೆವು. ನದಿಯಲ್ಲಿ ಎಲ್ಲಿ ನೋಡಿದರು ಹನಿ ನೀರು ಕಾಣುತ್ತಿಲ್ಲ. ಇಂತಹ ಬರದ ಛಾಯೆ ನಾನು ಎಂದಿಗೂ ನೋಡಿಲ್ಲ. ನಮ್ಮ ಗ್ರಾಮದಿಂದ ನೀರು ತಂದು ದೇವರಿಗೆ ಗಂಗಾಪೂಜೆ ಮಾಡಿ ಆಹಾರ ಸಿದ್ಧಪಡಿಸಿ ಸ್ನಾನ ಮಾಡುತ್ತಿರುವುದು ಇದೇ ಮೊದಲು’ ಎಂದರು.

‘ನಮ್ಮ ಗ್ರಾಮದಲ್ಲಿ ದೇವಿಯ ಜಾತ್ರೆ ಇರುವುದರಿಂದ ನಾವೂ ಟ್ಯಾಂಕರ್ ನೀರು ತುಂಗಭದ್ರಾ ನದಿಗೆ ತಂದಿದ್ದೇವೆ. ಎಲ್ಲ ಗ್ರಾಮದ ಪರಿಸ್ಥಿತಿ ಹೀಗೆ ಇದೆ’ ಎಂದು ಡಂಬಳ ಹೋಬಳಿಯ ಡ.ಸ. ರಾಮೇನಹಳ್ಳಿಯ ದೇವಿಂದ್ರಪ್ಪ ಪೂಜಾರ ಮತ್ತು ವಂಕಟಾಪೂರ ಗ್ರಾಮದ ಬಸವರಾಜ ಪೂಜಾರ ಹೇಳಿದರು.

ತುಂಗಭದ್ರಾ ನದಿಪಾತ್ರ ಬರಿದಾಗಿರುವುದು
ತುಂಗಭದ್ರಾ ನದಿಪಾತ್ರ ಬರಿದಾಗಿರುವುದು

ಟ್ಯಾಂಕರ್ ನೀರಿನಲ್ಲೇ ನದಿಯಲ್ಲಿ ಅಡುಗೆ ತಯಾರಿ ‘ಹಿಂದೆಂದೂ ಕಾಣದಂಥ ಭೀಕರ ಬರಗಾಲ’ ಆಟದ ಮೈದಾನದಂತೆ ಕಾಣುವ ತುಂಗಭದ್ರೆಯ ಒಡಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT