ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ| ‘ಜಲಜೀವನ ಮಿಷನ್ ಯೋಜನೆ’: ಶೀಘ್ರದಲ್ಲಿ ಮನೆ ಬಾಗಿಲಿಗೆ ನಲ್ಲಿ ನೀರು

4 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ ಹೆಡ್ ಟ್ಯಾಂಕ್‌
Last Updated 21 ಅಕ್ಟೋಬರ್ 2020, 4:40 IST
ಅಕ್ಷರ ಗಾತ್ರ

ಡಂಬಳ: ಕಬ್ಬಿಣದ ಪೈಪ್‌ಲೈನ್ ಮತ್ತು ಮೀಟರ್ ಅಳವಡಿಸಿ ಮನೆ ಮನೆಗೆ ನಲ್ಲಿ ಮೂಲಕ ನೀರು ಪೂರೈಹಿಸುವ ಕೇಂದ್ರ ಸರ್ಕಾರದ ‘ಜಲಜೀವನ ಮಿಷನ್ ಯೋಜನೆ’ಯ ಸರ್ವೆಕಾರ್ಯ ಡಂಬಳದಲ್ಲಿ ವೇಗವಾಗಿ ಸಾಗಿದ್ದು ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಡಂಬಳ ಗ್ರಾಮ ಪಂಚಾಯಿತಿ ಪಿಡಿಒ ಎಸ್.ಕೆ ಕವಡೆಲೆ, 4 ಲಕ್ಷ ಲೀಟರ್ ಸಾಮರ್ಥ್ಯ ಓವರ್‌ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ, ಭೂಮಿಯ ತಳಮಟ್ಟದಲ್ಲಿ ಇನ್ನೊಂದು (ಸಂಪು) ನಿರ್ಮಿಸಿ ಹೆಚ್ಚು ನೀರು ಸಂಗ್ರಹಿಸಲಾಗುವುದು. ನೀರಿನ ಕೊರತೆಯಾಗದಂತೆ ನೀರಿನ ಮಿತಿ ಬಳಕೆಯ ಮಹತ್ವ,ಜಾಗೃತಿ, ಪ್ರತಿಯೊಬ್ಬರಲ್ಲಿಯೂ ಬರಬೇಕು ಎನ್ನುವುದು ಈ ಯೋಜನೆ ಮುಖ್ಯ ಉದ್ದೇಶ’ ಎಂದರು.

‘ಪ್ರತಿಯೊಂದು ಮನೆಗೆ ಪೈಪ್‌ಲೈನ್ ಮತ್ತು ಮೀಟರ್ ಅಳವಡಿಸಿ ಗ್ರಾಮದ 2,300ಕ್ಕೂ ಅಧಿಕ ಮನೆಗೆ ನಲ್ಲಿ ಮೂಲಕ ಶಾಶ್ವತವಾಗಿನೀರು ಪೂರೈಕೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ವಂತಿಗೆ ಶೇ 10ರಷ್ಟು,15 ನೇ ಹಣಕಾಸಿನ ಶೇ 15ರಷ್ಟು ಅನುದಾನ ಬಳಕೆ ಮಾಡಿಕೊಳ್ಳುವುದು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಕೆಲವೊಂದು ಓಣಿಗಳಿಗೆ ಸಮರ್ಪಕವಾಗಿ ನೀರು ಬರುವುದಿಲ್ಲ ಎನ್ನುವ ಆರೋಪಗಳು ಪದೇ ಪದೇ ಕೇಳಿ ಬರುತ್ತಿದ್ದವು. ಈ ಯೋಜನೆಯ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ದೊರೆಯಲಿದೆ ಎಂದರು.

ಕೇಂದ್ರ ಸರ್ಕಾರದ ಜಲಜೀವನ ಯೋಜನೆಯಡಿ ತಾಲ್ಲೂಕಿನ 19 ಗ್ರಾಮ ಪಂಚಾಯಿತಿಗಳಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ಒದಗಿಸುವ ಯೋಜನೆಯ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಡಿಬಿಒಟಿ ಮೂಲಕ (ಡಿಸೈನ್ ಬಿಲ್ಡ್ ಆಪರೇಟಿಂಗ್ ಸಿಸ್ಟಂ) ನಿಂದ ಕಬ್ಬಿಣ ಪೈಪ್‌ ಅಳವಡಿಸಿ ಶುದ್ಧ ಕುಡಿಯುವ ನೀರು ನಲ್ಲಿ ಮೂಲಕ ಪ್ರತಿಯೊಂದು ಕುಟುಂಬಕ್ಕೂ ಪೂರೈಕೆ ಮಾಡಲಾಗುವುದು.

ಡಂಬಳ ಸೇರಿದಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡ.ಸ.ರಾಮೇನಹಳ್ಳಿ, ಡ.ಸ ನಾರಾಯಣಪುರ, ಹೊಸಡಂಬಳ ಗ್ರಾಮಗಳ ಈ ಯೋಜನೆಗೆ ಅಂದಾಜು ₹5 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಟೆಂಡರ್ ಕರೆದು ಗುತ್ತಿಗೆ ನೀಡಿದ ನಂತರ ಎರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಿರಿಯ ಎಂಜಿನಿಯರ್ ಪ್ರಕಾಶ ತೇಲಿ.

ಪ್ರತಿಯೊಂದು ಮನೆಗೆ ನಲ್ಲಿ ಮೂಲಕ ನೀರು ಪೂರೈಸುವ ಯೋಜನೆ ಕೈಗೊಂಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.

ಮೀಟರ್ ಅಳವಡಿಸಿ ನೀರು ಮಿತವಾಗಿ ಬಳಸಬಹುದರಿಂದ ನೀರಿನ ಮಹತ್ವ ತಿಳಿಯುತ್ತದೆ. ಕರ ವಸೂಲಿ ಮೂಲಕ ಆದಾಯವು ಬರುವುದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿಗೂ ಸಹಕಾರವಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಮುತ್ತಣ್ಣ ಹಿರೇಮಠ ಹಾಗೂ ಶರಣು ಬಂಡಿಹಾಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT