ಸೋಮವಾರ, ಸೆಪ್ಟೆಂಬರ್ 16, 2019
22 °C
3 ತಿಂಗಳಲ್ಲಿ ಬೆಲೆ 3 ಪಟ್ಟು ಹೆಚ್ಚಳ; ಮಾರುಕಟ್ಟೆಗೆ ತಗ್ಗಿದ ಆವಕ

ಮತ್ತೆ ಟೊಮೊಟೊ ತುಟ್ಟಿ;ಗ್ರಾಹಕರಿಗೆ ಬರೆ

Published:
Updated:
Prajavani

ಗದಗ: ಕಳೆದ ಬೇಸಿಗೆಯಲ್ಲಿ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸಿದರೆ, ಈ ಬಾರಿ ಗ್ರಾಹಕರಿಗೆ ಟೊಟೊಟೊ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ತಿಂಗಳ ಹಿಂದಿನವರೆಗೆ ಕೆ.ಜಿಗೆ ₹25ರಿಂದ ₹30 ದರದಲ್ಲಿ ಮಾರಾಟವಾಗುತ್ತಿದ್ದ ಟೊಮೊಟೊ ಸದ್ಯ ₹40ಕ್ಕೆ ಏರಿಕೆಯಾಗಿದೆ.

ಸದ್ಯ ಮದುವೆ ಸೀಸನ್‌ ಪ್ರಾರಂಭವಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೊಟೊಗೆ ಭಾರಿ ಬೇಡಿಕೆ ಇದೆ. ಇದರ ಜತೆಗೆ ಆವಕವೂ ತಗ್ಗಿರುವುದರಿಂದ ಸ್ಥಳೀಯ ವ್ಯಾಪಾರಿಗಳು ಬೆಲೆ ಏರಿಕೆ ಮಾಡಿದ್ದಾರೆ.ಕಳೆದ ಮೂರು ತಿಂಗಳಲ್ಲಿ ಟೊಮೊಟೊ ಧಾರಣೆ ಮೂರು ಪಟ್ಟು ಹೆಚ್ಚಿದೆ. ಮಾರ್ಚ್‌ ಆರಂಭದಲ್ಲಿ 1 ಕೆ.ಜಿ ಟೊಮೊಟೊಗೆ ಸರಾಸರಿ ₹10 ಧಾರಣೆ ಇತ್ತು. ಮಾರ್ಚ್‌ ಅಂತ್ಯಕ್ಕೆ ಇದು ₹20ಕ್ಕೆ ಮತ್ತು ಏಪ್ರಿಲ್‌ ಮೂರನೆಯ ವಾರದಲ್ಲಿ ₹30ಕ್ಕೆ ಏರಿಕೆಯಾಯಿತು.

ಸದ್ಯ ಸಗಟು ವ್ಯಾಪಾರಿಗಳು ಉತ್ತಮ ಗುಣಮಟ್ಟದ ಟೊಮೊಟೊವನ್ನು ₹30ರಿಂದ ₹35ಕ್ಕೆ ಮತ್ತು ಚಿಲ್ಲರೆ ವ್ಯಾಪಾರಿಗಳು ₹40ಕ್ಕೆ ಮಾರಾಟ ಮಾಡುತ್ತಿದ್ದಾರೆ.ಬೇಸಿಗೆ ಬೆನ್ನಲ್ಲೇ, ಕೋಲಾರ, ಅರಸೀಕೆರೆ, ಕೊಪ್ಪಳದಿಂದ ಗದಗ ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ. ಸ್ಥಳೀಯವಾಗಿ ಮುಂಡರಗಿ, ರೋಣ, ಲಕ್ಷ್ಮೇಶ್ವರದಿಂದ ಕಡಿಮೆ ಪ್ರಮಾಣದಲ್ಲಿ ಟೊಮೊಟೊ ಆವಕವಾಗುತ್ತಿದೆ.

‘ಸದ್ಯ ಹೊರಗಿನಿಂದ ಆವಕವಾಗುವ 25 ಕೆ.ಜಿ.ಯ ಒಂದು ಬಾಕ್ಸ್‌ ಟೊಮೊಟೊಗೆ ₹800 ರಿಂದ ₹1 ಸಾವಿರ ದರ ಇದೆ. ಸ್ಥಲೀಯ ಮಾರುಕಟ್ಟೆಯಲ್ಲಿ ನಾವು ಕೆ.ಜಿಗೆ ₹40 ರಂತೆ ಮಾರುತ್ತಿದ್ದೇವೆ’ ಎಂದು ಇಲ್ಲಿನ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಬಾಳಪ್ಪ ಹಕಾರಿ ಹೇಳಿದರು.

ಟೊಮೊಟೊ ಮಾತ್ರವಲ್ಲ, ಉಳಿದ ಎಲ್ಲ ತರಕಾರಿಗಳ ದರ ಕಳೆದ ವಾರಕ್ಕೆ ಹೋಲಿಸಿದರೆ ಶೇ 10ರಷ್ಟು ಏರಿಕೆಯಾಗಿದೆ. ಬೀನ್ಸ್‌, ಕ್ಯಾಬೇಜ್‌, ಬೀಟ್‌ರೂಟ್‌, ಹಸಿಮೆಣಸಿನಕಾಯಿ, ನವಿಲುಕೋಸಿನ ಬೆಲೆ ಗಗನಕ್ಕೇರಿದೆ.

ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಈರುಳ್ಳಿಗೆ ಕೆ.ಜಿಗೆ ಸದ್ಯ ₹20ಕ್ಕೆ ಮಾರಾಟವಾಗುತ್ತಿದೆ. ಪುಣೆ, ವಿಜಯಪುರ, ಗದಗ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಮಾರುಕಟ್ಟೆಗೆ ಈರುಳ್ಳಿ ಆವಕವಾಗುತ್ತದೆ. ಸ್ಥಳೀಯ ಈರುಳ್ಳಿ ಗಡ್ಡೆಗಳು ಗಾತ್ರದಲ್ಲಿ ಸಣ್ಣವು. ಆದರೆ, ಪುಣೆ ಗಡ್ಡೆ ದೊಡ್ಡವು. ಇಂತಹ ಒಣಗಿದ ಗಡ್ಡೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

Post Comments (+)