ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ವಧರ್ಮ ಸಮನ್ವಯ ಭಾವ ಮೂಡಲಿ’

ಗದುಗಿನಲ್ಲಿ ರಾಮಕೃಷ್ಣ–ವಿವೇಕಾನಂದ ಭಾವಪ್ರಚಾರ ಪರಿಷತ್‌ನ ವಾರ್ಷಿಕ ಸಮ್ಮೇಳನ
Last Updated 13 ಡಿಸೆಂಬರ್ 2019, 13:01 IST
ಅಕ್ಷರ ಗಾತ್ರ

ಗದಗ: ‘ಸರ್ವಧರ್ಮ ಸಮನ್ವಯ ಭಾವ ಎಲ್ಲರಲ್ಲೂ ಮೂಡಬೇಕು. ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನಸ್ಸಿನಲ್ಲಿ ಸಮಭಾವ ಬೆಳೆಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ರಾಮಕೃಷ್ಣ ಮಿಶನ್‌ ಕೆಲಸ ಮಾಡುತ್ತಿದೆ’ ಎಂದು ಕೋಲ್ಕತ್ತಾದ ರಾಮಕೃಷ್ಣ ಮಠ ಮತ್ತು ಮಿಷನ್‌ನ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್‌ ಹೇಳಿದರು.

ಶುಕ್ರವಾರ ಇಲ್ಲಿ ರಾಮಕೃಷ್ಣ–ವಿವೇಕಾನಂದ ಭಾವಪ್ರಚಾರ ಪರಿಷತ್‌ನ ರಾಜ್ಯ ಮಟ್ಟದ 6ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಗದುಗಿನಲ್ಲಿ ನಡೆಯುತ್ತಿರುವ ಸಮ್ಮೇಳನವು ಒಂದು ಬೃಹತ್‌ ಸತ್ಸಂಗ ಇದ್ದಂತೆ. ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದಾರೆ. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಹಾಗೂ ಶಾರದಾ ದೇವಿ ಅವರ ಸನಾತನ ಧರ್ಮದ ಚಿಂತನೆಗಳನ್ನು ಈ ಆಧುನಿಕ ಕಾಲಘಟ್ಟದಲ್ಲಿ ಹೇಗೆ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ವಿಸ್ತಾರವಾದ ಆಧ್ಯಾತ್ಮಿಕ ಒಳನೋಟವನ್ನು ಈ ಸತ್ಸಂಗ ನೀಡುತ್ತದೆ. ಇಂತಹ ಸತ್ಸಂಗ ಸಾಮಾಜಿಕ ಜೀವನಕ್ಕೆ ಬಹಳ ಮುಖ್ಯ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಬದುಕನ್ನು ಗೌರವದಿಂದ ಬಾಳಬೇಕು ಆ ಮೂಲಕ ಸಾಮಾಜಿಕ, ಆಧ್ಯಾತ್ಮಿಕ ಜೀವನದಲ್ಲಿ ಉನ್ನತಿ ಪಡೆದು, ಅನಂತ ಜೀವನಕ್ಕೆ ಬೇಕಾದ ಜ್ಞಾನವನ್ನು ಪಡೆದುಕೊಳ್ಳಬೇಕು. ಇದನ್ನು ತಿಳಿಸುವುದೇ ನಿಜವಾದ ಧರ್ಮ. ಇದರಲ್ಲಿ ಸಮಷ್ಟಿಯ ಹಿತ ಅಡಗಿದೆ’ ಎಂದು ಅವರು ವಿವರಿಸಿದರು.

ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ‘ಸಕಲ ಜೀವರಾಶಿಗಳಲ್ಲಿ ಭಗವಂತನ ಚೈತನ್ಯ ತುಂಬಿಕೊಂಡಿದೆ ಎನ್ನುವುದನ್ನು ತಿಳಿಸಿಕೊಡುವ ಮೂಲಕ ರಾಮಕೃಷ್ಣ ಪರಮಹಂಸರು ಭವ್ಯವಾದ ಪರಂಪರೆ ನಿರ್ಮಿಸಿದರು. ಈ ಪರಂಪರೆಯ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಮಹಾನ್‌ ವ್ಯಕ್ತಿಗಳಾಗಿ ಬದಲಾಗುತ್ತಾರೆ’ ಎಂದು ಅವರು ಹೇಳಿದರು.

‘ಮಠಗಳು ಧಾರ್ಮಿಕ ಕೇಂದ್ರಗಳಾಗುವುದರ ಜತೆಯಲ್ಲೇ ಜನರನ್ನು ಸನ್ಮಾರ್ಗದಲ್ಲಿ ನಡೆಸುವ ಆಧ್ಯಾತ್ಮಿಕ ಕೇಂದ್ರಗಳಾಗಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಆಧ್ಯಾತ್ಮಿಕ ಸಂಪರ್ಕ ಹೊಂದುವುದರ ಮೂಲಕ, ಪ್ರತಿ ಜೀವಿಯಲ್ಲೂ ದೇವರಿದ್ದಾನೆ ಎನ್ನುವ ಅಂಶವನ್ನು ಮನಗಂಡು ಬದುಕು ಸಾಗಿಸಬೇಕು. ಸಂಸಾರಿಗಳಾಗಿದ್ದುಕೊಂಡು ಆಧ್ಯಾತ್ಮಿಕ ಜೀವಿಗಳಾಗಿ ಬದುಕಬಹುದು. ಸಂಸಾರದಲ್ಲಿ ಸದ್ಗತಿ ಇದೆ’ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT