ಆಲೂರು: 16 ತಿಂಗಳಿನಿಂದ ಮೀಸ ಲಾತಿ ಪ್ರಕಟಣೆಯಾಗದೇ ನನೆಗುದಿಗೆ ಬಿದ್ದಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಆ. 26 ರಂದು ನಡೆಯಲಿದೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ಮಹಿಳೆ ಮೀಸಲಾಗಿದ್ದು, ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದೇ ಇರುವುದರಿಂದ ಚುನಾವಣೆ ಕುತೂಹಲ ಕೆರಳಿಸಿದೆ.
ಜೆಡಿಎಸ್ 5, ಬಿಜೆಪಿ 2, ಕಾಂಗ್ರೆಸ್ 1 ಮತ್ತು ಪಕ್ಷೇತರ 3 ಸದಸ್ಯರು ಸೇರಿ ಒಟ್ಟು 11 ಸದಸ್ಯರಿದ್ದರು. ಇತ್ತೀಚೆಗೆ ಜೆಡಿಎಸ್ ಸದಸ್ಯ ಟಿ.ಎಸ್. ಅರುಣನಾಯಕ್ ಮೃತಪಟ್ಟಿದ್ದು, ಸದ್ಯ 10 ಸದಸ್ಯರಿದ್ದಾರೆ. ಎಚ್.ಸಿ. ವೇದಾ, ಎಂ.ಎ. ನಿಂಗರಾಜು (ಪಾಪು), ಜಯಮ್ಮ, ಡಿ.ಪಿ. ರಾಣಿ ಜೆಡಿಎಸ್‌ನಿಂದ ಗೆದ್ದಿದ್ದು, ಎಂ. ಬಿ. ಧರ್ಮರಾಜ್, ಎ. ವಿ. ಸಂತೋಷ ಬಿಜೆಪಿ ಸದಸ್ಯರಾಗಿದ್ದಾರೆ. ತೌಫಿಕ್, ಅಬ್ದುಲ್ ಖುದ್ದೂಸ್, ಕೆ. ಹರೀಶ್ ಪಕ್ಷೇತರ ಮತ್ತು ತಾಹಿರಾ ಬೇಗಂ ಕಾಂಗ್ರೆಸ್ ಸದಸ್ಯೆಯಾಗಿದ್ದಾರೆ.
ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಅದೇ ರೀತಿಯ ಸ್ಥಳೀಯವಾಗಿಯೂ ಮೈತ್ರಿ ಮುಂದುವರಿಸಲು ಉಭಯ ಪಕ್ಷಗಳು ಆಸಕ್ತಿ ತೋರಿವೆ. ಹೀಗಾದರೆ, ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಸಿಗುವ ಸಾಧ್ಯತೆಗಳಿವೆ.
ಮೈತ್ರಿಕೂಟದಿಂದ ಅಧ್ಯಕ್ಷ ಸ್ಥಾನಕ್ಕೆ ಡಿ.ಪಿ. ರಾಣಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಯಮ್ಮ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿಯಲ್ಲಿ ಮಹಿಳಾ ಸದಸ್ಯರು ಇಲ್ಲದೇ ಇರುವು ದರಿಂದ ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಅನಿವಾರ್ಯವಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಜೆಡಿಎಸ್ ಲೆಕ್ಕಾಚಾರ: ಇಲ್ಲಿನ ಪುರಸಭೆಯಲ್ಲಿ 4 ಸ್ಥಾನ ಪಡೆದಿರುವ ಜೆಡಿಎಸ್, ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳನ್ನು ಉಳಿಸಿಕೊಳ್ಳುವ ವಿಶ್ವಾಸ ಹೊಂದಿದೆ. ಜೆಡಿಎಸ್ ನಾಲ್ಕು, ಬಿಜೆಪಿ ಎರಡು, ಒಬ್ಬ ಪಕ್ಷೇತರರು ಹಾಗೂ ಶಾಸಕರ ಮತ ಸೇರಿ 8 ಮತಗಳು ಸಿಗಲಿವೆ. ಹೀಗಾಗಿ ಎರಡೂ ಸ್ಥಾನಗಳು ತಮಗೆ ದೊರೆಯಲಿವೆ ಎನ್ನುವ ಭರವಸೆ ಮುಖಂಡರದ್ದಾಗಿದೆ.
ಒಂದೇ ಸ್ಥಾನ ಪಡೆದಿರುವ ಕಾಂಗ್ರೆಸ್ ಕೂಡ ಅಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ಆರಂಭಿಸಿದೆ. ಕಾಂಗ್ರೆಸ್ ಪಕ್ಷದ ಏಕೈಕ ಸದಸ್ಯೆ ತಾಹಿರಾಬೇಗಂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಜೊತೆಗೆ ಪಕ್ಷೇತರರು ಸೇರಿದರೆ, ಇನ್ನೆರಡು ಮತಗಳು ಬೇಕಾಗಲಿವೆ. ಸಂಸದರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಉಳಿದ ಇನ್ನೊಂದು ಮತಕ್ಕಾಗಿ ಬಿಜೆಪಿ ಅಥವಾ ಜೆಡಿಎಸ್ ಸದಸ್ಯರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.