ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಅಗ್ನಿಪಥ್‌ ಅತ್ಯುತ್ತಮವಾದ ಯೋಜನೆ: ಆರಗ ಜ್ಞಾನೆಂದ್ರ

ಕಾಂಗ್ರೆಸ್ಸಿಗರಿಗೆ ಮೋದಿ ಯೋಜನೆ ವಿರೋಧಿಸುವ ಚಟ: ಗೃಹ ಸಚಿವ
Last Updated 21 ಜೂನ್ 2022, 13:54 IST
ಅಕ್ಷರ ಗಾತ್ರ

ಹಾಸನ: ‘ಕಾಂಗ್ರೆಸ್ ಪಕ್ಷದ ನಾಯಕರಿಗೆ ಮೋದಿ ಸರ್ಕಾರ ಹೊಸ ಯೋಜನೆಗಳನ್ನು ಜಾರಿ ಮಾಡಿದರೆ ಸಹಿಸುವುದಿಲ್ಲ. ನಮ್ಮ ಕಾಲದಲ್ಲಿ ಇಂತಹ ಯೋಜನೆಗಳು ಜಾರಿಯಾಗಲಿಲ್ಲ ಎಂಬ ಅಸಮಾಧಾನ ಅವರಲ್ಲಿ ಇರುವುದರಿಂದ ಈ ರೀತಿ ವರ್ತನೆ ತೋರುತ್ತಿರಬಹುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.

ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಕಟ್ಟಡ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಗ್ನಿಪಥ್ ವಿರೋಧಿಸಿ ಕಾಂಗ್ರೆಸ್‌ನವರು ದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಕಾಂಗ್ರೆಸ್‌ಗೆ ಮೋದಿ ಸರ್ಕಾರದ ಯೋಜನೆಗಳನ್ನು ವಿರೋಧಿಸುವ ಚಟ ಇದೆ’ ಎಂದರು.

ಅಗ್ನಿಪಥ್ ಯೋಜನೆ ಬಹಳ ಉತ್ತಮವಾದ ಯೋಜನೆಯಾಗಿದೆ‌. 23 ವರ್ಷದವರೆಗಿನ ಯುವಕರ ನೇಮಕಾತಿ ನಡೆಯಲಿದೆ. ಇವರಿಗೆ ₹45 ಸಾವಿರ ಸಂಬಳ ಸೇರಿದಂತೆ ನಾಲ್ಕು ವರ್ಷ ಪೂರೈಸಿದ ನಂತರ ₹12 ಲಕ್ಷ ಹಣವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ₹1 ಕೋಟಿ ವಿಮೆಯನ್ನು ಸಹಪ್ರತಿ ಅಭ್ಯರ್ಥಿ ಹೆಸರಲ್ಲಿ ಮಾಡಲಾಗುತ್ತಿದೆ. ಸೈನ್ಯ ವೃತ್ತಿಯಿಂದ ಬಿಡುಗಡೆಯಾದ ನಂತರ ಪೊಲೀಸ್ ಇಲಾಖೆಯಲ್ಲಿ ಶೇ 10 ರಷ್ಟು ಮೀಸಲಾತಿ ಮತ್ತು ಅಗ್ನಿಶಾಮಕ ದಳದಲ್ಲಿ ಶೇ 50 ರಷ್ಟು ಮಿಸಲಾತಿ ನೀಡಲು ಚಿಂತನೆ ಇದೆ ಎಂದರು.

ಸೈನ್ಯಕ್ಕೆ ಕೇಂದ್ರ ಸರ್ಕಾರ ಪ್ರತಿವರ್ಷ ₹5 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ. ಕೇವಲ ಪಿಂಚಣಿಗಾಗಿ ₹1.25 ಲಕ್ಷ ಕೋಟಿ ವ್ಯಯ ಮಾಡಲಾಗುತ್ತಿದೆ. ಇದನ್ನು ಸರಿದೂಗಿಸಲು ಅಗ್ನಿಪಥ್ ಯೋಜನೆ ಜಾರಿಗೆ ತರಲಾಗುತ್ತಿದೆ‌‌‌ ಎಂದ ಅವರು, ಮುಂದಿನ ದಿನಗಳಲ್ಲಿ ಸೈನಿಕರ ನಿವೃತ್ತಿ ವಯಸ್ಸನ್ನು 32 ರಿಂದ 25ವರ್ಷಕ್ಕೆ ಇಳಿಸುವ ಚಿಂತನೆ ಇದೆ ಎಂದು ತಿಳಿಸಿದರು.

ಸುಮ್ಮನೆ ವಿಚಾರಣೆಗೆ ಕರೆಯುವುದಿಲ್ಲ: ಜಾರಿ ನಿರ್ದೇಶನಾಲಯದಿಂದ ಯಾರನ್ನೂ ಸುಮ್ಮನೆ ವಿಚಾರಣೆಗೆ ಕರೆಯುವುದಿಲ್ಲ. ತಪ್ಪು ಮಾಡಿದ್ದರೆ ಬಂಧಿಸುತ್ತಾರೆ. ತಪ್ಪು ಮಾಡಿಲ್ಲ ಎಂದರೆ ಹೊರಗೆ ಬರುತ್ತಾರೆ. ಪ್ರತಿಪಕ್ಷಗಳನ್ನೇ ಗುರಿಯಾಗಿಸಿ, ಜಾರಿ ನಿರ್ದೇಶನಾಲಯ ಕೆಲಸ ಮಾಡುತ್ತಿಲ್ಲ ಇವರೆ ಕಾನೂನು ಗೌರವಿಸದಿದ್ದರೆ, ಇನ್ಯಾರು ಗೌರವಿಸುತ್ತಾರೆ ಎಂದು ಪ್ರಶ್ನಿಸಿದರು.

ಶಾಸಕ ಪ್ರೀತಂ ಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ,ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎನ್. ನಂದಿನಿ, ನಗರಸಭೆ ಅಧ್ಯಕ್ಷ ಮೋಹನ್ ಹಾಜರಿದ್ದರು.

‘ಪಿಎಸ್‌ಐ ನೇಮಕಾತಿ: ಸಮಗ್ರ ತನಿಖೆ’

‘ಪಿಎಸ್‌ಐ ಹಗರಣ ಕುರಿತು ಸಮಗ್ರ ತನಿಖೆಯಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶಿಕ್ಷೆಗೆ ಗುರಿಪಡಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಕಷ್ಟಪಟ್ಟು ಪರೀಕ್ಷೆ ಬರೆದವರಿಗೆ ನ್ಯಾಯ ಒದಗಿಸುವುದೇ ನಮ್ಮ ಉದ್ದೇಶ’ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

‘ಮುಖ್ಯ ಆರೋಪಿಯನ್ನು ಮುಟ್ಟಿದರೆ ಸರ್ಕಾರ ಬೀಳುತ್ತೆ’ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ನಾನು ಅವರಿಗೆ ಯಾವುದೇ ಮಾಹಿತಿ ಇದ್ದರೂ ಕೊಡಿ ಎಂದು ಹೇಳಿದ್ದೇನೆ. ಸರ್ಕಾರ ಹೋದರೆ ಹೋಗಲಿ, ಮಾಹಿತಿ ಕೊಡಿ ಎಂದಿದ್ದೇನೆ. ಅವರೇ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT