ಮಂಗಳವಾರ, ಮೇ 18, 2021
30 °C
ಹಸಿದವರಿಗೆ ಸಸ್ತಾ ತಿಂಡಿ; ಓದುಗರಿಗೆ ಮಸ್ತ್‌ ಚಹಾದ ಅಂಗಡಿ

ಗದಗ: ಚಹಾದ ಹಬೆಯಲ್ಲಿ ಕನ್ನಡದ ಪರಿಮಳ

ಬಸವರಾಜ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಹೊಳೆಆಲೂರು (ರೋಣ): ತಾಲ್ಲೂಕಿನ ಕೊನೆಯ ಗ್ರಾಮವಾದ ಕರ್ಕಿಕಟ್ಟಿಯಲ್ಲಿ ಪುಟ್ಟದೊಂದು ಚಹಾದ ಅಂಗಡಿ ಇದ್ದು, ಇಲ್ಲಿ ಕನ್ನಡ ಉಳಿಸಿ ಬೆಳೆಸುವ ಕೈಂಕರ್ಯ ನಡೆಯುತ್ತಿದೆ. ಇಲ್ಲಿನ ರುಚಿಯಾದ ತಿಂಡಿ ತಿಂದು, ಚಹಾ ಕುಡಿದವರ ಮನದಲ್ಲಿ ಕನ್ನಡತನವೂ ಹಬೆಯಾಡುತ್ತದೆ. 

ಕನ್ನಡದ ನುಡಿಗಟ್ಟುಗಳು, ವಚನಗಳು, ಶರಣರು, ಸಂತರ ಪ್ರೇರಣಾದಾಯಕ ಮಾತುಗಳು, ಕೊರೊನಾ ಸೋಂಕು ಕುರಿತ ಎಚ್ಚರಿಕೆ ಹಾಗೂ ಮುಂಜಾಗ್ರತೆಯ ಫಲಕಗಳು ಕಾಣಸಿಗುತ್ತವೆ. ಚಹಾ ಕುಡಿಯಲು ಬಂದ ಜನರ ಮನದಲ್ಲಿ ಇಲ್ಲಿನ ಕನ್ನಡದ ಸಾಲುಗಳು ಲವಲವಿಕೆಯ ಭಾವ ಮೂಡಿಸುತ್ತವೆ.

ಅಂದಹಾಗೆ, ಈ ಚಹಾದ ಅಂಗಡಿಯ ಮಾಲೀಕ ದೇಶಪ್ರೇಮಿ ಮುತ್ತಣ್ಣ ತಿರ್ಲಾಪೂರ. ಇವರು ಮಹದಾಯಿ ಹೋರಾಟಗಾರರೂ ಹೌದು. ಮಹಾತ್ಮ ಗಾಂಧಿ ವೇಷಧಾರಿಯಾಗಿ ಸಭೆ ಸಮಾರಂಭಗಳಲ್ಲಿ ಗಾಂಧಿ ತತ್ವವನ್ನು ಸಾರುತ್ತಾರೆ. ಜೀವನ ನಿರ್ವಹಣೆಗಾಗಿ ಚಹಾದ ಅಂಗಡಿ ನಡೆಸುತ್ತಿದ್ದಾರೆ.

ಚಹಾದ ಅಂಗಡಿ ಗೋಡೆಯ ಮೇಲೆ ಗಾಂಧೀಜಿ, ಬಸವಣ್ಣ, ಸ್ವಾಮಿ ವಿವೇಕಾನಂದರು, ಅಂಧರ ಬಾಳಿಗೆ ಬೆಳಕಾದ ಗದುಗಿನ ಪುಟ್ಟರಾಜ ಕವಿ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕವಿಗಳು, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಗಳು ಹಾಗೂ ಅವರು ಹೇಳಿರುವ ಹಿತನುಡಿಗಳು ಇವೆ.

ದೇಶ ಕಾಯುವ ಯೋಧರ ಬಗ್ಗೆ ವಿಶೇಷ ಕವನಗಳು, ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರ ಹಾಗೂ ಅವರ ಘೋಷಣೆಗಳನ್ನು ಅಕ್ಷರದ ರೂಪದಲ್ಲಿ ಕಾಣಬಹುದಾಗಿದೆ. ಮಹದಾಯಿ ಹೋರಾಟ ಸಂದರ್ಭದಲ್ಲಿ ನಡೆದ ಘಟನೆಗಳ ಪೂರ್ಣ ಮಾಹಿತಿ ಕೂಡ ಗೋಡೆ ಬರಹ ರೂಪದಲ್ಲಿ ನೋಡಲು ಇಲ್ಲಿ ಸಿಗುತ್ತದೆ. 

‘ಇಲ್ಲಿ ಉಪಾಹಾರಕ್ಕೆ ಬರುವ ಜನರಿಗೆ ಬೇಸರ ಬರುವುದಿಲ್ಲ. ಮುತ್ತಣ್ಣ ಅವರ ಸಕಾರಾತ್ಮಕ ಜೀವನ ಪ್ರೀತಿ, ಪ್ರೇರಣಾತ್ಮಕ ಮಾತುಗಳನ್ನು ಕೇಳಲು ಹಿತವೆನಿಸುತ್ತದೆ. ಚಹಾದ ಅಂಗಡಿಯಲ್ಲಿ ಬಸವಣ್ಣವರ ವಚನ, ಸ್ವಾಮಿ ವಿವೇಕಾನಂದರ ನುಡಿಗಳು, ಇನ್ನಿತರ ಸಾಧಕರ ನುಡಿಗಟ್ಟುಗಳು ಬದುಕಿನ ಜಂಜಾಟದಲ್ಲಿ ಬಸವಳಿದವರ ಮನದಲ್ಲಿ ಸ್ಫೂರ್ತಿ ಮೂಡಿಸುತ್ತವೆ’ ಎನ್ನುತ್ತಾರೆ ಸ್ಥಳೀಯರು.

ಈ ಹಳ್ಳಿಗೆ ಮೊದಲ ಬಾರಿಗೆ ಬಂದ ಅತಿಥಿಗಳನ್ನು ಗ್ರಾಮಸ್ಥರು ಈ ವಿಶೇಷ ಚಹಾದ ಅಂಗಡಿಗೆ ಕರೆದೊಯ್ಯದೇ ಬಿಡುವುದಿಲ್ಲ. ಬಳಿಕ ಮುತ್ತಣ್ಣ ಅವರಿಗೊಂದು ಧನ್ಯವಾದ ಹೇಳಿ, ಕನ್ನಡ ಉಳಿಸಿ ಬೆಳೆಸುವ ನಿಮ್ಮ ಕೈಂಕರ್ಯವನ್ನು ಮುಂದುವರಿಸಿ ಎಂದು ನಮಿಸಿ ಹೋಗುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು