ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿಪಥ’ ಆರ್‌ಎಸ್‌ಎಸ್‌ ಚಿಂತನೆ ವಿಸ್ತರಿಸುವ ಯೋಜನೆ: ಕುಮಾರಸ್ವಾಮಿ ಆಕ್ರೋಶ

ಅಗ್ನಿಪಥ್ ಮೂಲಕ ನಾಝಿ ಪಡೆ ಜಾರಿಗೆ ತರುವ ಹುನ್ನಾರ
Last Updated 22 ಜೂನ್ 2022, 9:46 IST
ಅಕ್ಷರ ಗಾತ್ರ

ಹಾಸನ: ಹಿಂದೆ ಹಿಟ್ಲರ್ ಕಾಲದಲ್ಲಿದ್ದ ನಾಝಿ ಪಡೆಯನ್ನು ನಮ್ಮ ಕಾಲದಲ್ಲಿ ಜಾರಿಗೆ ತರುವಂತಹ ಒಂದು ಪ್ರಾಯೋಗಿಕವಾದ ಕಾರ್ಯಕ್ರಮ ಅಗ್ನಿಪಥಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಇದ್ದಂತಹ ಸೇನಾ ನೇಮಕಾತಿ ಪದ್ಧತಿ ವ್ಯವಸ್ಥೆಯಲ್ಲಿ ದೇಶದ ರಕ್ಷಣೆ ಆಗಿಲ್ಲವೇ? ಅಗ್ನಿಪಥಯೋಜನೆಯನ್ನು ಯಾವ ಉದ್ದೇಶಕ್ಕೆ ತರಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದರು.

ಆರ್‌ಎಸ್‌ಎಸ್‌ ಸಂಸ್ಥೆ ಮೂಲಕ ಅಗ್ನಿಪಥಯೋಜನೆ ಜಾರಿ ಮಾಡಲಾಗುತ್ತಿದ್ದು, ಅಲ್ಲಿ ಕೆಲಸ ಮಾಡುವವರಿಂದ ಅಲ್ಲಿಯ ಚಟುವಟಿಕೆಗಳನ್ನು ಈ ಮೂಲಕ ವಿಸ್ತರಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ದೂರಿದರು.

ಈ ಯೋಜನೆ ತರಲು ಸಂಸತ್ತಿನ ಸ್ಥಾಯಿ ಸಮಿತಿಸುದೀರ್ಘವಾಗಿ ಚರ್ಚೆ ಮಾಡಿ ಜಾರಿಗೆ ಮುಂದಾಗಿದೆಯೇ? ರಕ್ಷಣಾ ಇಲಾಖೆಯವರು ಶಿಫಾರಸು ಮಾಡಿದ್ದಾರೆಯೇ? ಯಾವ ಉದ್ದೇಶದಿಂದ ಏಕಾಏಕಿ 10 ಲಕ್ಷ ಜನ ಯುವಕರಿಗೆ ಕೆಲಸ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಇ.ಡಿ ವಿಚಾರಣೆ ಸರಿಯಾದ ಕ್ರಮವಲ್ಲ: ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಐದು ದಿನ ನಿರಂತರವಾಗಿ ರಾಹುಲ್ ಗಾಂಧಿ ಅವರನ್ನು ವಿಚಾರಣೆ ಮಾಡಿದ್ದಾರೆ. ಸಂಪೂರ್ಣ ದಾಖಲೆ ಇಡಿ ಬಳಿ ಇದ್ದರೂ, ಪದೇಪದೇ ಕರೆದು ವಿಚಾರಣೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಈ ರೀತಿಯ ತನಿಖಾ ವ್ಯವಸ್ಥೆ ಜನರಲ್ಲಿ ಅನುಮಾನ ಮೂಡಿಸುತ್ತದೆ. ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ. ಅದನ್ನು ಬಿಟ್ಟು ವಿಚಾರಣೆ ನೆಪದಲ್ಲಿ ದಿನ ಕಿರುಕುಳ ಕೊಡುತ್ತಿರುವುದು ಸರಿಯಲ್ಲ ಎಂದರು.
ಪರ್ಸೆಂಟೇಜ್‌ ಸರ್ಕಾರ: ಬಿಜೆಪಿಯ ಬಗ್ಗೆ ಬೀದಿ ಬೀದಿಗಳಲ್ಲಿ ಜನ ಮಾತನಾಡುತ್ತಿದ್ದಾರೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿಗೆ ಶೇ 40 ಸರ್ಕಾರ ಎಂದು ಪತ್ರ ಬರೆದರು. ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆಯೇ? ಪಿಎಂ ಕಚೇರಿ ಇದಕ್ಕೆ ಏಕೆ ಉತ್ತರ ನೀಡಲಿಲ್ಲ? ಸುಬ್ರಹ್ಮಣ್ಯಸ್ವಾಮಿ ಅರ್ಜಿ ಕೊಟ್ಟ ಕೂಡಲೇ ತನಿಖೆ ನಡೆಸುತ್ತಾರೆ. ಕೆಂಪಣ್ಣನ ಅರ್ಜಿಗೆ ಏಕೆ ಬೆಲೆ ಇಲ್ಲ ಎಂದು ಕೇಳಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಪರ್ಸೆಂಟೇಜ್ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಆದರೆ ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದಾಗ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು‌.

ಎಲ್ಲವೂ ಮೋದಿ ಸಾಧನೆಯಲ್ಲ:ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿರುವುದು ಸಂತಸ ತಂದಿದೆ. ನಾಗರಿಕರ ಜೊತೆಯಲ್ಲಿ ಯೋಗ ದಿನಾಚರಣೆ ಮಾಡಿರುವುದಕ್ಕೆ ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆದರೆ ರಾಜ್ಯದಲ್ಲಿ ಭಾಷಣ ಮಾಡಿದ ಮೋದಿ ಅವರು ಯೋಚನೆ ಮಾಡಿ ಮಾತನಾಡಬೇಕಾಗಿತ್ತು. ಯಾವ ಸರ್ಕಾರಗಳು ಏನೂ ಮಾಡಿಯೇ ಇಲ್ಲ ಎಂಬಂತೆ ಭಾಷಣವನ್ನು ಮಾಡಿರುವುದು ಸರಿಯಲ್ಲ ಎಂದರು.

ಸ್ವಾತಂತ್ರ್ಯ ಬಂದಾಗ ಈ ದೇಶದ ಪರಿಸ್ಥಿತಿ ಏನಾಗಿತ್ತು. ನಂತರದ ದಿನಗಳಲ್ಲಿ ದೇಶದಲ್ಲಿ ಯಾವ ರೀತಿಯ ಬೆಳವಣಿಗೆಯಾಗಿದೆ ಎಂದು ಅವರು ತಿಳಿದಿದ್ದಾರೆ. ಆದರೆ ಬೇರೆ ಸರ್ಕಾರಗಳು ಏನೂ ಮಾಡಿಲ್ಲ ಎಂಬ ರೀತಿಯಲ್ಲಿ, ನನ್ನಿಂದಲೇ ಎಲ್ಲವೂ ಆಗಿದೆ ಎಂಬಂತೆ ಬಿಂಬಿಸುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು.

ನೆಹರು ಅವರು ಪ್ರಧಾನಿಯಾಗಿದ್ದಾಗ ಕೈಗಾರಿಕೆ, ನೀರಾವರಿಗೆ ಇಟ್ಟಿದ್ದ ಬಜೆಟ್, ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು. ಬೆಂಗಳೂರು ಅಭಿವೃದ್ಧಿಗೆ ₹33 ಸಾವಿರ ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ನೆರವೇರಿಸಿದ್ದಾರೆ. ಇದರಲ್ಲಿ ಒಬ್ಬರ ಪಾತ್ರ ಮಾತ್ರ ಇದೆಯೇ ಎಂದು ಪ್ರಶ್ನಿಸಿದ ಅವರು, ಹಿಂದಿನ ಸರ್ಕಾರಗಳು ಬೆಂಗಳೂರು ಅಭಿವೃದ್ಧಿಗೆ ರೂಪುರೇಷಗಳನ್ನು ಸಿದ್ಧಪಡಿಸಿದ್ದವು. ₹15ಸಾವಿರ ಕೋಟಿಯ ಸಬ್‌ರ್ಬನ್‌ ರೈಲು ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಪ್ರಧಾನಿ 40 ವರ್ಷದಲ್ಲಿ ಆಗಿರಲಿಲ್ಲ. 40 ತಿಂಗಳಿನಲ್ಲಿ ಮಾಡುತ್ತೇನೆ ಎಂದಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಹಿಂದಿನ ಸರ್ಕಾರಗಳ ಕೊಡುಗೆಗಳನ್ನು ಸ್ಮರಿಸಬೇಕಿತ್ತು ಎಂದು ಹೇಳಿದರು.

ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇವೇಗೌಡರ ಜೊತೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಯೋಜನೆ ಕುರಿತು ಮಾತನಾಡಿದ್ದೆ, ಸಬ್‌ರ್ಬನ್ ರೈಲು ಯೋಜನೆ ಚಿಂತನೆ ಮಾಡಿದ್ದು ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ. ಅವರು ಅಧಿಕಾರದಿಂದ ಕೆಳಗಿಳಿದ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ ನರೇಂದ್ರ ಮೋದಿ ಅವರು ನನ್ನ ಕಾಲದಲ್ಲಿಯೇ ಆಗಿದೆ ಎಂದು ಬಿಂಬಿಸುತ್ತಿರುವುದು ಹಾಗೂ ದೇವೇಗೌಡರನ್ನು ಸ್ಮರಿಸಿಕೊಳ್ಳದಿರುವುದು ಅವರ ಮನೋಭಾವ ತೋರಿಸುತ್ತದೆ ಎಂದು ಟೀಕಿಸಿದರು.

ಮೈಸೂರಿನಲ್ಲಿ ನಡೆದ ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ಅವರನ್ನು ಕರೆತರಲು ₹32 ಕೋಟಿ ಖರ್ಚು ಮಾಡಿದ್ದಾರೆ. ಅದೇ ₹32 ಕೋಟಿಯಲ್ಲಿ ಒಂದು ಗ್ರಾಮ ಪಂಚಾಯಿತಿ ಉದ್ಧಾರ ಮಾಡಬಹುದಿತ್ತು. ದೇವೇಗೌಡರು ಪ್ರಧಾನ ಮಂತ್ರಿ ಆಗಿದ್ದಾಗ ಕರ್ನಾಟಕಕ್ಕೆ ಬರ್ತಾರೆ ಅಂದರೆ ತೊಂದರೆ ಆಗುತ್ತೆ ಎಂದು ಟೀಕೆ ಮಾಡುತ್ತಿದ್ದರು. ಆದರೆ ಮೋದಿ ಮಾಡುತ್ತಿರುವ ಕೆಲಸವಾದರೂ ಏನು ಎಂದು ಪ್ರಶ್ನಿಸಿದರು.

ಅಪರೇಷನ್ ಕಮಲ: ಮಹಾರಾಷ್ಟ್ರದಲ್ಲಿ ರಾಜಕೀಯದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಆಪರೇಷನ್ ಕಮಲ ಮಾಡುತ್ತಿದ್ದಾರಲ್ಲ. ಇದು ಪ್ರಜಾಪ್ರಭುತ್ವ ಉಳಿಸುವ ಕಾರ್ಯಕ್ರಮವೇ ಎಂದು ಪ್ರಶ್ನಿಸಿದರು.
ಆಡಳಿತ ನಡೆಸುವ ಸರ್ಕಾರಗಳನ್ನು ದಮನ ಮಾಡಿ, ಬಿಜೆಪಿ ಸರ್ಕಾರ ತರಲು ಪ್ರಜಾಪ್ರಭುತ್ವವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಿಮೋಟ್ ಕಂಟ್ರೋಲ್ ಸಿಎಂ: ಬಸವರಾಜ ಬೊಮ್ಮಾಯಿ ಅವರು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ. ‌ಸ್ವತಂತ್ರವಾಗಿ ಅಧಿಕಾರ ನಡೆಸಲು ಅವರಿಗೆ ಆಗುತ್ತಿಲ್ಲ. ಎಲ್ಲವೂ ಕೂಡ ಕೇಶವ ಕೃಪಾದಿಂದ ಆದೇಶ ಬರಬೇಕಾಗಿದೆ ಎಂದು ಟೀಕಿಸಿದರು.
ಹಂತಹಂತವಾಗಿ ದೇಶದಲ್ಲಿ ಮನು ಸಂಸ್ಕೃತಿ ವಾತಾವರಣ ನಿರ್ಮಿಸಲು ಹೊರಟಿದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ವಿರೋಧಪಕ್ಷಗಳು ಮೊದಲು ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.

ಹಾಸನದಿಂದ ಸ್ವರೂಪ್‌ ಕಣಕ್ಕೆ?
ಮುಂದಿನ ವಿಧಾನಸಭೆ ಚುನಾವಣೆಗೆ ಹಾಸನ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾಗುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸ್ವರೂಪ್ ಅವರಿಗೆ ಕುಮಾರಸ್ವಾಮಿ ಪರೋಕ್ಷವಾಗಿ ಸೂಚನೆ ನೀಡಿದರು.
‘ಸ್ವರೂಪ್ ಇದೇ ರೀತಿ ಇದ್ದರೆ ಸಾಲದು. ಮತ್ತಷ್ಟು ಆ್ಯಕ್ಟೀವ್‌ ಆಗಬೇಕು’ ಎಂದು ಹೇಳುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಹಾಸನದಿಂದ ಸ್ವರೂಪ್ ಅವರನ್ನು ಕಣಕ್ಕಿಳಿಸುವ ಇರಾದೆಯನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT