ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಕೇಂದ್ರ

Last Updated 31 ಅಕ್ಟೋಬರ್ 2011, 6:55 IST
ಅಕ್ಷರ ಗಾತ್ರ

ಗದಗ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಧ್ಯಸ್ಥಿಕೆ ಕೇಂದ್ರ ಪ್ರಾರಂಭವಾಗಿದ್ದು, ಈಗಾಗಲೇ 25 ಪ್ರಕರಣಗಳು ಇತ್ಯರ್ಥಗೊಂಡಿವೆ. ಯಾವುದೇ ವ್ಯಾಜ್ಯಗಳು ಇತ್ಯರ್ಥ ಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ ಮಧ್ಯಸ್ಥಿಕೆಯ ಮೂಲಕ ವಿವಾದಗಳು ಅಲ್ಪ ಅವಧಿಯಲ್ಲಿಯೇ ಇತ್ಯರ್ಥ ಗೊಂಡು ಜನರ ಸಮಯ ಹಾಗೂ ಖರ್ಚು ಉಳಿಸುವ ಯೋಜನೆ ಇದಾಗಿದೆ.

ಏನಿದು ಮಧ್ಯಸ್ಥಿಕೆ ಕೇಂದ್ರ?
ವಿವಾದ ಮತ್ತು ವ್ಯಾಜ್ಯಗಳನ್ನು ಸುಲಭ ಹಾಗೂ ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಇಟ್ಟಿರುವ ಒಂದು ಹೆಜ್ಜೆಯೇ ಮಧ್ಯಸ್ಥಿಕೆ ಕೇಂದ್ರ.

ಸಂಸತ್ತು ಜಾರಿಗೆ ತಂದ ಸಿವಿಲ್ ಪ್ರಕ್ರಿಯಾ ಸಂಹಿತೆ ಕಲಂ 89ರಡಿ ಉದ್ದೇಶಿತ ಪರ್ಯಾಯ ವಿವಾದ ಇತ್ಯರ್ಥ ವಿಧಾನಗಳಲ್ಲಿ ಮಧ್ಯಸ್ಥಿಕೆಯು ಒಂದಾಗಿದೆ. ವಿಶೇಷ ತರಬೇತಿ ಪಡೆದಿರುವ ವಕೀಲ- ಮಧ್ಯಸ್ಥಿಕೆ ಗಾರರಿಂದ ನ್ಯಾಯಾಲಯಕ್ಕೆ ಹೊಂದಿ ಕೊಂಡ ಮಧ್ಯಸ್ಥಿಕೆಯನ್ನು ಇದು ಸುಲಭವಾಗಿಸುತ್ತದೆ.

ಮೂರನೇ ತಟಸ್ಥ ವ್ಯಕ್ತಿಯು ಯಾವುದೇ ವ್ಯಾಜ್ಯದಲ್ಲಿನ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಗೆ ಹೋಗದೆ, ಅದರಲ್ಲಿನ ಪಕ್ಷಕಾರರು ತಮ್ಮ ನಡುವಿನ ವಿವಾದಗಳನ್ನು ಮಾತುಕತೆಯ ಮೂಲಕ ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಲು ಸಹಾಯ ಮಾಡುವ ಒಂದು ಪ್ರಕ್ರಿಯೆಯೇ ಮಧ್ಯಸ್ಥಿಕೆಯಾಗಿದೆ.

ವಿವಾದಗಳ ಇತ್ಯರ್ಥದ ಪ್ರಕ್ರಿಯೆ ಯಲ್ಲಿ ಎಲ್ಲ ಪಕ್ಷಕಾರರು ನಿರ್ಭೀತಿ ಯಿಂದ, ಸ್ನೇಹಮಯ ವಾತಾವರಣ ದಲ್ಲಿ ಅವರ ವಕೀಲರ ಜೊತೆಯಲ್ಲಿಯೇ ಸಕ್ರಿಯವಾಗಿ ಪಾಲ್ಗೊಳ್ಳುವಂತಹ, ಒಂದು ವಿಶಿಷ್ಟ ಅವಕಾಶವನ್ನು ಮಧ್ಯಸ್ಥಿಕೆಯಲ್ಲಿ ಕಲ್ಪಿಸಲಾಗುತ್ತದೆ.

ಈ ಮಧ್ಯಸ್ಥಿಕೆ ಕೇಂದ್ರದಲ್ಲಿ ಕನಿಷ್ಠ ಹದಿನೈದು ವರ್ಷಗಳ ಕಾಲ ವಕೀಲಿ ವೃತ್ತಿಯಲ್ಲಿ ಅನುಭವ ಹೊಂದಿರುವ ವಕೀಲರನ್ನು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಆಡಳಿತ ಮಂಡಳಿಯು ಆಯ್ಕೆ ಮಾಡುತ್ತದೆ.

ಮಧ್ಯಸ್ಥಿಕೆಯ ಪ್ರಯೋಜನ:
ಮಧ್ಯಸ್ಥಿಕೆಯಿಂದ ವಿವಾದಗಳು ಇತ್ಯರ್ಥಗೊಳ್ಳುವುದರಿಂದ ವ್ಯಾಜ್ಯಗಳಲ್ಲಿ ಸಿಗುವ ಫಲಿತಾಂಶಕ್ಕಿಂತ ಹೆಚ್ಚು ತೃಪ್ತಿಕರ ಫಲಿತಾಂಶವನ್ನು ನೀಡುತ್ತದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಪ್ರಾರಂಭ ಗೊಳ್ಳುವ ಮೊದಲೇ ವಿವಾದವನ್ನು ಪೂರ್ತಿಯಾಗಿ ಇಲ್ಲವೇ ಭಾಗಶಃ ಇತ್ಯರ್ಥಗೊಳಿಸಿಕೊಳ್ಳಲು ಮಧ್ಯಸ್ಥಿಕೆ ಸಹಾಯ ಮಾಡುವುದರಿಂದ ಸಮಯ ಹಾಗೂ ಹಣದ ಉಳಿತಾಯ ವಾಗುತ್ತದೆ. ಮಧ್ಯಸ್ಥಿಕೆಯಲ್ಲಿ ವಿವಾದ ವು ಇತ್ಯರ್ಥಗೊಂಡರೆ ಮುಂದೆ ವ್ಯಾಜ್ಯದ ಖರ್ಚು ಇರುವುದಿಲ್ಲ. ಅಲ್ಲದೇ ನ್ಯಾಯಾಲಯದ ಶುಲ್ಕವನ್ನು ಪಕ್ಷ ಕಾರರಿಗೆ ಹಿಂತಿರುಗಿಸಲಾಗುವುದು.

ವಿವಾದ ಇತ್ಯರ್ಥಕ್ಕೆ ಕಾಲಾವಧಿ:
ಕೆಲವೊಂದು ಪ್ರಕರಣಗಳು ಒಂದು ಅಥವಾ ಎರಡು ಸಭೆಯಲ್ಲಿ ಇತ್ಯರ್ಥಗೊಳ್ಳುತ್ತವೆ. ವಿಶೇಷವಾಗಿ ಹೆಚ್ಚು ಸಂಕೀರ್ಣವಾಗಿರುವ ಕೆಲವು ಪ್ರಕರಣಗಳ ಇತ್ಯರ್ಥಕ್ಕೆ ಇನ್ನೂ ಹೆಚ್ಚಿನ ಸಭೆಗಳ ಅಗತ್ಯವಾಗಬಹುದು. ಮೊದಲ ಸಭೆ ಜರುಗಿದ ನಂತರದ ಪ್ರತಿ ಸಭೆಯನ್ನು ಹಿಂದಿನ ಸಭೆ ಜರುಗಿದ ಒಂದು ವಾರದೊಳಗೆ ಗೊತ್ತುಪಡಿಸ ಲಾಗುತ್ತದೆ. ಮಧ್ಯಸ್ಥಿಕೆಗಾರನು ಸುಲಭ ವಾಗಿ ಸಭೆಯನ್ನು ಮುಂದೂಡುವುದಿಲ್ಲ.
 
ಒಂದು ವೇಳೆ ನ್ಯಾಯವಾಗಿ ಅಥವಾ ಯಾವುದೇ ಪಕ್ಷಕಾರನು ಒಂದಕ್ಕಿಂತ ಹೆಚ್ಚು ಬಾರಿ ಹಾಜರಿರದಿದ್ದರೆ ಪ್ರಕರಣವನ್ನು ನ್ಯಾಯ ನಿರ್ಣಯಕ್ಕಾಗಿ ನ್ಯಾಯಾಲಯಕ್ಕೆ ವಾಪಸ್ಸು ಕಳುಹಿಸಲಾಗುತ್ತದೆ. ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಗರಿಷ್ಠ 60 ದಿನಗಳಲ್ಲಿ ಪೂರ್ಣಗೊಳಿಸಲಾಗುತ್ತದೆ.  

ಜಿಲ್ಲೆಯ ಗದಗ, ರೋಣ, ನರಗುಂದ, ಶಿರಹಟ್ಟಿ ಮುಂಡರಗಿ ತಾಲ್ಲೂಕಿನ ನ್ಯಾಯಾಲಗಳಲ್ಲಿ ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಆಯ್ಕೆಗೊಂಡ ಹಿರಿಯ ವಕೀಲರು ಮಧ್ಯಸ್ಥಿಕೆಗಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಕೆ.ಪಿ. ಕೋಟಿಗೌಡರ `ಪ್ರಜಾವಾಣಿ~ಗೆ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 56 ಜನ ಹಿರಿಯ ವಕೀಲರು ಮಧ್ಯಸ್ಥಿಕೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯ ವರೆಗೆ 25ಕ್ಕೂ ಹೆಚ್ಚು ವಿವಾದಗಳು ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಂಡಿವೆ. ಪ್ರತಿ ವರ್ಷ ಜಿಲ್ಲೆಗೆ 25 ಹಿರಿಯ ವಕೀಲರಿಗೆ ತರಬೇತಿ ನೀಡಿ ಮಧ್ಯಸ್ಥಿಕೆ ಗಾರರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಮಧ್ಯಸ್ಥಿಕೆಗಾರರ ಅವಧಿ 5 ವರ್ಷಗಳದ್ದಾಗಿರುತ್ತದೆ ಎಂದು ಜಿಲ್ಲಾ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕ ಬಿ.ಎಂ. ಕುಕನೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT