ಮಂಗಳವಾರ, ಸೆಪ್ಟೆಂಬರ್ 17, 2019
21 °C
ಬತ್ತಿದ ಕೊಳವೆಬಾವಿ

ಕುಂದ್ರಳ್ಳಿ,ಬಾಲೆಹೊಸೂರಿನಲ್ಲಿ ನೀರಿಗೆ ಹಾಹಾಕಾರ; ಶಾಸಕರ ತವರು ಗ್ರಾಮದಲ್ಲೇ ಪರದಾಟ

Published:
Updated:
Prajavani

ಲಕ್ಷ್ಮೇಶ್ವರ: ತಾಲ್ಲೂಕಿನ ಬಾಲೆಹೊಸೂರು, ಕುಂದ್ರಳ್ಳಿ, ಕುಂದ್ರಳ್ಳಿ ತಾಂಡಾ, ನಾದಿಗಟ್ಟಿ ಗ್ರಾಮಗಳನ್ನು ಹೊರತುಪಡಿಸಿದರೆ ಉಳಿದ ಗ್ರಾಮಗಳಲ್ಲಿ ಈ ಬಾರಿ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಲ್ಲ. ಆದರೆ, ವಿದ್ಯುತ್ ಕೈಕೊಟ್ಟಾಗ ಮಾತ್ರ ಗ್ರಾಮಸ್ಥರು ನೀರಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ತಾಲ್ಲೂಕಿನಲ್ಲಿದೆ.

ಲಕ್ಷ್ಮೇಶ್ವರ ನೂತನ ತಾಲ್ಲೂಕು ವ್ಯಾಪ್ತಿಗೆ ಅಡರಕಟ್ಟಿ, ಬಟ್ಟೂರು, ಬಾಲೆಹೊಸೂರು, ದೊಡ್ಡೂರು, ಪುಟಗಾಂವ್ ಬಡ್ನಿ, ಗೊಜನೂರು, ಆದರಹಳ್ಳಿ, ಹುಲ್ಲೂರು, ಯಳವತ್ತಿ, ರಾಮಗಿರಿ, ಸೂರಣಗಿ, ಶಿಗ್ಲಿ, ಗೋವನಾಳ ಹಾಗೂ ಮಾಡಳ್ಳಿ ಸೇರಿದಂತೆ 14 ಗ್ರಾಮ ಪಂಚಾಯ್ತಿಗಳು ಬರುತ್ತವೆ. ಬಾಲೆಹೊಸೂರಿನ ಜನತೆಗೆ ನೀರು ಪೂರೈಸುವ ಕೊಳವೆ ಬಾವಿಗಳು ಬತ್ತುತ್ತಿವೆ. ಹೀಗಾಗಿ ನೀರಿಲ್ಲದೆ ಗ್ರಾಮಸ್ಥರು ಬಳಲುತ್ತಿದ್ದಾರೆ. ಇದೇ ಗ್ರಾಮದ ಮೂಲಕ ಹಾದು ಹೋಗಿರುವ ಪೈಪ್‍ಲೈನ್ ಮೂಲಕ ಲಕ್ಷ್ಮೇಶ್ವರಕ್ಕೆ ತುಂಗಭದ್ರಾ ನದಿ ನೀರು ಪೂರೈಕೆ ಆಗುತ್ತದೆ. ಆದರೆ, ಬಾಲೆಹೊಸೂರಿನ ನಿವಾಸಿಗಳಿಗೆ ಮಾತ್ರ ಈ ನೀರು ಕುಡಿಯುವ ಭಾಗ್ಯ ಇಲ್ಲ.

ಬಾಲೆಹೊಸೂರಿನಲ್ಲಿ ಯಾವಾಗಲೂ ನೀರಿನ ಸಮಸ್ಯೆ ಇದ್ದೇ ಇರುತ್ತದೆ. ಇತ್ತೀಚೆಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಗ್ರಾಮಕ್ಕೆ ನದಿ ನೀರು ಪೂರೈಕೆ ಪ್ರಾರಂಭವಾಗಿದೆ. ಆದರೆ, ಆ ನೀರು ಸಾಲುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು.ಶಾಸಕರ ತವರು ಗ್ರಾಮವಾದ ಕುಂದ್ರಳ್ಳಿ ತಾಂಡಾ ಮತ್ತು ಕುಂದ್ರಳ್ಳಿ ಗ್ರಾಮಗಳಲ್ಲೂ ಸಹ ನೀರಿಗೆ ಬರ ಎದುರಾಗಿದೆ. ಬಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಈ ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ನೀರಿನ ಬವಣೆ ಹೆಚ್ಚಿದೆ. ಕಳೆದ ತಿಂಗಳು ಎರಡೂ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಆಗ ಶಾಸಕರ ಪುತ್ರ ಮಹೇಶ ಲಮಾಣಿ ಕುಂದ್ರಳ್ಳಿ ತಾಂಡಾದ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದರು.

ಇತ್ತೀಚೆಗೆ ಹೊಸ ಕೊಳವೆ ಬಾವಿ ಕೊರೆಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಕಡಿಮೆ ಆಗುವ ನಿರೀಕ್ಷೆ ಗ್ರಾಮಸ್ಥರಲ್ಲಿದೆ. ಇಲ್ಲಿಯೂ ಡಿಬಿಓಟಿ ಯೋಜನೆಯಡಿ ನದಿ ನೀರು ಪೂರೈಕೆ ಆಗುತ್ತಿದೆ. ಆದರೆ, ಪೂರೈಕೆಯಾಗುವ ನೀರಿನ ಪ್ರಮಾಣ ಕಡಿಮೆ ಎನ್ನುವ ದೂರಿದೆ.

ವರದಾನವಾದ ಯೋಜನೆ

ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯು ತಾಲ್ಲೂಕಿನಲ್ಲಿ ಬಹುತೇಕ ಗ್ರಾಮಗಳ ದಾಹ ನೀಗಿಸಿದೆ. ಬೆರಳೆಣಿಕೆಯಷ್ಟು ಗ್ರಾಮಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಗ್ರಾಮಗಳಿಗೆ ಈ ಯೋಜನೆಯಡಿ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ ಬರಗಾಲ ಇದ್ದರೂ, ಈ ಬಾರಿ ನೀರಿನ ಸಮಸ್ಯೆ ಅಷ್ಟಾಗಿ ಜನರನ್ನು ತಟ್ಟಿಲ್ಲ.

ಜಾನುವಾರುಗಳಿಗೆ ನೀರಿಲ್ಲ

ಮಳೆ ಕೊರತೆಯಿಂದ ಈ ಬಾರಿ ತಾಲ್ಲೂಕಿನಲ್ಲಿನ ಎಲ್ಲ ಹಳ್ಳಗಳು, ಕೆರೆಗಳು ಸಂಪೂರ್ಣ ಒಣಗಿವೆ. ಹೀಗಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಜಾನುವಾರುಗಳು ನೀರಿಗಾಗಿ 2ರಿಂದ 5 ಕಿಮೀ ದೂರ ಕ್ರಮಿಸಬೇಕಾದ ಪರಿಸ್ಥಿತಿ ಇದೆ. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಡೋಣಿಗಳನ್ನು ಕಟ್ಟಿಸಬೇಕು. ಮತ್ತು ಸಮೀಪದ ಕೆರೆಗಳಿಗೆ ನೀರು ಬಿಟ್ಟರೆ ಜಾನುವಾರುಗಳಿಗೆ ಸುಲಭವಾಗಿ ನೀರು ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

Post Comments (+)