ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟಿಕೋತ್ಸವಕ್ಕೆ ದೇಸಿ ಸ್ಪರ್ಶ: ಗೌನ್‌ ಬದಲು ಖಾದಿ ದಿರಿಸು, ಪಟಗ

ಬ್ರಿಟಿಷರ ಸಂಪ್ರದಾಯ ಬದಿಗಿರಿಸಿ ಘಟಿಕೋತ್ಸವಕ್ಕೆ ದೇಸಿ ಸ್ಪರ್ಶ
Last Updated 1 ಏಪ್ರಿಲ್ 2021, 7:49 IST
ಅಕ್ಷರ ಗಾತ್ರ

ಗದಗ: ಘಟಿಕೋತ್ಸವಗಳು ಅಂದರೆ ತಕ್ಷಣ ನೆನಪಿಗೆ ಬರುವುದು ಕಪ್ಪು ಬಣ್ಣದ ಗೌನ್‌ ಮತ್ತು ಟೋಪಿ. ಆದರೆ, ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪ‍ಂಚಾಯತ್‌ ರಾಜ್‌ ವಿಶ್ವವಿದ್ಯಾಲಯವು ಬ್ರಿಟಿಷರ ಸಂಪ್ರದಾಯಕ್ಕೆ ತಕ್ಕಂತೆ ಇರುವಂತಹ ವೇಷಭೂಷಣಗಳನ್ನು ಬದಿಗಿರಿಸಿ, ಘಟಿಕೋತ್ಸವಕ್ಕೆ ದೇಸಿ ಸ್ಪರ್ಶ ನೀಡಲು ಮುಂದಾಗಿದೆ.

ಏಪ್ರಿಲ್‌ 10ರಂದು ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ನಡೆಯಲಿದ್ದು, ಸ್ನಾತಕೋತ್ತರ ಪದವಿ ಪ್ರಮಾಣಪತ್ರ ಪಡೆಯುವ 250 ಮಂದಿ ವಿದ್ಯಾರ್ಥಿಗಳು ಹಾಗೂ ಪದವಿ ಪ್ರದಾನ ಮಾಡಲಿರುವ ಸಹ ಕುಲಾಧಿಪತಿಯೂ ಸೇರಿದಂತೆ ಅತಿಥಿ ಗಣ್ಯರೆಲ್ಲರೂ ಗೌನ್‌ ಬದಲಿಗೆ ಖಾದಿಯಿಂದ ತಯಾರಾದ ದಿರಿಸುಗಳನ್ನು ಧರಿಸಲಿದ್ದಾರೆ.

ಖಾದಿಯನ್ನು ಉತ್ತೇಜಿಸುವಂತೆ ಯುಜಿಸಿ ಹೊರಡಿಸಿದ ಸುತ್ತೋಲೆ ಹಾಗೂ ಅದನ್ನು ಅನುಷ್ಠಾನಗೊಳಿಸುವಂತೆ ರಾಜ್ಯಪಾಲರ ಹೊರಡಿಸಿದ ಮತ್ತೊಂದು ಸುತ್ತೋಲೆಯಂತೆ ಈ ವಿನೂತನ ಯೋಜನೆ ಗ್ರಾಮೀಣಾಭಿವೃದ್ಧಿಯಲ್ಲಿ ಜೀವತಳೆದಿದೆ. ಘಟಿಕೋತ್ಸವದಲ್ಲಿ ಖಾದಿ ಬಳಕೆ ಹೇಗಿರಬೇಕು, ಯಾರು ಯಾವ ಬಣ್ಣದ ದಿರಿಸು ಧರಿಸಬೇಕು ಎಂಬುದನ್ನು ನಿರ್ಧರಿಸಲು ವಿವಿ ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌.ಚಟಪಲ್ಲಿ ಅವರು ತಜ್ಞರ ಒಂದು ಸಮಿತಿ ರಚಿಸಿ, ಅವರು ನೀಡಿದ ಸಲಹೆಯಂತೆ ಘಟಿಕೋತ್ಸವದ ದಿರಿಸುಗಳನ್ನು ಅಂತಿಮಗೊಳಿಸಿದ್ದಾರೆ.

‘ಸಮಿತಿಯಲ್ಲಿ ನಿರ್ಣಯ ಮಾಡಿದಂತೆ ಘಟಿಕೋತ್ಸವದ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಸಹ ಕುಲಾಧಿಪತಿ, ಕುಲಪತಿ, ಅತಿಥಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಶೈಕ್ಷಣಿಕ ಪರಿಷತ್‌ ಸದಸ್ಯರೆಲ್ಲರೂ ಖಾದಿಯ ಉಡುಪು, ಬಿಳಿ ಜಾಕೆಟ್‌, ಹಸಿರು ಅಂಗವಸ್ತ್ರ, ಶಿರಕ್ಕೆ ಬಿಳಿ ಪಟಗ ಧರಿಸಲಿದ್ದಾರೆ. ವಿದ್ಯಾರ್ಥಿಗಳು ಖಾದಿಯಿಂದ ತಯಾರಿಸಿದ ಬಿಳಿ ಜುಬ್ಬಾ ಪೈಜಾಮ, ಹಸಿರು ಅಂಗವಸ್ತ್ರ ಹಾಗೂ ಗಾಂಧಿ ಟೋಪಿ ಹಾಗೂ ವಿದ್ಯಾರ್ಥಿನಿಯರು ಬಿಳಿ ಚೂಡಿದಾರ್, ಅಂಗವಸ್ತ್ರ ಮತ್ತು ಗಾಂಧಿ ಟೋಪಿ ಧರಿಸಲಿದ್ದಾರೆ’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದರು.

‘ಖಾದಿ ಒಂದು ವಸ್ತ್ರ ಅಲ್ಲ; ಅದು ವಿಚಾರ. ಗ್ರಾಮೀಣ ಕೈಗಾರಿಕೆಗಳ ಪುನರುಜ್ಜೀವನ ಮತ್ತು ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆ ಗಮನದಲ್ಲಿಟ್ಟುಕೊಂಡೇ ಘಟಿಕೋತ್ಸವ ಕಾರ್ಯಕ್ರಮ ಸಂಯೋಜನೆ ಮಾಡಲಾಗಿದೆ. ಖಾದಿ ಮತ್ತು ಖಾದಿ ವಿಚಾರಗಳನ್ನು ಪ್ರಚುರಗೊಳಿಸುವ ಕಾರ್ಯವನ್ನು ವಿಶ್ವವಿದ್ಯಾಲಯ ನಿರಂತರವಾಗಿ ಮುಂದುವರಿಸಿಕೊಂಡು ಹೋಗಲಿದೆ’ ಎಂದು ಅವರು ತಿಳಿಸಿದರು.

ವಿಶ್ವವಿದ್ಯಾಲಯಕ್ಕೆ ಬರುವ ಗಣ್ಯರಿಗೆ ಈವರೆಗೆ ಹೂಗುಚ್ಚ ನೀಡಿಲ್ಲ. ಖಾದಿ ಮಾಲೆ, ಚರಕವನ್ನೇ ಕೊಡುತ್ತೇವೆ. ಖಾದಿ ಉತ್ತೇಜನಕ್ಕಾಗಿ ಪ್ರತಿ ಶುಕ್ರವಾರ ವಿದ್ಯಾರ್ಥಿಗಳು, ಅಧ್ಯಾಪಕರೆಲ್ಲರೂ ಖಾದಿ ಧರಿಸುವ ಸಂಕಲ್ಪ ಮಾಡಿದ್ದೇವೆ

-ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ‌, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT