ಸೋಮವಾರ, ಸೆಪ್ಟೆಂಬರ್ 20, 2021
20 °C

ಕೆರೆಯ ನೀರಿಗೂ ಅಳತೆಗೋಲು..! ನರೇಗಲ್‌ನ ಹಿರೇಕೆರೆಯಲ್ಲಿ ಅಳವಡಿಸಿರುವ ಮಾಪನ ಕಂಬಗಳು

ಚಂದ್ರು ಎಂ. ರಾಥೋಡ್ Updated:

ಅಕ್ಷರ ಗಾತ್ರ : | |

Prajavani

ನರೇಗಲ್: ಪಾತಾಳ ಕಂಡಿರುವ ಅಂತರ್ಜಲ ವೃದ್ಧಿಗೆ ಮುಂದಾಗಿರುವ ಪಟ್ಟಣದ ಜನರು, ‘ಸಮುದಾಯ ಸಹಭಾಗಿತ್ವ’ ತತ್ವದಡಿ ಇಲ್ಲಿನ ಹಿರೇಕೆರೆಯ ಹೂಳು ತೆಗೆದು ಸ್ವಚ್ಛಗೊಳಿಸುತ್ತಿದ್ದಾರೆ. ಮಳೆಗಾಲದಲ್ಲಿ ಉತ್ತಮ ಮಳೆ ಲಭಿಸಿದರೆ ಈ ಐತಿಹಾಸಿಕ ಕೆರೆ ತುಂಬಲಿದೆ. ಕೆರೆಯ ನೀರಿನ ಮಟ್ಟ ಅಳೆಯಲು ಈಗಾಗಲೇ ಮಾಪನ ಕಂಬಗಳನ್ನು ಅಲ್ಲಲ್ಲಿ ಹೂಳಲಾಗಿದೆ.

ನೆಲ, ಜಲ ಸಂರಕ್ಷಣಾ ಸಮಿತಿಯು ಕಳೆದ 6 ತಿಂಗಳಿಂದ ಕೆರೆಯ ಹೂಳು ತೆಗೆಯುವ ಕಾಮಗಾರಿ ಕೈಗೊಂಡಿದೆ. ಈಗಾಗಲೇ ಎರಡು ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. 3ನೇ ಕೆರೆಯ ಕಾಮಗಾರಿ ಸದ್ಯ ನಡೆಯುತ್ತಿದ. ನಿರೀಕ್ಷೆಯಂತೆ ಉತ್ತಮ ಮಳೆಯಾದರೆ ಕೆರೆಯ ಒಡಲಿಗೆ ಸಾಕಷ್ಟು ನೀರು ಹರಿದು ಬರಲಿದೆ. ಕೆರೆ ತುಂಬಿದಾಗ ಸಾರ್ವಜನಿಕರು ಆಳವನ್ನು ಗಮನಿಸದೆ ಕೆರೆಯಲ್ಲಿ ಇಳಿದರೆ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಳತೆ ಕಂಬಗಳು ಎಚ್ಚರಿಕೆಯ ಫಲಕಗಳಾಗಿಯೂ  ಕಾರ್ಯ ನಿರ್ವಹಿಸುತ್ತವೆ ಎನ್ನುವುದು ನೆಲ, ಜಲ ಸಂರಕ್ಷಣಾ ಸಮಿತಿ ಸದಸ್ಯರ ಅಭಿಪ್ರಾಯ.

ಕೆರೆಯಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂದು ಲೆಕ್ಕ ಹಾಕಲು ಸಹ ಈ ಅಳತೆ ಕಂಬಗಳು ಸಹಕಾರಿಯಾಗುತ್ತವೆ. ವಿವಿಧ ಕಾಮಗಾರಿಗಳಿಗೆ ಬಳಸ ಉಳಿದ ನೀರಿನ ಪೈಪ್‌ಗಳನ್ನೇ ಅಳತೆಗೋಲುಗಳನ್ನಾಗಿ ಮರುಬಳಕೆ ಮಾಡಿದ್ದಾರೆ. ಸಮಿತಿ ಸದಸ್ಯರು ಇಂತಹ ಪೈಪ್‌ಗಳನ್ನು ಆರಿಸಿ ತಂದು, ಅವುಗಳಿಗೆ ಬಿಳಿ ಬಣ್ಣ ಹಚ್ಚಿದ್ದಾರೆ. ಇದರ ಮೇಲೆ ನೋಡಿದ ತಕ್ಷಣವೇ ನೀರಿನ ಪ್ರಮಾಣ ಗುರುತಿಸುವಂತೆ ಅಂಕಿಗಳನ್ನು ಬರೆದಿದ್ದಾರೆ. ಕೆರೆಯ ಸೂಕ್ತವಾದ ಜಾಗದಲ್ಲಿ ಆಳವಾದ ಗುಂಡಿಯನ್ನು ತೆಗೆದು ಕಂಬ ನೆಡಲಾಗಿದೆ. 3 ದಶಕಗಳವರೆಗೆ ಇವು ಬಾಳಿಕೆ ಬರುತ್ತವೆ ಎಂದು ಅಂದಾಜಿಸಲಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಈಚೆಗೆ ಬಂದು ಕೆರೆಯನ್ನು ಸರ್ವೆ ಮಾಡಿಕೊಂಡು ಹೋಗಿರುತ್ತಾರೆ. ಕೆರೆ ಅಭಿವೃದ್ಧಿ ಕಾಮಗಾರಿಯೂ ಮುಗಿಯುತ್ತಿದ್ದಂತೆ ಸ್ಥಳೀಯ ಯುವಕರ ತಂಡಗಳನ್ನು ಬಳಸಿಕೊಂಡು ವಿವಿಧ ಜಾತಿಯ 3 ಸಾವಿರ ಸಸಿಗಳನ್ನು ನೆಟ್ಟು ಹಸಿರಿನ ವಾತಾವರಣ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ. ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಹಸಿರು ನಳನಳಿಸಲಿದೆ ಎಂದು ಸಮಿತಿಯ ಸದಸ್ಯರಾದ ಬಸವರಾಜ ವಂಕಲಕುಂಟಿ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಉಮೇಶ ಸಂಗನಾಳಮಠ, ಆನಂದ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು