ಬುಧವಾರ, ಸೆಪ್ಟೆಂಬರ್ 18, 2019
28 °C
ಸಿ.ಎಂ ಯಡಿಯೂರಪ್ಪಗೆ ಶಾಸಕ ರೇವಣ್ಣ ಸವಾಲು

ಕಾಂಗ್ರೆಸ್‌, ಬಿಜೆಪಿ ಅವಧಿಯ ಫೋನ್‌ ಕದ್ದಾಲಿಕೆಯೂ ತನಿಖೆಯಾಗಲಿ-ರೇವಣ್ಣ ಸವಾಲು

Published:
Updated:

ಹಾಸನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ನೈತಿಕತೆ ಇದ್ದರೆ ಕಾಂಗ್ರೆಸ್‌, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಫೋನ್‌ ಕದ್ದಾಲಿಕೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಶಾಸಕ ಎಚ್‌.ಡಿ.ರೇವಣ್ಣ ಸವಾಲು ಹಾಕಿದರು.

ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡು ಸಮ್ಮಿಶ್ರ ಸರ್ಕಾರದ 14 ತಿಂಗಳ ಅವಧಿಯಲ್ಲಿ ಕದ್ದಾಲಿಕೆ ಆಗಿರುವುದನ್ನು ಮಾತ್ರ ತನಿಖೆಗೆ ಆದೇಶಿಸಿರುವುದು ಸರಿಯಲ್ಲ. ಕಾಂಗ್ರೆಸ್‌, ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಗೌಡರ ಕುಟುಂಬವನ್ನು ಹೆದರಿಸುತ್ತೇನೆ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ದೇವೇಗೌಡರಿಗೆ ಎಲ್ಲಾ ತನಿಖೆ ಎದುರಿಸುವ ತಾಕತ್ತು ಇದೆ. ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ಫೋನ್‌ ಕದ್ದಾಲಿಕೆ ಮಾಡಿಯೇ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ ಕೆಎಂಎಫ್‌ ಚುನಾವಣೆ ಮುಂದೂಡಿದರು. ಈ ರೀತಿ ದ್ವೇಷದ ರಾಜಕೀಯ ಮಾಡುವಂತಿದ್ದರೆ ಕುಮಾರಸ್ವಾಮಿ ಬಳಿಯೂ ಹಲವು ದಾಖಲೆಗಳು ಇವೆ. ಏನೇನೋ ಮಾಡಬಹುದಿತ್ತು ಎಂದರು.

ಸರ್ಕಾರ ಬೀಳಿಸಲು ಸಹಕರಿಸಿದ್ದ ಎಚ್‌.ವಿಶ್ವನಾಥ್‌ ಅವರ ಅಳಿಯನನ್ನು ಲೋಕೋಪಯೋಗಿ ಇಲಾಖೆ ಮೈಸೂರು ವಿಭಾಗದ ಮುಖ್ಯ ಎಂಜಿನಿಯರ್‌ ಆಗಿ ಮಾಡುವ ಮೂಲಕ ಯಡಿಯೂರಪ್ಪ ಗುರು ಕಾಣಿಕೆ ನೀಡಿದ್ದಾರೆ. ಕುಮಾರಸ್ವಾಮಿ ಗೌಡರ ಮಾತು ಕೇಳದೆ ಕೆಲವು ತಪ್ಪು ಮಾಡಿದರು. ನಾರಾಯಣಗೌಡಗೆ ಟಿಕೆಟ್ ನೀಡದಂತೆ ದೇವೇಗೌಡರು ಹೇಳಿದರೂ ಕೇಳದೆ, ಆತನನ್ನು ನಂಬಿ ಕುಮಾರಸ್ವಾಮಿ ಟಿಕೆಟ್‌ ಕೊಟ್ಟರು. ಈ ವರೆಗೆ ಹಾಸನ ಜಿಲ್ಲೆ ರಾಜಕಾರಣ ಮಾಡುತ್ತಿದ್ದೆ, ಇನ್ನು ಮುಂದೆ ಕುಮಾರಸ್ವಾಮಿಗೆ ಹೆಗಲಿಗೆ ಕೊಟ್ಟು ನಿಲ್ಲುತ್ತೇನೆ ಎಂದು ತಿಳಿಸಿದರು.

Post Comments (+)