ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಜೈನರಗುತ್ತಿಯಲ್ಲಿ ಮನೆ ಮಾಡಿದ ಸಂಭ್ರಮ

Published 18 ಫೆಬ್ರುವರಿ 2024, 4:48 IST
Last Updated 18 ಫೆಬ್ರುವರಿ 2024, 4:48 IST
ಅಕ್ಷರ ಗಾತ್ರ

ಹಳೇಬೀಡು: ಅತಿಶಯ ಕ್ಷೇತ್ರ ಎನ್ನುವ ಹಳೇಬೀಡು ಬಳಿಯ ಜೈನರಗುತ್ತಿಯಲ್ಲಿ ಫೆ. 18ರಂದು 24 ಅಡಿ ಎತ್ತರದ ಶೀತಲನಾಥ ತೀರ್ಥಂಕರರ ಪದ್ಮಾಸನ ಮೂರ್ತಿ ಪ್ರತಿಷ್ಠಾಪನೆಗಾಗಿ ವೇದಿ ಶಿಲಾನ್ಯಾಸ ಹಾಗೂ 24 ತೀರ್ಥಂಕರರ ಕಲ್ಪಧ್ರುಮ ಪಂಚಾಮೃತ ಅಭಿಷೇಕ ಮಹೋತ್ಸವ ವೈಭವದಿಂದ ನಡೆಯಲಿದೆ. ಜೈನರ ಗುತ್ತಿ ಕ್ಷೇತ್ರದಲ್ಲಿ ಸಡಗರದಿಂದ ಭರದ ಸಿದ್ಧತೆ ನಡೆಯುತ್ತಿದೆ.

ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿರುವ ಜಿನಧರ ಪ್ರಭಾವಕ ಯುವ ಸಂತ ಎಂದು ಹೆಸರಾಗಿರುವ ದಿಗಂಬರ ಜೈನಮುನಿ ವೀರಸಾಗರ ಮುನಿ ಮಹಾರಾಜರು, ಬೆಂಗಳೂರಿನಲ್ಲಿ ಚಾತುರ್ಮಾಸ್ಯ ವ್ರತ ಮುಗಿಸಿಕೊಂಡು ಕಾಲ್ನಡಿಗೆಯಲ್ಲಿ ಬಂದು ಜೈನರಗುತ್ತಿಯಲ್ಲಿ ವಾಸ್ತವ್ಯ ಮಾಡಿದ್ದಾರೆ.

ಕರ್ನಾಟಕ ಮಾತ್ರವಲ್ಲದೇ ಛತ್ತೀಸಗಢ, ಮಧ್ಯಪ್ರದೇಶದಿಂದಲೂ ಭಕ್ತರು ಬರಲಿದ್ದು, ಜೈನಮುನಿಗಳು ಸ್ಥಳದಲ್ಲಿದ್ದು, ಸಿದ್ದತಾ ಕಾರ್ಯ ನೋಡಿಕೊಳ್ಳುತ್ತಿದ್ದಾರೆ. ವೀರಸಾಗರ ಮುನಿಗಳೊಂದಿಗೆ ಕೈಜೋಡಿಸಿರುವ ಜೈನರಗುತ್ತಿಯ ಶೀತಲನಾಥ ದಿಗಂಬರ ಜೈನ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಅಂತಿಮ ಹಂತದ ಸಿದ್ದತೆಯಲ್ಲಿ ತೊಡಗಿದ್ದಾರೆ.

ಶ್ರವಣಬೆಳಗೂಳ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೊದಲ ಬಾರಿಗೆ ಜೈನರಗುತ್ತಿಯ ಪುರ ಪ್ರವೇಶ ಮಾಡುತ್ತಿದ್ದಾರೆ. ಸ್ವಾಮೀಜಿ ಬರುತ್ತಿರುವುದರಿಂದ ಭಕ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಶ್ರವಣಬೆಳಗೂಳ ಸ್ವಾಮೀಜಿ ಬರುವಿಕೆಯಿಂದ ಜೈನರಗುತ್ತಿ ಕ್ಷೇತ್ರದ ಅಭಿವೃದ್ಧಿಗೆ ಆನೆ ಬಲ ಬಂದಂತಾಗಿದೆ ಎಂಬ ಮಾತು ಭಕ್ತರಿಂದ ಕೇಳಿ ಬರುತ್ತಿದೆ. 

ರಾಜಸ್ಥಾನದ ಜೈಪುರದಲ್ಲಿ 24 ಅಡಿ ಎತ್ತರದ ಶೀತಲನಾಥ ತೀರ್ಥಂಕರರ ಮೂರ್ತಿ ಕೆತ್ತನ ಕೆಲಸ ಆರಂಭವಾಗಿದೆ. ನುರಿತ ಶಿಲ್ಪಿಗಳು ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದಾರೆ. ಮೂರ್ತಿ ಕೆತ್ತನೆ ಪೂರ್ಣಗೊಂಡ ನಂತರ ಜೈನರಗುತ್ತಿಗೆ ಸಾಗಿಸಲಾಗುವುದು. ಫೆ. 18 ರಂದು ಶಿಲಾನ್ಯಾಸ ಮಾಡಿದ ವೇದಿಯ ಮೇಲೆ ಪ್ರತಿಷ್ಠಾಪಿಸಲಾಗುವುದು ಎಂದು ವೀರಸಾಗರ ಮುನಿ ಮಹಾರಾಜರು ಹೇಳಿದರು.

ಫೆ. 18 ರಂದು ಬೆಳಿಗ್ಗೆ 7 ಗಂಟೆಯಿಂದಲೇ ಜೈನರಗುತ್ತಿಯಲ್ಲಿ ಮಂತ್ರ ಘೋಷ ಮೊಳಗಲಿದೆ. ಬೆಳಿಗ್ಗೆ ಧರ್ಮ ಧ್ವಜಾರೋಹಣ ನೆರವೇರಿಸಿದ ನಂತರ, ನಿತ್ಯ ಪೂಜಾ ವಿಧಾನ ನಡೆಯುತ್ತದೆ. 11 ಗಂಟೆಗೆ ಶ್ರವಣಬೆಳಗೂಳ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಕುಂಭ ಕಳಸ ಹಾಗೂ ವಾದ್ಯ ವೈಭವದೊಂದಿಗೆ ಸ್ವಾಗತಿಸಲಾಗುವುದು. ಮಧ್ಯಾಹ್ನ 12.30ಕ್ಕೆ ಏಕ ಕಾಲದಲ್ಲಿ 24 ತೀರ್ಥಂಕರರಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಯುತ್ತದೆ. ಅಡಗೂರು, ಹಾಸನ, ಶ್ರವಣಬೆಳಗೂಳ, ಕಡದರವಳ್ಳಿ, ಹೊಲಬಗೆರೆ, ಹೊಂಗೆರೆ, ದೇವಿಹಳ್ಳಿ, ನೆಲಿಕೆ, ಹಳೇಬೀಡು, ಜಾವಗಲ್, ಸಿಂಧಿಗೆರೆ, ಶಾಂತಿಗ್ರಾಮ ಜೈನ ಸಮಾಜದವರ ಸಹಕಾರದಲ್ಲಿ ಧಾರ್ಮಿಕ ಸಭೆ ನಡೆಯುತ್ತದೆ ಎನ್ನುತ್ತಾರೆ ಜೈನರಗುತ್ತಿ ಟ್ರಸ್ಟ್ ಪದಾಧಿಕಾರಿಗಳು.

ಜೈನರಗುತ್ತಿ ಇತಿಹಾಸ

ಇಂದಿನ ಜೈನರಗುತ್ತಿ ಸ್ಥಳದಲ್ಲಿ ಹೊಯ್ಸಳರ ಕಾಲದಲ್ಲಿ ಜ್ವಾಲಾಮುಖಿ ಸಂಭವಿಸಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ವ್ಯಾಪಿಸುತ್ತಿದ್ದ ಜ್ವಾಲೆಯನ್ನು ಶಮನಗೊಳಿಸಿ ಬಿರುಕು ನಿಲ್ಲಿಸುವುದು ಹೊಯ್ಸಳ ದೊರೆ ಬಲ್ಲಾಳರಾಯನಿಗೆ ಕಷ್ಟವಾಯಿತು. ಶ್ರವಣಬೆಳಗೂಳ ಚಾರುಕೀರ್ತಿ ಪೀಠದ ಸ್ವಾಮೀಜಿ ಕುಷ್ಮಾಂಡಿನಿ ಮಾತೆಯ ಮೂರ್ತಿಯನ್ನು ಆನೆಯ ಮೇಲೆ ಆರೋಹಣ ಮಾಡಿಕೊಂಡು ಕರೆತಂದು ಪೂಜಾ ವಿಧಾನ ನಡೆಸಿದರು. ಬಿರುಕಿಗೆ ಮಂತ್ರ ಪಠಣದೊಂದಿಗೆ ಕುಂಬಳಕಾಯಿ ಸಮರ್ಪಿಸಿದ ನಂತರ ಭೂಮಿ ಬಿರುಕು ನಿಂತಿತು ಎಂಬ ಪ್ರತೀತಿ ಇದೆ. 900 ವರ್ಷದ ಹಿಂದೆ ಶ್ರವಣಬೆಳಗೂಳದ ಅಂದಿನ ಗುರುಗಳ ಪ್ರಭಾವದಿಂದ ಹೊಯ್ಸಳ ಸಾಮ್ರಾಜ್ಯ ಉಳಿದಿದ್ದು ಶ್ರವಣಬೆಳಗೂಳದ ಗುರುಗಳಿಗೆ ಬಲ್ಲಾಳರಾಯ ಜೀವ ರಕ್ಷಾ ಪರಿಪಾಲಕ ಎಂದು ಬಿರುದು ನೀಡಿದನು ಎಂದು ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖವಾಗಿದೆ.

ಜೈನರಗುತ್ತಿ ಹೊಯ್ಸಳ ಸಾಮ್ರಾಜ್ಯ ಉಳಿಸಿದ ಕ್ಷೇತ್ರ. ಜೈನರಗುತ್ತಿಗೆ ಪ್ರಾಚೀನ ಇತಿಹಾಸ ಇದೆ. ಹೀಗಾಗಿ ಕ್ಷೇತ್ರದಲ್ಲಿ ವೈಭವ ಮರುಕಳಿಸುತ್ತಿದೆ. ಕ್ಷೇತ್ರ ಮಾನಸಿಕ ನೆಮ್ಮದಿ ನೀಡುವ ತಾಣವಾಗಿದೆ.
ವೀರಸಾಗರ ಮುನಿಮಹಾರಾಜ್ ಜೈನ ಮುನಿ, ಯುವ ಸಂತ
ವೀರಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಜೈನರಗುತ್ತಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ವೇದಿ ಪ್ರತಿಷ್ಠಾಪನೆ 24 ತೀರ್ಥಂಕರರ ಕಲ್ಪಧ್ರಮ ಅಭಿಷೇಕ ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.
ಕೀರ್ತಿಕುಮಾರ್ ಶೀತಲನಾಥ ದಿಗಂಬರ, ಜೈನ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT