ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರವಾದ ಬಹುಗ್ರಾಮ ನೀರಿನ ಯೋಜನೆ

ಕಾಶೀನಾಥ ಬಿಳಿಮಗ್ಗದ
Published 16 ಮಾರ್ಚ್ 2024, 5:15 IST
Last Updated 16 ಮಾರ್ಚ್ 2024, 5:15 IST
ಅಕ್ಷರ ಗಾತ್ರ

ಮುಂಡರಗಿ: ಕಳೆದ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಸಾಕಷ್ಟು ಮಳೆಯಾಗದ ಕಾರಣ ತಾಲ್ಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಕಳೆದ ವರ್ಷ ನಿರೀಕ್ಷಿಸಿದಷ್ಟು ನೀರು ಹರಿದು ಬರಲಿಲ್ಲ.

ಇದರಿಂದಾಗಿ ತುಂಗಭದ್ರಾ ನದಿ ಪಾತ್ರ ಹಾಗೂ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಅವಧಿಗಿಂತ ಮೊದಲೆ ನೀರಿಲ್ಲದೆ ಬರಿದಾಗುವಂತಾಯಿತು.

ಬೇಸಿಗೆಯಲ್ಲಿ ತಾಲ್ಲೂಕು ಹಾಗೂ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಕೊರತೆಯಾಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಅಧಿಕಾರಿ ಗಳು ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿದ್ದ ನೀರನ್ನು ನದಿಪಾತ್ರಕ್ಕೆ ಹರಿಸದೆ ಅದನ್ನು ಬ್ಯಾರೇಜಿನಲ್ಲಿಯೇ ಸಂಗ್ರಹಿಸಿ ಇಟ್ಟುಕೊಂಡರು.

ಹೀಗೆ ಮಳೆಗಾಲದಲ್ಲಿ ಸಂಗ್ರಹಿಸಿದ್ದ ನೀರು ಫೆಬ್ರುವರಿ ತಿಂಗಳವರೆಗೂ ಜಿಲ್ಲೆಯ ನೀರಿನ ಬವಣೆಯನ್ನು ನೀಗಿಸಿತು.

ಫೆಬ್ರವರಿಯಲ್ಲಿ ನೀರು ಸಂಪೂರ್ಣವಾಗಿ ಬರಿದಾದಾಗ ಅಧಿಕಾರಿಗಳು ಫೆ.7ರಂದು ಭದ್ರಾ ಜಲಾಶಯದಿಂದ ಒಂದು ಟಿಎಂಸಿ ನೀರನ್ನು ಬಿಡಿಸಿಕೊಂಡರು. ಈಗ ಶಿಂಗಟಾಲೂರ ಬ್ಯಾರೇಜಿನಲ್ಲಿ 0.84 ಟಿಎಂಸಿ ನೀರು ಸಂಗ್ರಹವಿದ್ದು, ಸುಮಾರು 30 ದಿನಗಳವರೆಗೆ ನೀರು ಬಳಸಿಕೊಳ್ಳಬಹುದಾಗಿದೆ.

ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ 24x7 ಎಲ್.ಎನ್.ಟಿ. ಯೋಜನೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮುಂಡರಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಜನತೆ ನೀರಿನ ಬವಣೆಯಿಂದ ಪಾರಾಗಿದ್ದಾರೆ. ತಾಲ್ಲೂಕಿನ ಕೆಲವು ಗ್ರಾಮಗಳನ್ನು ಹೊರತು ಪಡಿಸಿ ಬಹುತೇಕ ಗ್ರಾಮಗಳ ಜನರು ಈಗ ಮೊದಲಿನಂತೆ ನೀರಿಗಾಗಿ ಪರದಾಡಬೇಕಿಲ್ಲ.

ಬಹುಗ್ರಾಮ ಯೋಜನೆಯ ಜೊತೆಗೆ ಜೆಜೆಎಂ ಯೋಜನೆಯ ಮೂಲಕ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಯು ಅಪೂರ್ಣಗೊಂಡಿರುವುದರಿಂದ ಅಂತಹ ಗ್ರಾಮಗಳಲ್ಲಿ ಸ್ವಲ್ಪ ಕುಡಿಯುವ ನೀರಿನ ತೊಂದರೆ ಇದೆ.

ಜೊತೆಗೆ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿರುವುದರಿಂದ ಜನರು ಮೊದಲಿನಂತೆ ನೀರಿಗಾಗಿ ಪರದಾಡಬೇಕಿಲ್ಲ.

ತಾಲ್ಲೂಕಿನ ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪೂರ ಮೊದಲಾದ ಕೆಲವು ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಅಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಯಾವ ದಿನ ಯಾವ ನೀರು ಪೂರೈಕೆಯಾಗುತ್ತದೆ ಎನ್ನವುದು ಜನತೆಗೆ ತಿಳಿಯದೆ ಇರುವುದರಿಂದ ವೆಂಕಟಾಪೂರ ಗ್ರಾಮಸ್ಥರೆಲ್ಲ ನಲ್ಲಿ ನೀರಿನ ಬದಲಾಗಿ ನಿತ್ಯ ಕೆರೆಯ ನೀರನ್ನು ಕುಡಿಯುತ್ತಿದ್ದಾರೆ.

88 ಶುದ್ಧ ನೀರಿನ ಘಟಕ ಸ್ಥಾಪನೆ

ನೀರು ಪೂರೈಕೆಯ ವಿವಿಧ ಯೋಜನೆಗಳ ಜೊತೆಗೆ ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ಒಟ್ಟು 88 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.

ಪಟ್ಟಣದಲ್ಲಿ 13 ಶುದ್ಧ ಕುಡಿವ ನೀರಿನ ಘಟಕಗಳಿವೆ. ಬಿದರಳ್ಳಿ, ಮುಂಡವಾಡ, ಹಳ್ಳಿಕೇರಿ, ನಾರಾಯಣಪುರ, ಜಾಲವಾಡಿಗೆ, ಚಿಕ್ಕವಡ್ಡಟ್ಟಿ, ಗಂಗಾಪುರ, ಶೀರನಹಳ್ಳಿ ಮೊದಲಾದ ಕೆಲವು ಗ್ರಾಮಗಳ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿದ್ದು, ಅಲ್ಲಿನ ಜನತೆ ತೊಂದರೆ ಅನುಭವಿಸುವಂತಾಗಿದೆ. ಕೊಳವೆ ಬಾವಿಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರು ದೊರೆಯದ ಕಾರಣ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ 4-5 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ನಿತ್ಯ ಪಟ್ಟಣಕ್ಕೆ ಸುಮಾರು 80 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಅಷ್ಟು ನೀರು ದೊರೆಯದ ಕಾರಣ ನಿತ್ಯ 40 ಲಕ್ಷ ಲೀಟರ್ ನೀರನ್ನು ಮಾತ್ರ ಪೂರೈಸಲಾಗುತ್ತಿದೆ.

ಏ.13ರಿಂದ ಮೂರುದಿನಗಳ ಕಾಲ ಜಿಲ್ಲೆಯ ಸುಪ್ರಸಿದ್ದ ಶಿಂಗಟಾಲೂರ ವೀರಭದ್ರೇಶ್ವರ ಜಾತ್ರೆ ಜರಗಲಿದ್ದು, ನದಿಗೆ ನೀರು ಹರಿದುಬರದಿದ್ದರೆ ಜಾತ್ರೆಗೆ ಆಗಮಿಸುವ ಭಕ್ತ ಸಮೂಹಕ್ಕೆ ತೀವ್ರ ತೊಂದರೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT