ಬರ ಪೀಡಿತ ಜಿಲ್ಲೆಯೆಂದು ಘೋಷಿಸಿ: ರೇವಣ್ಣ

ಭಾನುವಾರ, ಜೂಲೈ 21, 2019
22 °C
ಪ್ರತಿ ತಾಲ್ಲೂಕಿಗೂ ₹ 5 ಕೋಟಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಒತ್ತಾಯ

ಬರ ಪೀಡಿತ ಜಿಲ್ಲೆಯೆಂದು ಘೋಷಿಸಿ: ರೇವಣ್ಣ

Published:
Updated:
Prajavani

ಹಾಸನ: ಪ್ರಸಕ್ತ ವರ್ಷವೂ ಹಾಸನವನ್ನು ಬರ ಪೀಡಿತ ಜಿಲ್ಲೆಯೆಂದು ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಇಲ್ಲದೆ ಕೆರೆ, ಕಟ್ಟೆ ಹಾಗೂ ಬೆಳೆಗಳು ಒಣಗಿವೆ. ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ಪರದಾಡುವಂತಾಗಿದೆ. ಪ್ರತಿ ತಾಲ್ಲೂಕಿಗೆ ಕನಿಷ್ಠ ₹ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ನೀರಾವರಿ ಪಂಪ್‌ ಸೆಟ್‌ ಇರುವ ಕಡೆ ಜಾನುವಾರುಗಳಿಗೆ ಮೇವು ಬೆಳೆಸಲು ರೈತರಿಗೆ ಬಿತ್ತನೆ ಜೋಳ ವಿತರಿಸುವಂತೆ ಡೇರಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ತೆಂಗು ಬೆಳೆ ನಷ್ಟ ಪರಿಹಾರ ಹಾಗೂ ಆಲೂಗಡ್ಡೆಗೆ ಶೇಕಡಾ 50ರಷ್ಟು ಸಬ್ಸಿಡಿ ನೀಡಿರುವುದನ್ನು ಪರಿಶೀಲಿಸಿ ರೈತರ ಖಾತೆಗೆ ಜಮಾ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಮನವಿಯಂತೆ ಎಲ್ಲಾ ಶಾಸಕರು ಪ್ರತಿ 15 ದಿನಕೊಮ್ಮೆ ಮೊದಲ ಮತ್ತು ಮೂರನೇ ಸೋಮವಾರ ತಾಲ್ಲೂಕು ಕೇಂದ್ರ ಮತ್ತು ಹೋಬಳಿ ಮಟ್ಟದಲ್ಲಿ ಜನ ಸಂಪರ್ಕ ಸಭೆ ನಡೆಸುವರು. ತಾಲ್ಲುಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಪರಿಹಾರ ಒದಗಿಸಬೇಕು. ಅಲ್ಲದೇ 38 ನಾಡ ಕಚೇರಿಗಳಿಗೆ ಕಟ್ಟಡ ಕಟ್ಟಲು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ ಎಂದು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಂಗಳಿಗೊಮ್ಮೆ ಜಿಲ್ಲೆಯ ಹಿಂದೂಳಿದ ಗ್ರಾಮಕ್ಕೆ ಶಾಸಕರೊಂದಿಗೆ ಭೇಟಿ ನೀಡಿ, ಸಾರ್ವಜನಿಕರ ಕುಂದು, ಕೊರತೆ ಆಲಿಸಬೇಕು. ಸಂಜೆ 6 ಗಂಟೆ ನಂತರ ಗ್ರಾಮೀಣ ಸೊಗಡು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಅದಕ್ಕೆ ಬೇಕಾದ ಅನುದಾನ ಒದಗಿಸಲಾಗುವುದು ಎಂದರು.

 ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡುವರು. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ದಿನಾಂಕ ಇನ್ನು ನಿಗದಿಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ವಿತರಣೆ ಮಾಡಲು  ಕ್ರಮ ಕೈಗೊಳ್ಳಲಾಗಿದ್ದು, ನಿವೇಶನ ಆಕಾಂಕ್ಷಿಗಳು ಜೂನ್‌ 21 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !