ಸರ್ಕಾರಿ ಬಾವಿ ಒತ್ತುವರಿ ತೆರವಿಗೆ ಒತ್ತಾಯ: ಡಿ.ಸಿ ಕಚೇರಿ ಎದುರು ಪ್ರತಿಭಟನೆ

ಹಾಸನ: ಆಲೂರು ತಾಲ್ಲೂಕು ಕೆಂಚಮ್ಮನ ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತಗಳಲೆ ಗ್ರಾಮದ ಸರ್ಕಾರಿ ಬಾವಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಕೂಡಲೇ ತೆರವುಗೊಳಿಸಿ ಕೊಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯೆ ಅಕ್ಷತಾ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸರ್ವೆ ನಂ.66/1 ಸರ್ಕಾರಿ ಜಾಗದಲ್ಲಿರುವ ಬಾವಿಯಿಂದ ಅನೇಕ ಮನೆಗಳಿಗೆ ಅನುಕೂಲವಾಗುತ್ತದೆ. ಆದರೆ, ಬಾವಿ ಒತ್ತುವರಿ ಮಾಡಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಐದು ವರ್ಷಗಳ ಹಿಂದೆ ಒತ್ತುವರಿ ತೆರವುಗೊಳಿಸುವಂತೆ ಕೋರ್ಟ್ ಆದೇಶ ಮಾಡಿದ್ದರೂ ಪಾಲನೆಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಒತ್ತುವರಿ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಇದೇ ವ್ಯಕ್ತಿಗಳು ರಸ್ತೆಯನ್ನೂ ಒತ್ತುವರಿ ಮಾಡಿದ್ದಾರೆ. ಆದ್ದರಿಂದ ಪರಿಶೀಲಿಸಿ ಒತ್ತುವರಿಯಾಗಿರುವ ಬಾವಿ ಹಾಗೂ ರಸ್ತೆಯನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಅಕ್ಷತಾ ಪ್ರೀತಮ್, ಗ್ರಾಮಸ್ಥರಾದ ರಂಜನ್, ಮಂಜುನಾಥ್, ಲೋಹಿತ್, ಚಾಲುಕ್ಯ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.