ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆಗೆ ಕಡಿವಾಣ

ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಕ್ಷಷರ್‌, ಕ್ವಾರಿ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ
Last Updated 27 ಜನವರಿ 2021, 12:22 IST
ಅಕ್ಷರ ಗಾತ್ರ

ಹಾಸನ: ಶಿವಮೊಗ್ಗದ ಹುಣಸೋಡಿ ಬಳಿ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್‌ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಜಿಲ್ಲೆಯ
ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ.

ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಮಂಗಳವಾರವಷ್ಟೇ ಹಾಸನ ತಾಲ್ಲೂಕಿನ ಇಂದ್ರಾಪುರ ಗ್ರಾಮದ
ಹನುಮಂತಪುರದ ಮಂಜೇಗೌಡರಿಗೆ ಸೇರಿದ ಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿ, 1200 ಜೆಲೆಟಿನ್‌ ಟ್ಯೂಬ್‌,
2 ಡಿಟೋನೆಟರ್‌,10 ಕೆ.ಜಿ ಅಮೋನಿಯಂ ನೈಟ್ರೇಟ್‌ ಹಾಗೂ ಕನೆಕ್ಟಿಂಗ್‌ ವೈರ್‌ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಿಂದ ಜಾಗೃತಗೊಂಡ ಜಿಲ್ಲಾಡಳಿತ, ಕ್ರಷರ್‌, ಕ್ವಾರಿ, ಮರಳು ಕೇಂದ್ರಗಳಲ್ಲಿ ಸುರಕ್ಷತಾ ಕ್ರಮ
ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ ಎಂಬ ಆರೋಪವೂ ಕೇಳಿ ಬಂದಿದೆ. ಹಾಸನ,
ಅರಸೀಕೆರೆ ತಾಲ್ಲೂಕಿನ ನಾಗರಿಕರು ಹಾಗೂ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ನಡೆಸಿರುವ ಉದಾಹರಣೆಯೂ ಇದೆ. ‘ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯಕ್ರಮ ಜರುಗಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಚ್ಚರಿಕೆ ನೀಡಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಗೆ 101 ಮಂದಿ ಅನುಮತಿ
ಪಡೆದಿದ್ದಾರೆ. ಇದರಲ್ಲಿ ಇಬ್ಬರು ಸ್ಫೋಟಕ ಪೂರೈಸಲು ಪರವಾನಗಿ ಹೊಂದಿದ್ದಾರೆ. ಆಲೂರಿನಲ್ಲಿ 7,
ಅರಕಲಗೂಡು 7, ಅರಸೀಕೆರೆ 31, ಬೇಲೂರು 10, ಚನ್ನರಾಯಪಟ್ಟಣ 5, ಹಾಸನ 20, ಹೊಳೆನರಸೀಪುರ 21
ಕಲ್ಲು ಕ್ವಾರಿಗಳಿವೆ.

ಬೇಲೂರು 4, ಚನ್ನರಾಯಪಟ್ಟಣ 4, ಹಾಸನ 29, ಹೊಳೆನರಸೀಪುರ 9, ಆಲೂರು ಹಾಗೂ ಅರಕಲಗೂಡು
ತಾಲ್ಲೂಕಿನಲ್ಲಿ ತಲಾ 6, ಅರಸೀಕೆರೆ 17 ಸೇರಿ 75 ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 3, ಹೊಳೆನರಸೀಪುರ 4, ಆಲೂರು 3 , ಅರಸೀಕೆರೆ 2, ಬೇಲೂರು
9,ಅರಕಲಗೂಡು 7, ಸಕಲೇಶಪುರ 1, ಹಾಸನ ತಾಲ್ಲೂಕಿನಲ್ಲಿ 7 ಗ್ರಾನೈಟ್ಸ್‌ ಫ್ಯಾಕ್ಟರಿ
ಕಾರ್ಯನಿರ್ವಹಿಸುತ್ತಿವೆ.

‘ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸ್ಫೋಟಕ ಬಳಸುವ ಗ್ರಾನೈಟ್ಸ್‌ ಕ್ವಾರಿಗಳು ಇಲ್ಲ. ಪರವಾನಗಿ ನೀಡುವಾಗ
ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುತ್ತಾರೆ. ಜಿಲ್ಲಾಧಿಕಾರಿ ಸೂಚನೆಯಂತೆ
ಕ್ವಾರಿಗಳ ಮಾಲೀಕರಿಗೆ ಸ್ಪೋಟಕ ಬಳಸುವಾಗ ಮುನ್ನೆಚ್ಚರಿಕೆ ವಹಿಸಬೇಕು, ಸುರಕ್ಷತಾ ಕ್ರಮ ಕೈಗೊಳ್ಳುವಂತೆ
ನೋಟಿಸ್ ಜಾರಿ ಮಾಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ಸಂಬಂಧ 2019–20ರಲ್ಲಿ ₹30 ಲಕ್ಷ ದಂಡ
ವಸೂಲು ಮಾಡಲಾಗಿದೆ. ಅಕ್ರಮ ಪತ್ತೆಗಾಗಿಯೇ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ಇದೆ’ಎಂದು ಗಣಿ
ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ನಾಗರಾಜ್‌ ತಿಳಿಸಿದರು.

‘ಜಿಲ್ಲೆಯ ವಿವಿಧೆಡೆ 23 ಮರಳು ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಅರಸೀಕೆರೆ ತಾಲ್ಲೂಕಿನಲ್ಲಿ 85.30 ಎಕರೆ
ಪ್ರದೇಶದಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಕ್ರಮವಾಗಿ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ
ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT