ಮಂಗಳವಾರ, ಮೇ 17, 2022
26 °C
ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ರಾಜಧನ ವಂಚನೆ: ಬಿ.ಪಿ.ಮಂಜೇಗೌ ಆರೋಪ

ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ರಾಜಧನ ವಂಚನೆ: ಬಿ.ಪಿ.ಮಂಜೇಗೌಡ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿಸುವ ಉದ್ದೇಶದಿಂದ ತಾಲ್ಲೂಕಿನ 7 ಗ್ರಾಮ ಪಂಚಾಯಿತಿಗಳನ್ನು ಹಾಸನ ನಗರಸಭೆ ವ್ಯಾಪ್ತಿಗೆ ಸೇರಿಸಿರುವ ಕಾರಣ  ಜನರು ಕುಂದುಕೊರತೆ ಯಾರ ಬಳಿ ಹೇಳಿಕೊಳ್ಳಬೇಕೆಂದು ತಿಳಿಯದೆ ಅತಂತ್ರ ಸ್ಥಿತಿಯಲ್ಲಿದ್ದು, ಜಿಲ್ಲಾಡಳಿತ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಬಿ.ಪಿ. ಮಂಜೇಗೌಡ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತಿದೆ. ಆದರೆ, ಹಾಸನ ತಾಲ್ಲೂಕಿನ ತೇಜೂರು, ಹರಳಹಳ್ಳಿ, ಬಿ.ಕಾಟಿಹಳ್ಳಿ, ಸತ್ಯಮಂಗಲ, ಬೂವನಹಳ್ಳಿ, ಕಂದಲಿ ಹಾಗೂ ಹನುಪಂತಪುರ ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರ್ಪಡೆ ಮಾಡಿ ಗೆಜೆಟ್‌ ನೋಟಿಫಿಕೇಷನ್‌ ಆಗಿದೆ ಎಂದು ಹೇಳುವ ಸ್ಥಳೀಯ ಶಾಸಕರು, ಆ ಗ್ರಾಮಗಳ ಸ್ಥಿತಿಯನ್ನು ಅವಲೋಕಿಸಿದ್ದಾರೆಯೇ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ನಗರಸಭೆಯಲ್ಲಿ ಈಗಲೇ ಪೌರ ಕಾರ್ಮಿಕರ ಕೊರತೆ ಇದ್ದು, ಕಸ ವಿಲೇವಾರಿಗೆ ಪರದಾಡುವ ಸ್ಥಿತಿ‌ ಇದೆ. ಜತೆಗೆ ನಗರಸಭೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷ ನೇಮಕವಾಗಿಲ್ಲ. ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸಿ ನಗರ ಪಾಲಿಕೆ ಆಗುವವರೆಗೂ 7 ಪಂಚಾಯಿತಿಗಳ ಚುನಾವಣೆ ನಡೆಸಬೇಕು. ಇಲ್ಲವೇ ನಗರಸಭೆ ವ್ಯಾಪ್ತಿಗೆ ಸೇರಿಸಿ ಚುನಾವಣೆ ನಡೆಸಬೇಕು
ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.

ಸುರಕ್ಷತೆ ದೃಷ್ಟಿಯಿಂದ ಹೇಮಾವತಿ ಜಲಾಶಯದ 15 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅಧಿಕಾರಿಗಳು ಒತ್ತಡಕ್ಕೆ ಮಣಿದು ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಅಕ್ರಮ ಗಣಿಗಾರಿಕೆಯಿಂದಾಗಿ ನೂರಾರು ಕೋಟಿ ರಾಜಧನ ಸರ್ಕಾರಕ್ಕೆ ವಂಚನೆ ಆಗಿದ್ದು, ಜಿಲ್ಲಾಡಳಿತ ಅದನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

ನಗರ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಪಾಲನೆ ಮಾಡಲಾಗುತ್ತಿಲ್ಲ. ಗ್ರಾಮೀಣ ಜನರಿಗೆ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತಿದೆ. ಕಾನೂನು ಜಾರಿ ಮಾಡುವ ಮುನ್ನ ಜನರಿಗೆ ಅರಿವು ಮೂಡಿಸಬೇಕು. ದಂಡ ಹಾಕುವ ಮೊದಲು ನಗರದಲ್ಲಿ ಸಿಗ್ನಲ್‌ ದೀಪಗಳನ್ನು ಅಳವಡಿಸಬೇಕು. ಜಿಲ್ಲಾಡಳಿತದಿಂದ ಸಾಧ್ಯವಾಗದಿದ್ದರೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಶಂಕರ್‌ರಾಜು, ಅಬ್ದುಲ್‌ ಹಾದಿ, ಆಸಿಫ್ ಪಾಷ, ಚೇತನ್‌ ಹಾಗೂ ಸಾಗರ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು