ಬುಧವಾರ, ಆಗಸ್ಟ್ 10, 2022
23 °C
ಖಾಸಗಿ ಶಿಕ್ಷಣ ಸಂಸ್ಥೆ ತೊರೆದ ಮೂರು ಸಾವಿರ ಮಕ್ಕಳು

ಹಾಸನ: ಸರ್ಕಾರಿ ಶಾಲೆಗಳತ್ತ ಹೆಚ್ಚಿದ ಆಕರ್ಷಣೆ

ಕೆ.ಎಸ್.ಸುನಿಲ್‌‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ  ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರವೇಶ ಪಡೆದಿದ್ದಾರೆ. ಕೊರೊನಾ ಲಾಕ್‌ಡೌನ್‌ ತಂದಿಟ್ಟ ಆರ್ಥಿಕ ಸಂಕಷ್ಟದಿಂದಾಗಿ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಅಂದಾಜು ಮೂರು ಸಾವಿರ ಮಕ್ಕಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಸೇರಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಂಕಿ ಅಂಶ ಪ್ರಕಾರ ಆಗಸ್ಟ್‌ 31ರವರೆಗೆ ಎಲ್‌ಕೆಜಿ ಯಿಂದ ಹತ್ತನೇ ತರಗತಿವರೆಗೆ 1,63,000 ಮಕ್ಕಳ ದಾಖಲಾತಿ ಆಗಿದೆ. ಈ ಪೈಕಿ ಸರ್ಕಾರಿ ಶಾಲೆಗೆ 77,661 , ಅನುದಾನಿತ ಶಾಲೆಗೆ 21,285 , ಅನುದಾನ ರಹಿತ ಶಾಲೆಗೆ 57,432 ಮಕ್ಕಳು ದಾಖಲಾಗಿದ್ದಾರೆ.

ಒಂದನೇ ತರಗತಿಗೆ ದಾಖಲಾಗಿರುವ 8,382 ಮಕ್ಕಳ ಪೈಕಿ ಸರ್ಕಾರಿ ಶಾಲೆಗೆ 5,393, ಅನುದಾನಿತ ಶಾಲೆಗೆ 577, ಅನುದಾನ ರಹಿತ ಶಾಲೆಗೆ 2,412 ಮಕ್ಕಳು ಸೇರ್ಪಡೆಯಾಗಿದ್ದಾರೆ. ಈ ಬಾರಿ ಅಂದಾಜು 3 ಸಾವಿರ ಮಕ್ಕಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗೆ ಬಂದಿದ್ದಾರೆ.

ಖಾಸಗಿ ಶಾಲೆಗಳ ಮೇಲೆ ಒಲವಿದ್ದರೂ ಹಲವು ಕಾರಣಗಳಿಂದ ಪಾಲಕರು ತಮ್ಮ ನಿರ್ಧಾರ ಬದಲಿಸಿದ್ದಾರೆ. ಶಾಲೆಗಳು
ಇನ್ನೂ ಆರಂಭಗೊಂಡಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಹಲವರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ದುಬಾರಿ ಶುಲ್ಕ ಪಾವತಿಸಿ ಮಕ್ಕಳನ್ನು ಓದಿಸುವುದು ಹೊರೆಯಾಗಿದೆ.

ಅಲ್ಲದೇ, ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯವಾದ ಮೊಬೈಲ್‌ ಇಲ್ಲದಿರುವುದು, ಹಳ್ಳಿಗಳಲ್ಲಿ ಇಂಟರ್‌ನೆಟ್‌ , ನೆಟ್‌ವರ್ಕ್ ಸಮಸ್ಯೆ ಸಹ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಕರೆ ತರುತ್ತಿವೆ.

ಜತೆಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಮನೆ ಬಾಗಿಲಿಗೆ ಬಂದು ಪಾಠ ಮಾಡುತ್ತಿದ್ದಾರೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಕ್ಕಳು ದೂರದ ಖಾಸಗಿ ಶಾಲೆಗಳಲ್ಲಿ ಓದುವ ಬದಲು ಹತ್ತಿರದ ಶಾಲೆಗಳಲ್ಲಿ ಓದಲಿ ಎಂಬುದು ಪೋಷಕರ ನಿಲುವಾಗಿದೆ.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶುಲ್ಕ ಪಾವತಿಸುವಂತೆ ಪೋಷಕರಿಗೆ ಸೂಚಿಸುತ್ತಿವೆ. ದುಬಾರಿ ಶುಲ್ಕ ಕೊಟ್ಟು ಖಾಸಗಿ ಶಾಲೆಗೆ ಸೇರಿಸಿದರೂ ಈ ವರ್ಷ ತರಗತಿ ನಡೆಯುವುದೇ ಅನುಮಾನ ಎಂಬ ಸ್ಥಿತಿ ಇರುವುದರಿಂದ ಹಲವರು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.

‘ಕೊರೊನಾ ಲಾಕ್‌ಡೌನ್‌ದಿಂದ ಉದ್ಯೋಗ ಕಳೆದುಕೊಂಡು, ವ್ಯವಹಾರದಲ್ಲಿ ನಷ್ಟ ಅನುಭವಿಸಿ ಸಾವಿರಾರು
ಕುಟುಂಬಗಳು ಹಳ್ಳಿಗಳನ್ನು ಸೇರಿವೆ. ಆರ್ಥಿಕ ಸಮಸ್ಯೆ ಉಂಟಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಸೌಲಭ್ಯ
ನೀಡಲಾಗುತ್ತಿದೆ. ವಿದ್ಯಾಗಮ ಕಾರ್ಯಕ್ರಮದ ಅಡಿ ಮನೆ ಬಾಗಿಲಿಗೆ ತೆರಳಿ ಪಾಠ ಹೇಳುತ್ತಿದ್ದೇವೆ. ವಠಾರ ಶಾಲೆ ಮೂಲಕ ಕಲಿಕೆ ನಡೆಯುತ್ತಿದೆ. ಚಂದನವಾಹಿನಿಯಲ್ಲಿ ಸಂವೇದ ಕಾರ್ಯಕ್ರಮ ಮೂಲಕ ಕಲಿಕಾ ಬೋಧನಾ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದ ದಾಖಲಾತಿ ಏರಿಕೆಯಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್‌.ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಉಚಿತ ಉಪಹಾರ, ಬೈಸಿಕಲ್‌, ಸಮವಸ್ತ್ರ, ಪುಸ್ತಕ ನೀಡಲಾಗುತ್ತಿದೆ. ಕಳೆದ ವರ್ಷವೇ 39 ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೂ ಸೇರಿಸಬಹುದು’ ಎಂದರು.

‘ವಿದ್ಯಾಗಮ ಕಾರ್ಯಕ್ರಮದಡಿ ಶಿಕ್ಷಕರು ಮನೆಗೆ ಬಾಗಿಲಿಗೆ ಬಂದು ಪಾಠ ಮಾಡುತ್ತಿರುವುದರಿಂದ ಮಕ್ಕಳ ಸುರಕ್ಷತೆ ಜತೆಗೆ ಉತ್ತಮ ಕಲಿಕೆಯೂ ಸರ್ಕಾರಿ ಶಾಲೆಗಳಲ್ಲಿ ಸಾಧ್ಯ ಎಂಬ ಭರವಸೆ ಪಾಲಕರಲ್ಲಿ ಮೂಡುತ್ತಿದೆ. ಹಾಸನ ತಾಲ್ಲೂಕಿನ ಶ್ರೀರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಮಕ್ಕಳು ಸೇರ್ಪಡೆಯಾಗಿದ್ದಾರೆ. ಈ ತಿಂಗಳ ಅಂತ್ಯದವರೆಗೆ ಪ್ರವೇಶ ಇರುವುದರಿಂದ ಇನ್ನಷ್ಟು ಮಕ್ಕಳು ಸೇರುವ ಸಾಧ್ಯತೆ ಇದೆ’ ಎಂದು ಶಿಕ್ಷಕ ಪರಮೇಶ್‌ ಹೇಳಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದುಬಾರಿ ಶುಲ್ಕ ಪಾವತಿಸುವ ಬದಲು ಶ್ರೀರಾಂಪುರ ಸರ್ಕಾರಿ ಶಾಲೆಯ 1 ಮತ್ತು 2ನೇ ತರಗತಿಗೆ ನಮ್ಮ ಇಬ್ಬರು ಮಕ್ಕಳನ್ನು ಸೇರಿಸಿದ್ದೇವೆ. ಉಚಿತವಾಗಿ ಸೌಲಭ್ಯಗಳೂ ಸಿಗಲಿವೆ’ಎಂದು ಪೋಷಕರಾದ ಉಮೇಶ್‌, ಶೃತಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು