ಮಂಗಳವಾರ, ಡಿಸೆಂಬರ್ 1, 2020
25 °C
ಕೋವಿಡ್‌ ಪರೀಕ್ಷೆ ಕಡ್ಡಾಯ, ಕೊಠಡಿಗಳಿಗೆ ಸ್ಯಾನಿಟೈಸ್‌

ಕಾಲೇಜು ಆರಂಭ; ವಿದ್ಯಾರ್ಥಿಗಳ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಎಂಟು ತಿಂಗಳ ಬಳಿಕ ಪದವಿ ಕಾಲೇಜುಗಳು ಮಂಗಳವಾರ ಆರಂಭಗೊಂಡಿದ್ದು, ಕೋವಿಡ್‌ ಪರೀಕ್ಷೆ ಕಡ್ಡಾಯವಾಗಿರುವ ಕಾರಣ ವಿದ್ಯಾರ್ಥಿಗಳು ಕಾಲೇಜುಗಳ ಕಡೆ ಸುಳಿಯಲಿಲ್ಲ.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುಮಾರು 60 ವಿದ್ಯಾರ್ಥಿಗಳು ಬಂದಿದ್ದರು. ಅದರಲ್ಲಿ ಐದಾರು ವಿದ್ಯಾರ್ಥಿಗಳು ಮಾತ್ರವೇ ಕೋವಿಡ್‌ ಪ್ರಮಾಣ ಪತ್ರ ತಂದಿದ್ದರು. ಕೋವಿಡ್‌ ಪರೀಕ್ಷಾ ವರದಿ ಇಲ್ಲದ ಕಾರಣ ಇತರೆ ವಿದ್ಯಾರ್ಥಿಗಳನ್ನು ವಾಪಸ್‌ ಕಳಿಸಲಾಯಿತು.

ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕಾದು ಕುಳಿತಿದ್ದ ದೃಶ್ಯ ಕಂಡು ಬಂತು. ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಇತ್ತು. ಕೆಲವರು ಕೋವಿಡ್‌ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಮತ್ತೆ ಕೆಲವರಿಗೆ ಪರೀಕ್ಷೆ ಎಲ್ಲಿ ಮಾಡಿಸಬೇಕು ಎಂಬ ಗೊಂದಲ ಉಂಟಾಗಿದೆ.

‘ಎಂಟು ತಿಂಗಳ ಬಳಿಕ ಕಾಲೇಜು ತೆರೆಯಲಾಗಿದೆ. ಸರ್ಕಾರದ ನಿರ್ದೇಶನದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್‌ ಮಾಡಲಾಗಿದೆ. ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಕೋವಿಡ್‌ ಪರೀಕ್ಷೆ ಮಾಡಿಸಿದ್ದಾರೆ.’ ಎಂದು ನಗರ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಮಹೇಂದ್ರ ಪ್ರಜಾವಾಣಿಗೆ ತಿಳಿಸಿದರು.

‘ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿ ತರಗತಿಗಳಿಗೆ ಹಾಜರಾಗಬೇಕು. ಸುಮಾರು 60 ವಿದ್ಯಾರ್ಥಿಗಳು ಬಂದಿದ್ದರು. ಕೆಲವೇ ಮಂದಿ ಪರೀಕ್ಷೆ ವರದಿ ತಂದಿದ್ದರು. ಮತ್ತೆ ಕೆಲವರು ಪರೀಕ್ಷೆ ಮಾಡಿಸಿರಲಿಲ್ಲ. ದೀಪಾವಳಿ ಹಬ್ಬದ ರಜೆ ಬಂದ ಕಾರಣ ಕೋವಿಡ್‌ ಪರೀಕ್ಷೆ ವರದಿ ಬರುವುದು ತಡವಾಗಿದೆ’ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಟಿ. ಕೃಷ್ಣೇಗೌಡ ತಿಳಿಸಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.