ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ಬೆಳೆ: ಬಂಪರ್ ಆದಾಯದ ನಿರೀಕ್ಷೆಯಲ್ಲಿ ರೈತ

5 ಎಕರೆಯಲ್ಲಿ ಕಲ್ಲಂಗಡಿ ಕೃಷಿ: 100 ಟನ್ ಕಲ್ಲಂಗಡಿ ಸಿಗುವ ಅಂದಾಜು
Last Updated 3 ಮಾರ್ಚ್ 2023, 6:01 IST
ಅಕ್ಷರ ಗಾತ್ರ

ಶಿರಹಟ್ಟಿ: ಆಧುನಿಕ ಜೀವನಶೈಲಿಗೆ ಮುಖಮಾಡಿ ಮಹಾನಗರಗಳಿಗೆ ಮಾರು ಹೋಗುತ್ತಿರುವ ಯುವ ಪೀಳಿಗೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಣ್ಣನ್ನೇ ನಂಬಿ ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡ ರೈತ ಬಸವರಾಜ ಹಾದಿಮನಿ ಇತರರಿಗೆ ಮಾದರಿ.

ತಾಲ್ಲೂಕಿನ ಹೊಳಲಾಪುರ ಗ್ರಾಮದ ಯುವ ರೈತ ಬಸವರಾಜ ಅವರು 10 ಎಕರೆ ಜಮೀನಿನಲ್ಲಿ 3 ಬಾವಿ ಹಾಗೂ 1 ಬೋರ್‌ವೆಲ್ ಮೂಲಕ ವಿವಿಧ ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 4ನೇ ತರಗತಿ ಓದಿದ ಅವರು ಸದ್ಯ ಅಣ್ಣನ ಸಹಕಾರದೊಂದಿಗೆ ಕಲ್ಲಂಗಡಿಯನ್ನೆ ಮುಖ್ಯ ಬೆಳೆಯಾಗಿಸಿಕೊಂಡಿದ್ದಾರೆ.

ಬಸವರಾಜ ಕುಟುಂಬ ಮೂಲತಃ ಕೃಷಿಯನ್ನೆ ಅವಲಂಬಿಸಿದ್ದು, 10 ವರ್ಷಗಳಿಂದ ಕೃಷಿಯಲ್ಲಿ ತೊಡಗಿದ್ದಾರೆ. ಇಷ್ಟು ದಿನ ತಕ್ಕಮಟ್ಟಿಗೆ ಲಾಭ ಪಡೆದ ಅವರು ಈ ಬಾರಿ ಕಲ್ಲಂಗಡಿಯಂತಹ ಬಂಪರ್ ಬೆಳೆಗೆ ಮಾರುಹೋಗಿದ್ದಾರೆ. ಸುಮಾರು 5 ಎಕರೆ ಕಲ್ಲಂಗಡಿ ನಾಟಿ ಮಾಡಿರುವ ಅವರು ತೋಟದಲ್ಲಿನ ಬಾವಿ ಹಾಗೂ ಬೋರವೆಲ್ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಹತ್ತು ವರ್ಷಗಳ ನಷ್ಟವನ್ನು ಕಟಾವಿಗೆ ಬಂದ ಕಲ್ಲಂಗಡಿಯಲ್ಲಿ ತೆಗೆದುಕೊಳ್ಳುವ ಕಾತುರದಲ್ಲಿದ್ದಾರೆ.

ಕಲ್ಲಂಗಡಿ ನಾಟಿ ಮಾಡಿದ 5 ಎಕರೆ ಹೊಲಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಮಲ್ಚಿಂಗ್(ಹೊದಿಕೆ) ಮಾಡಿದ್ದಾರೆ. ಬಾವಿಯ ನೀರನ್ನು ಬಳಸಿ ಅದರ ಮಧ್ಯೆ ಹನಿನೀರಾವರಿ ಪೈಪ್‌ಗಳನ್ನು ಹಾಕಿದ್ದಾರೆ. ಇದರಿಂದಾಗಿ ಕಳೆ(ಹುಲ್ಲು) ಕಡಿಮೆ ಬರುತ್ತದೆ ಎಂಬುದು ರೈತರ ಅನುಭವದ ಮಾತು. ಸಸಿಯಿಂದ ಸಸಿಗೆ ನಿಯಮಿತ ಅಂತರ ಕಾಯ್ದುಕೊಂಡು ಪ್ಲಾಸ್ಟಿಕ್ ಮೇಲೆ ರಂಧ್ರಗಳನ್ನು ಕೊರೆದು ಅದರಲ್ಲಿ ಬೀಜಗಳನ್ನು ನಾಟಿ ಮಾಡಿದ್ದಾರೆ. ಸಸಿಗಳಿಗೆ ಬೇಕಾಗುವ ಗೊಬ್ಬರವನ್ನು ಸಹ ಈ ಮೂಲಕವೇ ನೀಡಿದ್ದಲ್ಲದೇ ನಿಯಮಿತವಾಗಿ ರಾಸಾಯನಿಕಗಳನ್ನು ಸಹ ಸಿಂಪಡಣೆ ಮಾಡುತ್ತಿದ್ದಾರೆ.

ಯಾವ ತರಬೇತಿಯನ್ನು ಸಹ ಪಡೆಯದೇ ಸ್ವತಃ ಕಲ್ಲಂಗಡಿ ಬೆಳೆಗೆ ಒತ್ತು ನೀಡಿರುವ ರೈತ ಬಸವರಾಜಗೆ 1 ಎಕರೆಗೆ 20ರಿಂದ 25 ಟನ್ ಬಂದರು ಒಟ್ಟು 80ರಿಂದ 100 ಟನ್ ಕಲ್ಲಂಗಡಿ ಬೆಳೆ ಬರುವ ನಿರೀಕ್ಷೆ ಇದೆ. ಸದ್ಯ ಪ್ರತಿ ಕ್ವಿಂಟಲ್‌ಗೆ ₹7000 ರಿಂದ ₹10000ದವರೆಗೆ ಇದೆ. ಒಟ್ಟಿನಲ್ಲಿ ಕಲ್ಲಂಗಡಿ ಬೆಳೆಯೊಂದರಿಂದಲೇ ಸುಮಾರು ₹8ರಿಂದ ₹10ಲಕ್ಷ ಆದಾಯ ಬರಬಹುದು ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ಗುಲಾಬಿ, ತೆಂಗಿನ ತೋಟ

ಒಂದು ಎಕರೆ ಜಮೀನಿನಲ್ಲಿ ಗುಲಾಬಿ ನಾಟಿ ಮಾಡಿರುವ ಬಸವರಾಜ ಎರಡು ದಿನಕ್ಕೊಮ್ಮೆ ಕಟಾವು ಮಾಡುತ್ತಿದ್ದಾರೆ. ಒಮ್ಮೆ ಕಟಾವು ಮಾಡಿದರೆ ಸುಮಾರು 500ಕ್ಕೂ ಹೆಚ್ಚು ಹೂಗಳು ಬರುತ್ತಿದ್ದು, ಸಮೀಪದ ಲಕ್ಷ್ಮೇಶ್ವರ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಒಂದು ಗುಲಾಬಿ ₹2ರಿಂದ ₹5ಕ್ಕೆ ಮಾರುತ್ತಿದ್ದು, ಅದರಲ್ಲಿ ಉತ್ತಮ ಲಾಭ ಪಡೆಯುತ್ತಿದ್ದಾರೆ.

ಉಳಿದ 1.5 ಎಕರೆ ಜಮೀನಿನಲ್ಲಿ ಹಸಿ ಮೆಣಸಿನಕಾಯಿ ನಾಟಿ ಮಾಡಿದ್ದಾರೆ. ಅಲ್ಲದೇ ಟೊಮೊಟೊ, ಸೌತೆಕಾಯಿ ಸೇರಿದಂತೆ ಹಲವಾರು ತರಕಾರಿಗಳನ್ನು ಸಹ ಬೆಳೆಯುತ್ತಿದ್ದಾರೆ. ಸುಮಾರು 40 ಪೇರಲ ಸಸಿಗಳನ್ನು ನಾಟಿ ಮಾಡಿದ್ದು, ಅದರಲ್ಲೂ ಲಾಭದ ನಿರೀಕ್ಷೆಯಲ್ಲಿದ್ದಾರೆ.

ತೋಟದಲ್ಲಿ ಸುಮಾರು 180ಕ್ಕೂ ಹೆಚ್ಚಿನ ತೆಂಗಿನ ಮರಗಳಿವೆ. ಅದರಿಂದಲೂ ಉತ್ತಮ ಇಳುವರಿ ಬರುತ್ತಿದ್ದು ವರ್ಷಕ್ಕೆ ಲಕ್ಷಾಂತರ ಆದಾಯ ಬರುತ್ತಿದೆ. ಇದನ್ನು ಹೊರತುಪಡಿಸಿ ತೇಗ, ಸಾಗವಾನಿ, ಕರಮತ್ತಿ ಗಿಡಗಳನ್ನು ಸಹ ಬೆಳೆಸಿದ್ದಾರೆ. ತೆಂಗುವಿನ ಮಧ್ಯೆ ಕರಿಬೇವಿನ ಗಿಡಗಳನ್ನು ಬೆಳೆಸಿರುವುದು ವಿಶೇಷ.

ತೋಟಗಾರಿಕೆ ಬೆಳೆಗಳ ಬಗ್ಗೆ ಇನ್ನೂ ಸೂಕ್ತ ಮಾರ್ಗದರ್ಶನ ಬೇಕಿದ್ದು, ನನ್ನ ಸಹೋದರನ ಸಹಕಾರ ಹುಮ್ಮಸ್ಸು ನೀಡಿದೆ. ಆಳಿನ ತೊಂದರೆ ಇಲ್ಲದಿರುವುದರಿಂದ ಉತ್ತಮ ಲಾಭದ ನಿರೀಕ್ಷೆ ಇದೆ
ಬಸವರಾಜ ಹಾದಿಮನಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT