ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ಪಕ್ಷದ ಮುಖಂಡರಿಗೆ ಜೆಡಿಎಸ್‌ ಗಾಳ

ಬಿಜೆಪಿ ವಿರುದ್ಧ ನಾಯಕರ ವಾಗ್ದಾಳಿ, ಪ್ರಜ್ವಲ್‌ ಬೆಂಬಲಿಸಲು ಮನವಿ
Last Updated 27 ಮಾರ್ಚ್ 2019, 17:16 IST
ಅಕ್ಷರ ಗಾತ್ರ

ಹಾಸನ: ಚುನಾವಣೆಯಲ್ಲಿ ಪ್ರಚಾರ ಚುರುಕುಗೊಳಿಸಿರುವ ಜೆಡಿಎಸ್, ಅದರ ಜೊತೆಯಲ್ಲೇ ಅನ್ಯ ಪಕ್ಷಗಳ ಮುಖಂಡರಿಗೆ ಗಾಳ ಹಾಕುವುದನ್ನು ಮುಂದುವರಿಸಿದೆ.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಮಾಜಿ ಶಾಸಕ ಬಿ.ವಿ.ಕರೀಗೌಡ, ಗ್ರಾಮಾಂತರ ಮಂಡಲ ಅಧ್ಯಕ್ಷ ಅಗಿಲೆ ಯೋಗೇಶ್, ಕಟ್ಟಾಯ ಅಶೋಕ್, ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಅವರ ನೂರಾರು ಬೆಂಬಲಿಗರು, ರೇವಣ್ಣ, ಭವಾನಿ ರೇವಣ್ಣ ಹಾಗೂ ಪ್ರಜ್ವಲ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು.

ಈ ವೇಳೆ ಮಾತನಾಡಿದ ಬಹುತೇಕ ಮುಖಂಡರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ಭವಾನಿ ರೇವಣ್ಣ ಮಾತನಾಡಿ, ‘ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ. ನಮ್ಮ ಕುಟುಂಬದ ವಿರುದ್ಧ ಮಾತನಾಡುವ ಒಬ್ಬರು ಅಭ್ಯರ್ಥಿಯಾಗಿದ್ದಾರೆ. ಅವರ ಮಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಪತ್ನಿ ತಾರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು’ ಎಂದು ಪರೋಕ್ಷವಾಗಿ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದರು.

‘ಪ್ರಜ್ವಲ್‌ ಸ್ಪರ್ಧಿಸಬೇಕೆಂಬುದು ಗೌಡರು ಹೇಳಲಿಲ್ಲ. ಜನರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಬೇಕಾಯಿತು. ಅದಕ್ಕೂ ಮುನ್ನ ದೊಡ್ಡಗೌಡರು ಶಾಸಕರು, ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ, ಅಭಿಪ್ರಾಯ ಪಡೆದು ಹೆಸರು ಘೋಷಿಸಿದರು ಎಂದು ಭವಾನಿ ಸ್ಪಷ್ಟಪಡಿಸಿದರು.

ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಕೋಮುವಾದಿಗಳನ್ನು ದೂರವಿಡಲು ಅತೃಪ್ತ ಮುಖಂಡರು ಜೆಡಿಎಸ್ ಸೇರಿದ್ದಾರೆ. ನಿಷ್ಠೆಯಿಂದ ದುಡಿದವರನ್ನು ಬಿಜೆಪಿ ಕಡೆಗಣಿಸಿದೆ. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಭ್ಯರ್ಥಿ ಆರ್‌. ಪ್ರಜ್ವಲ್ ಮಾತನಾಡಿ, ‘ರೈತರ ಬಗ್ಗೆ ಕಾಳಜಿ ಹೊಂದಿರುವ ಹಲವು ನಾಯಕರು ಜೆಡಿಎಸ್ ಸೇರುತ್ತಿದ್ದಾರೆ. ಜವಾಬ್ದಾರಿ ಹೊಂದಿರುವ ಶಾಸಕರು ಹಾದಿ, ಬೀದಿಯಲ್ಲಿ ಹೋಗುವವರು ಪಕ್ಷಕ್ಕೆ ಸೇರುತ್ತಿದ್ದಾರೆ ಎಂಬ ಬೇಜಾವ್ದಾರಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಸ್ವಾಭಿಮಾನಕ್ಕೆ ಸವಾಲೆಸೆದಿರುವ ಪ್ರೀತಂ ಗೌಡ ಅವರು ಮೇ 23 ರಂದು ತಲೆ ತಗ್ಗಿಸುವಂತೆ ಮಾಡುತ್ತೇನೆ’ ಎಂದು ಭವಿಷ್ಯ ನುಡಿದರು.

ಬಿ.ವಿ.ಕರೀಗೌಡ ಮಾತನಾಡಿ, ‘ಬಿಜೆಪಿಯ ಸೈದ್ಧಾಂತಿಕ ತತ್ವಗಳನ್ನು ನಂಬಿ ಆ ಪಕ್ಷಕ್ಕೆ ಸೇರಿದ್ದೆ. ಕುಟುಂಬ ರಾಜಕಾರಣ ಎಲ್ಲರಲ್ಲೂ ಇದೆ. ಇದಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಕೂಡ ಹೊರತಲ್ಲ ಎಂದು ಕುಟುಕಿದರು.
ಜಿಲ್ಲೆಯ ಅಭಿವೃದ್ಧಿಗೆ ಇಷ್ಟು ಪ್ರಮಾಣದ ಅನುದಾನ ಯಾರೂ ತಂದಿಲ್ಲ. ರೇವಣ್ಣ ಅವರೇ ನಮ್ಮ ಮುಂದಿನ ನಾಯಕ. ಪ್ರಜ್ವಲ್ ರೇವಣ್ಣ ಜಿಲ್ಲೆಗೆ ಮುಂದಿನ ಉತ್ತರಾಧಿಕಾರಿ ಎಂದರು.

ಶಾಸಕ ಪ್ರೀತಂಗೌಡ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಅಗಿಲೆ ಯೋಗೇಶ್, ‘ಪ್ರೀತಂಗೌಡ ಬೆಳೆಯಲ್ಲ ಕಳೆ. ಬ್ರೋಕರ್, ದಲ್ಲಾಳಿ ಕೆಲಸ ಮಾಡಿಕೊಂಡಿದ್ದಾರೆ. ರಾಜಕೀಯಕ್ಕೆ ಬಂದಿದ್ದು ಹಣ ಮಾಡಲು’ ಎಂದು ಕಿಡಿಕಾರಿದರು.

‘ಯಡಿಯೂರಪ್ಪ ಪ್ರೀತಂಗೌಡ ನಂಥ ಮೂರ್ಖನನ್ನು ನಂಬಿದ್ದಾರೆ. ಅವರು ನಡೆದು ಬಂದ ದಾರಿಯನ್ನು‌ ಒಮ್ಮೆ ನೋಡಿಕೊಳ್ಳಲಿ. ನನ್ನ ಹೋರಾಟದ ಪ್ರತಿಫಲದಿಂದ ಅವರು ಶಾಸಕರಾಗಿದ್ದಾರೆ’ ಎಂದು ಟೀಕಿಸಿದರು.

ಬಿ.ವಿ.ಕರೀಗೌಡ, ಅಗಿಲೆ ಯೋಗೀಶ್, ಮಂಜುನಾಥ್ ಶರ್ಮ, ಕಟ್ಟಾಯ ಅಶೋಕ್, ನಾಗೇಶ್, ಕುಮಾರ್, ಸುಬ್ಬಣ್ಣ, ಸುರೇಶ್‌, ಪ್ರಭು, ಪರಮೇಶ್‌, ಮಂಜುಳಾ ರುದ್ರೇಗೌಡ, ಮೋಹನ್‌, ತೇಜುರ್‌ ಆನಂದ, ರತ್ನಕ್ಕ, ಗೊರುರು ಸಲೀಂ, ಸತ್ಯಮಂಗಲ ನವೀನ್‌, ಮಧು, ದೇವರಾಜ್‌, ಬಾಬು, ಎಬಿವಿಪಿ ಅಮಿತ್‌ ಸೇರಿದಂತೆ ಹಲವು ಮುಖಂಡರಿಗೆ ಸಚಿವ ಎಚ್.ಡಿ.ರೇವಣ್ಣ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ರಾಜೇಗೌಡ, ಮುಖಂಡ ಪಟೇಲ್ ಶಿವರಾಂ, ಸುರೇಶ್‌, ಚನ್ನವೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT