ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದಿಂದ ದಲಿತರ ಹಕ್ಕುಗಳ ಮೊಟುಕು

ದಲಿತರ ಸಮಾವೇಶದಲ್ಲಿ ಪರಮೇಶ್ವರ್‌, ಮಹದೇವಪ್ಪ ಆರೋಪ
Last Updated 13 ಏಪ್ರಿಲ್ 2019, 16:07 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಸರ್ಕಾರವು ದಲಿತರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್‌ ಹಿರಿಯು ಮುಖಂಡ ಡಾ. ಎಚ್.ಸಿ.ಮಹದೇವಪ್ಪ ಆರೋಪಿಸಿದರು.

ಅಬ್ದುಲ್ ಕಲಾಂ ರಸ್ತೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ ದಲಿತರ ಸಮಾವೇಶ ಮತ್ತು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಬರೆದಿರುವ ಸಂವಿಧಾನ ಒಪ್ಪಿಕೊಳ್ಳಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ಧರಿಲ್ಲ. ಹಾಗಾಗಿ ಅವರು ಸಮ ಸಮಾಜ ನಿರ್ಮಾಣದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೋಮುವಾದ ಮತ್ತು ಮೂಲಭೂತವಾದ ಈ ದೇಶದ ಅಭಿವೃದ್ಧಿಗೆ ಮಾರಕ ಎಂದು ಹೇಳಿದರು.

ಸಂವಿಧಾನದ ಆಶಯಗಳನ್ನು 72 ವರ್ಷಗಳಿಂದ ಈಡೇರಿಸಲು ಸಾಧ್ಯವಾಗಿಲ್ಲ. ಸಂವಿಧಾನದಲ್ಲಿ ಅಡಕಗೊಳಿಸಿದ ಅಂಶಗಳು, ಕಾಂಗ್ರೆಸ್ ಪಕ್ಷದ ಬದ್ಧತೆಯಿಂದ, ನೆಹರೂ ಮತ್ತು ಇಂದಿರಾಗಾಂಧಿ ಅವರ ದೂರದೃಷ್ಟಿಯ ಕ್ರಮಗಳಿಂದ ಸ್ವಾತಂತ್ರ್ಯ ಬಂದಾಗ ಇದ್ದ ಬಡತನ ರೇಖೆಯ ಕೆಳಗಿನ ಕುಟುಂಬಗಳ ಸಂಖ್ಯೆ ಶೇಕಡಾ 70 ರಿಂದ ಶೇಕಡಾ 22ಕ್ಕೆ ಇಳಿದಿದೆ ಎಂದರು.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಸುಭದ್ರವಾಗಿ ನಿಲ್ಲಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ. ಆದರೆ, ಈಗ ಸಂವಿಧಾನಕ್ಕೆ ಸವಾಲು ಎದುರಾಗಿದೆ. ಈ ಸಂವಿಧಾನ ತಿದ್ದುಪಡಿ ಮಾಡಲು ಬಿಜೆಪಿ ಮುಂದಾಗಿದೆ. ಬಿಜೆಪಿ ಆಡಳಿತದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ಮೀಸಲಾತಿ ಅನುಷ್ಠಾನದಲ್ಲಿ ಹಿನ್ನಡೆಯಾಗಿದೆ. ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು ಎಂದು ಹೇಳಿದರು.

ಎಚ್.ಡಿ.ರೇವಣ್ಣ ಅವರಂತೆ ಅಭಿವೃದ್ಧಿ ಕೆಲಸ ಮಾಡಲು ರಾಜ್ಯದ ಯಾವ ರಾಜಕಾರಣಿಯಿಂದಲೂ ಸಾಧ್ಯವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರೇವಣ್ಣ ಅವರನ್ನು ಮೀರಿಸುವವರಿಲ್ಲ. ವಿಶೇಷವಾಗಿ ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆಗಳು ಯಾವ ಸಮಯದಲ್ಲಿ ಸರ್ಕಾರದ ಮುಂದೆ ಮಂಡನೆಯಾಗುತ್ತವೆಯೋ, ಯಾವಾಗ ಅನುಮೋದನೆ ಪಡೆಯುತ್ತವೆಯೋ ಗೊತ್ತಾಗುವುದೇ ಇಲ್ಲ. ರಾಕೆಟ್ ವೇಗದಲ್ಲಿ ಸಚಿವ ಸಂಪುಟ ಸಭೆಗೆ ಬಂದು ಅನುಮೋದನೆಯಾಗುತ್ತವೆ. ರೇವಣ್ಣ ಅವರು ಕ್ರಿಯಾಶೀಲ ಸಚಿವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಚ್.ಡಿ.ರೇವಣ್ಣ ಅವರು ದಲಿತರ ಬಡ್ತಿ ಮೀಸಲಾತಿ ವಿಷಯದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಂದೂ ಮಾತಾಡಿಲ್ಲ. ನಾವು ಹೇಳೀದ್ದಕ್ಕೆಲ್ಲಾ ಬೆಂಬಲಿಸಿದ್ದಾರೆ. ಆದರೆ, ಅವರ ಬಗ್ಗೆ ತಪ್ಪು ಕಲ್ಪನೆಗಳನ್ನು ಸೃಷ್ಟಿಸಲಾಗಿದೆ. ಅವುಗಳಿಗೆ ದಲಿತರು ನಂಬಬಾರದು ಎಂದರು.

ಕಾಂಗ್ರೆಸ್ ಮುಖಂಡರಾದ ಬಿ.ಶಿವರಾಮು, ಜಾವಗಲ್ ಮಂಜುನಾಥ್, ಸಿದ್ಧಯ್ಯ, ಎಚ್.ಕೆ.ಜವರೇಗೌಡ, ಎಚ್.ಕೆ.ಮಹೇಶ್, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸುಜನ್‌ ಗೌಡ, ಜೆಡಿಎಸ್ ಮುಖಂಡರಾದ ಪಟೇಲ್ ಶಿವರಾಂ, ರಾಜೇಗೌಡ, ಚನ್ನವೀರಪ್ಪ, ದಲಿತ ಮುಖಂಡರಾದ ಛಲವಾದಿ ಕುಮಾರ್, ಬೇಲೂರಿನ ಎಂ.ಆರ್. ವೆಂಕಟೇಶ್, ಎಚ್.ಕೆ.ಸಂದೇಶ್, ಕೃಷ್ಣದಾಸ್. ಮಹಾಂತಪ್ಪ ಇದ್ದರು. ಪುಟ್ಟರಾಜ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT