ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಡಾಯಿಸುವುದೂ ಲೈಂಗಿಕ ದೌರ್ಜನ್ಯ: ಕೆ. ಗುರುಪ್ರಸಾದ

Published 26 ಆಗಸ್ಟ್ 2023, 14:05 IST
Last Updated 26 ಆಗಸ್ಟ್ 2023, 14:05 IST
ಅಕ್ಷರ ಗಾತ್ರ

ಗದಗ: ‘ಲೈಂಗಿಕ ಉದ್ದೇಶದಿಂದ ಮಗುವಿನ ಖಾಸಗಿ ಅಂಗಾಂಗ ಮುಟ್ಟುವುದು ಲೈಂಗಿಕ ದೌರ್ಜನ್ಯವಾಗಿದೆ. ಮುಟ್ಟದೇ ಚುಡಾಯಿಸುವುದು, ಮೊಬೈಲ್‍ನಲ್ಲಿ ಕೆಟ್ಟ ಸಂದೇಶ ಕಳಿಸುವುದು ಇಂತಹವುಗಳೆಲ್ಲವೂ ಅಪರಾಧವಾಗಿದ್ದು, ಇದಕ್ಕೆ ಕೂಡ ಶಿಕ್ಷೆ ವಿಧಿಸಬಹುದಾಗಿದೆ’ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಸಂಯುಕ್ತಾಶ್ರಯದಲ್ಲಿ ಗದಗ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಕ್ಸೊ ಕಾಯ್ದೆ ಹಾಗೂ ಮಕ್ಕಳ ಕಾನೂನುಗಳ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಎಸಗಿದರೆ ಕನಿಷ್ಠ 20 ವರ್ಷಗಳವರೆಗೆ ಶಿಕ್ಷೆ ಹಾಗೂ ಗರಿಷ್ಠ ಆಜೀವಪರ್ಯಂತ ಸೆರೆವಾಸ ಶಿಕ್ಷೆಯನ್ನು ವಿಧಿಸುವಷ್ಟು ಪೋಕ್ಸೊ ಕಾಯ್ದೆ ಗಂಭೀರವಾಗಿದೆ’ ಎಂದು ವಿವರಿಸಿದರು.

‘ಬಾಲ್ಯ ವಿವಾಹ ಸಹ ಶಿಕ್ಷಾರ್ಹ ಅಪರಾಧವಾಗಿದೆ. ಪ್ರೌಢಶಾಲೆ ಹಾಗೂ ಕಾಲೇಜಿನ ಹುಡುಗ-ಹುಡುಗಿಯರು ಪೋಕ್ಸೊ ಕಾಯ್ದೆಯ ಗಂಭೀರತೆ ಅರಿಯದೇ ಸಮಸ್ಯೆಗೀಡಾತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ಪೋಕ್ಸೊ ಕಾಯ್ದೆಯ ಕುರಿತು ಹಾಗೂ ಮಕ್ಕಳ ಕಾನೂನುಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಕಂಡು ಬಂದಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಅಥವಾ 112ಕ್ಕೆ ಕರೆ ಮಾಡಿ ವಿಷಯ ತಿಳಿಸಬೇಕು.
ಆರ್.ಎಸ್.ಬುರುಡಿ, ಕ್ಷೇತ್ರ ಶಿಕ್ಷಣಾಧಿಕಾರಿ

ಎಸ್‌ಡಿಎಂಸಿ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಮಾತನಾಡಿ, ‘ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಮೇಶ ಕಳ್ಳಿಮನಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಎ.ರಡ್ಡೇರ ಮಾತನಾಡಿ, ಪಾಲಕರು, ಶಿಕ್ಷಕರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿ-ಸಿಬ್ಬಂದಿ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಜತೆಗೆ ಅವರಿಗಾಗಿ ಇರುವ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಯತ್ನಿಸಬೇಕು ಎಂದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಅಬೂಬಕರ ಅಣ್ಣಿಗೇರಿ, ಉಮರ್‌ಫಾರೂಕ್‌ ಹುಬ್ಬಳ್ಳಿ ಸೇರಿದಂತೆ ಶಾಲಾ ಸಿಬ್ಬಂದಿ, ಮಕ್ಕಳು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಎಚ್.ಎ.ಫಾರೂಖಿ ಸ್ವಾಗತಿಸಿದರು. ಶ್ರೀಕಾಂತ ಬಟ್ಟೂರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT