ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಮತದಾನ ಬಹಿಷ್ಕಾರ ಹಿಂಪಡೆದ ಗ್ರಾ.ಪಂ. ಅಧ್ಯಕ್ಷರು

Published 3 ಏಪ್ರಿಲ್ 2024, 13:05 IST
Last Updated 3 ಏಪ್ರಿಲ್ 2024, 13:05 IST
ಅಕ್ಷರ ಗಾತ್ರ

ಮುಂಡರಗಿ: ಮರಳು (ಉಸುಕು) ಸಾಗಣೆಗೆ ಅನುಮತಿ ನೀಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿ ಅಧ್ಯಕ್ಷರೊಂದಿಗೆ ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಮಂಗಳವಾರ ಸಂಜೆ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಭೆ ನಡೆಸಿದರು.

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಕುರಿತು ‘ಪ್ರಜಾವಾಣಿ’ಯಲ್ಲಿ ಈಚೆಗೆ ಪ್ರಕಟವಾದ ವಿಸ್ತ್ರತ ವರದಿಯನ್ನು ಪರಿಗಣಿಸಿ ರಾಜ್ಯ ಚುನಾವಣಾ ಆಯೋಗವು ತಕ್ಷಣ ಸಮಸ್ಯೆಯನ್ನು ನಿವಾರಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಿತ್ತು.

ಚುನಾವಣಾ ಆಯೋಗದ ನಿರ್ದೇಶನದಂತೆ ತಾಲ್ಲೂಕು ಆಡಳಿತವು ಮಂಗಳವಾರ ತಾಲ್ಲೂಕಿನ ಶಿಂಗಟಾಲೂರ, ಕೊರ್ಲಹಳ್ಳಿ, ಹೆಸರೂರು ಹಾಗೂ ಮತ್ತಿತರ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿತು.

ಶಿಂಗಟಾಲೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೈಲಾರೆಪ್ಪ ಉದಂಡಿ ಮಾತನಾಡಿ, ‘ತುಂಗಭದ್ರಾ ನದಿಯಿಂದ ಮರಳು ಸಾಗಣೆ ಮಾಡಲು ಅವಕಾಶ ಇಲ್ಲದ ಕಾರಣ ಖಾಸಗಿ ಹಾಗೂ ಸರ್ಕಾರದ ವಿವಿಧ ಕಾಮಗಾರಿಗಳು ಕುಂಠಿತಗೊಂಡಿವೆ. ಆದ್ದರಿಂದ ತಾಲ್ಲೂಕು ಆಡಳಿತವು ನಿಯಮಾನುಸಾರ ರಾಜಧನ ಪಡೆದು ಮರಳು ಸಾಗಣೆಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಮಾತನಾಡಿ, ‘ಗ್ರಾಮೀಣ ಭಾಗದ ಮರಳು ಸಾಗಣೆಯ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಮಾರ್ಗದರ್ಶನದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಕಾರಣದಿಂದ ಯಾರೂ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಬಾರದು’ ಎಂದು ಮನವಿ ಮಾಡಿಕೊಂಡರು.

‘ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವ ಉದ್ದೇಶ ಯಾರಿಗೂ ಇಲ್ಲ. ಮರಳು ಪೂರೈಕೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ನಿವಾರಿಸಬೇಕು. ನಾವು ಯಾರೂ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವುದಿಲ್ಲ’ ಎಂದು ವಿವಿಧ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಅಧಿಕಾರಿಗಳಿಗೆ ಭರವಸೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ಪಿಎಸ್‍ಐ, ಬೀಡನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೊಪ್ಪಣ್ಣ ಕೊಪ್ಪಣ್ಣವರ, ಹೆಸರೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಮವ್ವ ಗುಡಿಮನಿ, ಬೀಡನಾಳ, ಹೆಸರೂರು ಹಾಗೂ ಶಿಂಗಟಾಲೂರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT