ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟಾ: ಕಂಗೊಳಿಸುವ ಗಾಂಧಿ ವೃತ್ತ

1991ರಲ್ಲಿ ಲೋಕಾರ್ಪಣೆ; ಅದ್ಧೂರಿ ಜಯಂತಿ ಆಚರಣೆ
Last Updated 7 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ತಿಕೋಟಾ: ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಬೋವಿವಡ್ಡರ ಹಾಗೂ ಭಜಂತ್ರಿ ಓಣಿಯಲ್ಲಿ 1991ರಲ್ಲಿ ಗಾಂಧಿ ವೃತ್ತ ನಿರ್ಮಾಣವಾಗಿದೆ.

ಗಾಂಧಿ ಅಭಿಮಾನಿ ಯುವಕರೆಲ್ಲರೂ ಸೇರಿ, ಹಣ ಸಂಗ್ರಹಿಸಿ ವೃತ್ತ ನಿರ್ಮಿಸುವ ಹಾಗೂ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಸಂಕಲ್ಪ ಮಾಡಿದ್ದರು.

ಅಂದುಕೊಂಡಂತೆ ಓಣಿಯಲ್ಲಿರುವ ನೆಹರೂ ಬಂಡಿವಡ್ಡರ ನೇತೃತ್ವದಲ್ಲಿ ಗುರಪ್ಪ ಬಂಡಿವಡ್ಡರ, ಲಕ್ಷ್ಮಣ ಬಂಡಿವಡ್ಡರ, ರಾಮು ಬಂಡಿವಡ್ಡರ, ಹಣಮಂತ ಭಜಂತ್ರಿ, ಮಾರುತಿ ಭಜಂತ್ರಿ ಸೇರಿಕೊಂಡು ಓಣಿಯಲ್ಲಿರುವ ನೂರಾರು ಯುವಕರ ಸಹಾಯದಿಂದ ₹1 ಲಕ್ಷ ಹಣ ಸಂಗ್ರಹಿಸಿದರು.

ಗ್ರಾಮದ ಅಪ್ಪಾಸಾಬ ಕಲ್ಲಕುಟರ್ ಎಂಬುವರಿಗೆ ಮೂರ್ತಿ ಕೆತ್ತನೆಯ ಜವಾಬ್ದಾರಿ ವಹಿಸಿದರು. ಕೆತ್ತನೆಗೆ ಬೇಕಾದ ಕಲ್ಲನ್ನು ಮಹಾರಾಷ್ಟ್ರದಿಂದ ತಂದು ಗಾಂಧಿ ಪ್ರತಿಮೆಯನ್ನು ಕೆತ್ತಿದರು. ಬಂಡಿವಡ್ಡರ ಹಾಗೂ ಭಜಂತ್ರಿ ಕುಟುಂಬಗಳು ಹೆಚ್ಚಾಗಿ ಗೌಂಡಿ ಕಾರ್ಯ ನಿರ್ವಹಿಸುವುದರಿಂದ ವೃತ್ತದ ಕಟ್ಟಡವನ್ನು ಸ್ವತಃ ಎಲ್ಲರೂ ಸೇರಿ ನಿರ್ಮಿಸಿರುವುದು ವಿಶೇಷ.

ಓಣಿಯ ಪ್ರಮುಖ ಬೀದಿಯಲ್ಲಿ ಷಟ್ಕೋನ ಆಕೃತಿಯಲ್ಲಿ ಒಂದರ ಮೆಲೊಂದು ಮೂರು ಕಟ್ಟೆಗಳನ್ನ ನಿರ್ಮಿಸಿ, ಅದರ ಮೇಲೆ ಚೌಕಾಕಾರದ ಜಗುಲಿಯ ಮೇಲೆ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಅಂದಿನಿಂದ ಈ ವೃತ್ತವನ್ನು ಗಾಂಧಿಚೌಕ್ ಎಂದು ಕರೆಯಲು ಆರಂಭಿಸಿದ್ದಾರೆ.

ಸಂಪೂರ್ಣ ಕಾರ್ಯ ಮುಗಿದ ನಂತರ ಅಂದರೆ 1991ರ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಅಂದಿನ ಶಾಸಕ ಎಂ.ಬಿ.ಪಾಟೀಲ ಅಧ್ಯಕ್ಷತೆ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ಎಂ.ಎಲ್.ಉಸ್ತಾದ ನೇತೃತ್ವದಲ್ಲಿ ವೃತ್ತವನ್ನು ಉದ್ಘಾಟಿಸಲಾಯಿತು. ಅಂದಿನ ಸಂಸದರಾಗಿದ್ದ ಬಿ.ಕೆ.ಗುಡದಿನ್ನಿ ಉಪಸ್ಥಿತರಿದ್ದರು.

‘ಪ್ರತಿ ವರ್ಷ ಜನವರಿ 26ರ ಗಣರಾಜ್ಯೋತ್ಸವ, ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಹಾಗೂ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸುತ್ತ ಬರಲಾಗಿದೆ. ಮಹಾತ್ಮ ಗಾಂಧಿ ಯುವಕ ಮಂಡಳಿಯವರು ವೃತ್ತದ ಜವಾಬ್ದಾರಿ ವಹಿಸಿಕೊಂಡಿದ್ದಾರೆ’ ಎಂದು ಮುಖಂಡ ನೆಹರೂ ಬಂಡಿವಡ್ಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಹತ್ತು ವರ್ಷಗಳ ಹಿಂದೆ ವೃತ್ತವನ್ನು ಇನ್ನೂ ಅಂಲಕಾರಿಕವಾಗಿ, ಸುಂದರವಾಗಿ ಮಾಡುವ ಉದ್ದೇಶದಿಂದ ಈಗಿನ ಬಬಲೇಶ್ವರ ಮತಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ, ವೃತ್ತದ ಅಭಿವೃದ್ಧಿ ಕುರಿತು ಸಹಾಯ ಕೇಳಿದ್ದರು. ಅವರಿಂದ ವೃತ್ತದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕಂಬಗಳು, ಸುತ್ತ ಕಬ್ಬಿಣದ ಗ್ರಿಲ್‌ ಅಳವಡಿಕೆ, ಸಿಮೆಂಟ್ ಚಾವಣಿ, ಚಾವಣಿ ಮೇಲೆ ವೃತ್ತಾಕಾರದ ಸಣ್ಣ ಗೋಪುರ, ಗೋಪುರದ ಮೇಲೆ ಧ್ವಜ, ಗ್ರಿಲ್ ಹೊರಗಡೆ ರಾಷ್ಟ್ರ ಧ್ವಜದದ್ವಜದ ಕಟ್ಟೆ ಹಾಗೂ ಕಂಬವನ್ನು ನಿರ್ಮಿಸಿದ್ದಾರೆ.

*
ನಮ್ಮ ತಂದೆ, ಚಿಕ್ಕಪ್ಪ ಹಾಗೂ ನಮ್ಮ ಓಣಿಯ ಹಿರಿಯರು ಮಹಾತ್ಮ ಗಾಂಧಿ ಅವರ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ಹೀಗಾಗಿ, ಗಾಂಧಿ ವೃತ್ತ ನಿರ್ಮಿಸಿದ್ದಾರೆ.
-ಉಮೇಶ ಬಂಡಿವಡ್ಡರ, ಯುವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT