ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ತಾಲ್ಲೂಕಿನಲ್ಲಿ ಸೇವೆ ಮಾಡಲು ಮುಂದೆ ಬನ್ನಿ: ಪ್ರಜ್ವಲ್‌

ಮನವಿ ಮಾಡಿದ ಸಂಸದ ಪ್ರಜ್ವಲ್‌ ರೇವಣ್ಣ
Last Updated 14 ಮೇ 2021, 8:33 IST
ಅಕ್ಷರ ಗಾತ್ರ

ಸಕಲೇಶಪುರ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಪರಿಸ್ಥಿತಿಯಲ್ಲೂ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ಫಿಜಿಷಿಯನ್‌ ಹಾಗೂ ಅರಿವಳಿಕೆ ತಜ್ಞರೇ ಇಲ್ಲದಿರುವುದು ಆತಂಕದ ವಿಷಯ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕೋವಿಡ್‌–19 ಸಂಬಂಧ ತಾಲ್ಲೂಕು ಮಟ್ಟದ ಅಧಿಕಾರಿಗಳು, ವೈದ್ಯರು, ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಆಸ್ಪತ್ರೆಯಲ್ಲಿರಬೇಕಾದ 11 ತಜ್ಞ ವೈದ್ಯರ ಪೈಕಿ 5 ಮಂದಿ ವೈದ್ಯರು ಮಾತ್ರ ಇದ್ದಾರೆ. ಜತೆಗೆ ನಿತ್ಯ ನೂರರ ಗಡಿ ದಾಟುತ್ತಿರುವ ಕೊರೊನಾ ಸೋಂಕಿತರ ಆರೈಕೆಗೆ ಫಿಜಿಶಿಯನ್‌ ಸೇರಿದಂತೆ ಹೆಚ್ಚುವರಿ ವೈದ್ಯರು ಬೇಕು. ಸಿಬ್ಬಂದಿ ಸಮಸ್ಯೆ ಇಟ್ಟುಕೊಂಡು ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ತಾಲ್ಲೂಕಿನಲ್ಲಿ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಕೇವಲ 5 ಮಂದಿ ವೈದ್ಯರು ನಿಯೋಜನೆ ಮೇಲೆ ಈ ಎಲ್ಲಾ ಕೇಂದ್ರಗಳಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸಭೆಯಲ್ಲಿ ಡಾ.ಎಂ.ಆರ್‌.ಮಧುಸೂದನ್‌ ಹೇಳಿದರು.

ಇದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವೈದ್ಯರು ಆ ಕೇಂದ್ರ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಲು ಸಮಯ ಸಾಲದು. ಹೀಗಿರುವಾಗ ಒಬ್ಬ ವೈದ್ಯ ಎರಡು ಮೂರು ಆರೋಗ್ಯ ಕೇಂದ್ರಗಳಿಗೆ ಹೋಗಿ ಹೇಗೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಖಾಸಗಿ ವೈದ್ಯರು, ಎಂಬಿಬಿಎಸ್‌ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ ಸ್ಥಳೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಗುರುತಿಸಿ ಕೂಡಲೇ ನೇಮಕ ಮಾಡಿಕೊಳ್ಳಬೇಕು. ಈ ಬಗ್ಗೆ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಲಿಖಿತ ಹಾಗೂ ಮೌಖಿಕವಾಗಿ ತಿಳಿಸಲಾಗುವುದು ಎಂದರು.

‘ಸಕಲೇಶಪು, ಆಲೂರು ತಾಲ್ಲೂಕುಗಳಲ್ಲಿ ಸೇವೆ ಮಾಡಲು ವೈದ್ಯರು ಮುಂದೆ ಬರಬೇಕು. ಅವರಿಗೆ ಬೇಕಾಗುವ ಎಲ್ಲ ಸೌಲಭ್ಯ ಒದಗಿಸಿಕೊಡುತ್ತೇನೆ’ ಎಂದು ಮನವಿ ಮಾಡಿದರು.

ಸಕಲೇಶಪುರ ಸೇರಿದಂತೆ ಜಿಲ್ಲೆಯಲ್ಲಿ 2 ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿ ಆರೋಗ್ಯ ಇಲಾಖೆ ಮೂಲಕವೇ ಏಕ ವ್ಯಕ್ತಿಗೆ ಟೆಂಡರ್‌ ನೀಡಿರುವ ಹಿಂದೆ ದುಡ್ಡು ಹೊಡೆಯುವ ದಂಧೆ ನಡೆಯುತ್ತಿದೆ. ಆಮ್ಲಜನಕ ಪ್ಲಾಂಟ್‌ಗೆ ಕೇವಲ 10X10 ಅಡಿ ಅಗಲದ ಹವಾನಿಯಂತ್ರಿತ ಕಟ್ಟಡ ನಿರ್ಮಾಣ, ಜನರೇಟರ್‌ಗೆ ಕೇವಲ ₹ 6 ಲಕ್ಷ ವೆಚ್ಚ ಆಗುತ್ತದೆ. ಆದರೆ, ಸರ್ಕಾರ ₹ 35 ಲಕ್ಷ ಖರ್ಚು ತೋರಿಸುತ್ತಿದೆ. ಜಿಲ್ಲೆಗೆ ಎರಡರಂತೆ 30 ಜಿಲ್ಲೆಗೆ 60 ಆಮ್ಲಜನಕ ಉತ್ಪಾದನಾ ಘಟಕದಲ್ಲಿ ಕೋಟಿಗಟ್ಟಲೆ ಸಾರ್ವಜನಿಕ ಹಣವನ್ನು ಕೊರೊನಾ ಹೆಸರಿನಲ್ಲಿ ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದರು.

ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಆಸ್ಪತ್ರೆಯ ಸ್ವಚ್ಛತೆ, ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಡಳಿತ ವೈದ್ಯಾಧಿಕಾರಿ ಡಾ.ಎಂ.ಆರ್‌.ಮಧುಸೂದನ್‌, ಡಾ.ಹೇಮಂತ್‌ ಪ್ರಭ, ಡಾ.ರತ್ನಾಕರ ಖಣಿ, ತಂಡವನ್ನು ಅಭಿನಂದಿಸಿದರು.

ಉಪವಿಭಾಗಾಧಿಕಾರಿ ಎಂ.ಗಿರೀಶ್‌ ನಂದನ್‌, ತಹಶೀಲ್ದಾರ್‌ ಎಚ್‌.ಬಿ.ಜೈಕುಮಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್‌.ಹರೀಶ್‌, ಡಿವೈಎಸ್‌ಪಿ ಬಿ.ಆರ್‌.ಗೋಪಿ, ಇನ್‌ಸ್ಪೆಕ್ಟರ್‌ ಗಿರಿಶ್‌, ಕ್ರಾಫರ್ಡ್‌ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಂ.ಆರ್‌. ಮಧುಸೂದನ್‌, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT