ಸೋಮವಾರ, ಮೇ 10, 2021
19 °C
ಸಹಜ ಸ್ಥಿತಿಗೆ ಕೆಎಸ್‌ಆರ್‌ಟಿಸಿ, 600ಕ್ಕೂ ಹೆಚ್ಚು ಚಾಲಕ, ನಿರ್ವಾಹಕರು ಹಾಜರು

ಮುಷ್ಕರ ನಡುವೆಯೂ 310 ಬಸ್‌ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆರನೇ ವೇತನ ಆಯೋಗ ವರದಿ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ನಡುವೆಯೂ ಭಾನುವಾರ ಜಿಲ್ಲೆಯಲ್ಲಿ 310 ಬಸ್‌ಗಳು ಸಂಚರಿಸಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.

ಏ.7ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವುದರಿಂದ ಬಸ್ ಸಂಚಾರ ಅಸ್ತವ್ಯಸ್ತಗೊಂಡು, ಕೋಟ್ಯಂತರ ರೂಪಾಯಿ ಆದಾಯಕ್ಕೂ ಹೊಡೆತ ಬಿದ್ದಿತ್ತು. ಈ ವರೆಗೆ ಹಾಸನ ವಿಭಾಗಕ್ಕೆ ₹5.50 ಕೋಟಿ ನಷ್ಟ ಸಂಭವಿಸಿದೆ.  ಅಧಿಕಾರಿಗಳು ನೌಕರರು ಮನವೊಲಿಸುವ ಕಾರ್ಯ ಮುಂದುವರೆಸಿದ್ದು, ಹಂತ ಹಂತವಾಗಿ ಬಸ್‌ಗಳ ಸಂಚಾರ ಹೆಚ್ಚುತ್ತಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಹೊಳೆನರಸೀಪುರ, ಅರಸೀಕೆರೆ, ಬೇಲೂರು, ಸಕಲೇಶಪುರ, ಅರಕಲಗೂಡು ಮಾರ್ಗದಲ್ಲಿ ಬಸ್‌ಗಳು ಸಂಚರಿಸಿವೆ. ಖಾಸಗಿ ವಾಹನದಲ್ಲಿ ಹೆಚ್ಚು ಹಣ ನೀಡಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತುಸು ನಿಟ್ಟಿಸಿರುವ ಬಿಡುವಂತಾಗಿದೆ.

ಹಾಸನ ವಿಭಾಗದಲ್ಲಿ ಎರಡು ಸಾವಿರ ನೌಕರರು ಕೆಲಸ ಮಾಡುತ್ತಿದ್ದು,  600ಕ್ಕೂ ಹೆಚ್ಚು ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಡಿಪೋ ನೌಕರರು ಸಹ ಕರ್ತವ್ಯಕ್ಕೆ ಮರಳುತ್ತಿದ್ದು, ಸಾರಿಗೆ ವ್ಯವಸ್ಥೆ ಹಳಿಗೆ ಮರಳುತ್ತಿದೆ.

ಮುಷ್ಕರ ಆರಂಭವಾದಾಗಿನಿಂದ ಕಿಡಿಗೇಡಿಗಳು ನಾಲ್ಕು ಸಾರಿಗೆ ಬಸ್‌ಗೆ ಕಲ್ಲುತ ತೂರಿ ನಷ್ಟ ಉಂಟು ಮಾಡಿದ್ದಾರೆ. ಮೈಸೂರಿನಿಂದ ಸಕಲೇಶಪುರಕ್ಕೆ ಬರುತ್ತಿದ್ದ ಬಸ್‌ಗೆ ಹಾಸನ ಹೊರವಲಯದ ಅಲ್ಲಾನಾ ಕಾಫಿ ಕ್ಯೂರಿಂಗ್‌ ಸಮೀಪ ಕಲ್ಲು ತೂರಲಾಗಿದೆ. ಬೇಲೂರಿನಿಂದ ಹಾಸನಕ್ಕೆ ಬರುತ್ತಿದ್ದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ಸಾಣೇನಹಳ್ಳಿ ಗಡಿ ಬಳಿ ಕಲ್ಲು ಹೊಡೆದಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಖಾಸಗಿ ವಾಹನಗಳ ಸಂಖ್ಯೆ ಕಡಿಮೆ ಆಗಿದ್ದು, ಸಾರಿಗೆ ಸಂಸ್ಥೆ ಬಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಾಲಕ, ನಿರ್ವಾಹಕರು ಸಹ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಭಾನುವಾರ 310 ಬಸ್‌ಗಳು ಸಂಚರಿಸಿವೆ. ಸೋಮವಾರ ಮತ್ತಷ್ಟು ಬಸ್‌ಗಳು ಸಂಚರಿಸಲಿವೆ’ ಎಂದು ನಿಲ್ದಾಣ ಮೇಲ್ವಿಚಾರಕ ಮಂಜುನಾಥ್‌ ‘ಪ್ರಜಾವಾಣಿ’ಗೆ  ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು