ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಇತಿಹಾಸದ ಪುಟ ಸೇರಿದ ಕಂದಾಯ ನಿರೀಕ್ಷಕರ ವಸತಿಗೃಹ

Published 15 ಫೆಬ್ರುವರಿ 2024, 6:14 IST
Last Updated 15 ಫೆಬ್ರುವರಿ 2024, 6:14 IST
ಅಕ್ಷರ ಗಾತ್ರ

ಹಳೇಬೀಡು: ಹೊಸ ಕಟ್ಟಡ ನಿರ್ಮಾಣಕ್ಕಾಗಿ ನಾಡ ಕಚೇರಿ ನಡೆಸುತ್ತಿದ್ದ, ಪುರಾತನ ಕಾಲದ ರಾಜಸ್ವ ನಿರೀಕ್ಷಕರ (ರೆವಿನ್ಯೋ ಇನ್ಸ್ಪೆಕ್ಟರ್) ವಸತಿ ಗೃಹ ಕಟ್ಟಡವನ್ನು ಈಚೆಗೆ ನೆಲಸಮ ಮಾಡಲಾಗಿದೆ. ಶತಮಾನ ಅಂಚಿನಲ್ಲಿದ್ದ ಈ ವಸತಿ ಗೃಹ ವಿಶ್ವಪರಂಪರೆಯ ತಾಣದಲ್ಲಿ ಪಾರಂಪರಿಕ ಕಟ್ಟಡವಾಗಿ ಉಳಿಯದೇ ಇತಿಹಾಸದ ಪುಟ ಸೇರಿದೆ.

ಒಂದು ಕಾಲದಲ್ಲಿ ರಾಜಸ್ವ ನಿರೀಕ್ಷಕರು ಹೋಬಳಿಯ ಪ್ರಮುಖ ಅಧಿಕಾರಿಯಾಗಿದ್ದರು. ಅಂದಿನ ಕಾಲದಲ್ಲಿ ರಾಜಸ್ವ ನಿರೀಕ್ಷಕರು ವಸತಿ ಗೃಹದಲ್ಲಿ ವಾಸವಾಗಿದ್ದು, ಹೋಬಳಿಯ ಆಗುಹೋಗು ನೋಡುತ್ತಿದ್ದರು. ಕಂದಾಯ ಭೂಮಿಯ ಕೆಲಸ ಮಾತ್ರವಲ್ಲದೇ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ಕಷ್ಟ, ಸುಖ ಕೇಳಿಕೊಂಡು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದರು. 

1986ರಲ್ಲಿ ಹಳೇಬೀಡಿಗೆ ಮಂಜೂರಾದ ನಾಡಕಚೇರಿಯನ್ನು ತಾತ್ಕಾಲಿಕವಾಗಿ ರಾಜಸ್ವ ನಿರೀಕ್ಷಕರ ವಸತಿ ಗೃಹದಲ್ಲಿ ಆರಂಭಿಸಲಾಯಿತು. ಸುಮಾರು 35 ವರ್ಷ ಈ ಕಟ್ಟಡದಲ್ಲಿ ನಾಡಕಚೇರಿ ಮುಂದುವರಿಯಿತು. ಹೊಸ ಕಟ್ಟಡ ನಿರ್ಮಾಣಕ್ಕೆ ಬೇರೆ ಜಾಗ ಇಲ್ಲದಿರುವುದರಿಂದ ರಾಜಸ್ವ ನಿರೀಕ್ಷಕರ ನಿವಾಸದ ಕಟ್ಟಡ ತೆರವು ಮಾಡಲಾಗಿದೆ.

ಜನಸ್ನೇಹಿ ಕೇಂದ್ರ, ಉಪ ತಹಶೀಲ್ದಾರ್, ರವಿನ್ಯೂ ಇನ್‌ಸ್ಪೆಕ್ಟರ್, ಗ್ರಾಮ ಲೆಕ್ಕಿಗರು ಹಾಗೂ ಇತರ ಎಲ್ಲ ಸಿಬ್ಬಂದಿ ಒಂದೇ ಸೂರಿನಡಿ ಕೆಲಸ ಮಾಡಲು ಅನುಕೂಲವಾಗುವಂತೆ ಕಟ್ಟಡ ನಿರ್ಮಾಣ ಆಗಲಿದೆ. ನಾಡಕಚೇರಿ ವ್ಯಾಪ್ತಿಯ ಕಂದಾಯ ಸಿಬ್ಬದಿ ಎಲ್ಲರೂ ಒಂದು ಸ್ಥಳದಲ್ಲಿ ಸಾರ್ವಜನಿಕ ಕೆಲಸ ಸಿಗುತ್ತಾರೆ.

ಒಂದು ದಿಕ್ಕಿನಲ್ಲಿ ನಾಡಕಚೇರಿ ಮತ್ತೊಂದು ದಿಕ್ಕಿನಲ್ಲಿ ಗ್ರಾಮ ಲೆಕ್ಕಿಗರ ಕಚೇರಿಗೆ ಜನರ ಅಲೆದಾಟ ತಪ್ಪುತ್ತದೆ. ಸಾರ್ವಜನಿಕ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಆದರೆ ಹಳೆಯದಾದ ರಾಜಸ್ವ ನಿರೀಕ್ಷಕರ ಕಟ್ಟಡವನ್ನು ಮುಂದಿನ ಪೀಳಿಗೆಗೆ ನೋಡುವುದಕ್ಕೂ ಉಳಿಯಲಿಲ್ಲ ಎಂಬ ಮಾತು ಕಟ್ಟಡದ ಸುತ್ತಮುತ್ತಲಿನ ಜನರಿಂದ ಕೇಳಿ ಬರುತ್ತಿದೆ. 

ಕಂದಾಯ ನಿರೀಕ್ಷಕರ ವಸತಿ ಗೃಹ ಸುಸಜ್ಜಿತವಾಗಿತ್ತು. ಕಟ್ಟಡದಲ್ಲಿ ಅಡುಗೆಮನೆ, ಬಚ್ಚಲು ಮನೆ, ಒರಾಂಡಾ ಹಾಗೂ ಮೂರು ಕೋಣೆಗಳಿದ್ದವು. ಮನೆ ಹಿಂಭಾಗದಲ್ಲಿ ಪ್ರತ್ಯೇಕವಾದ ಶೌಚಾಲಯ ಇತ್ತು. ಒಂದು ಕೋಣೆಯನ್ನು ಕಚೇರಿ ಮಾಡಿಕೊಂಡು ಕಂದಾಯ ನಿರೀಕ್ಷಕರು ಸಾರ್ವಜನಿಕ ಕೆಲಸ ಮಾಡಿಕೊಡುತ್ತಿದ್ದರು. ಕೈಬರಹ ಕೆಲಸ ಸುಗಮವಾಗಿ ಸಾಗುತ್ತಿತ್ತು ಎಂದು ಹಿರಿಯರಾದ ಬಸವೇಗೌಡ ನೆನಪಿಸಿಕೊಂಡರು.

ಮಂಗಳೂರು ಹೆಂಚಿನ ಮನೆಯ ಚಾವಣಿ ಅಲ್ಲಲ್ಲೆ ಜಖಂ ಆಗಿದ್ದರಿಂದ ಕಟ್ಟಡದಲ್ಲಿ ಸೋರಿಕೆಯಾಗುತ್ತಿತ್ತು. ಬೆಂಕಿಯಲ್ಲಿ ಸುಟ್ಟ ಇಟ್ಟಿಗೆ ಬಳಸಿದ್ದರಿಂದ ಗೋಡೆಗಳು ಗಟ್ಟಿಯಾಗಿದ್ದವು. ಹೀಗಾಗಿ ಗೋಡೆ ಕೆಡವಿದಾಗ ಹೆಚ್ಚಿನ ದೂಳು ಪಸರಿಸಲಿಲ್ಲ. ಕಾಲ ಕಾಲಕ್ಕೆ ಚಾವಣಿ ದುರಸ್ತಿಯಾಗಿದ್ದರೆ, ಕಟ್ಟಡ ಅವನತಿ ಹೊಂದುತ್ತಿರಲಿಲ್ಲ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂತು. 

‘ಈ ವಸತಿ ಗೃಹದಲ್ಲಿ ಕುಟುಂಬದೊಂದಿಗೆ ವಾಸ್ತವ್ಯ ಮಾಡಿಕೊಂಡು, ಕಂದಾಯ ನಿರೀಕ್ಷಕರ ಕೆಲಸ ನಿರ್ವಹಿಸಿ ಜನಾನುರಾಗಿಗಳಾಗಿದ್ದ ಲಕ್ಕೇಗೌಡ, ಚಿನ್ನಸ್ವಾಮಿ ಕಾಲವನ್ನು ಮರೆಯುವಂತಿಲ್ಲ’ ಎನ್ನುತ್ತಾರೆ ಮುಖಂಡ ಮೋಹನ್.

‘ನಮ್ಮ ತಂದೆ ಹಳೇಬೀಡು ಹೋಬಳಿ ಆರ್‌ಐ ಆಗಿದ್ದಾಗ ನಾವು ಆಟ ಆಡಿ ಬೆಳೆದ ವಸತಿ ಗೃಹ ಕಚಗುಳಿ ಇಟ್ಟಂತೆ ನೆನಾಪುಗುತ್ತದೆ. ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಕಾಲ ಸಹೋದರಿಯರಾದ ಪುಷ್ಪಲತಾ, ಅನುರಾಧಾ, ಗೀತಾ, ಸಹೋದರರಾದ ಕೇಶವಮೂರ್ತಿ, ಮಂಜು ಹಾಗೂ ಸ್ನೇಹಿತರೊಂದಿಗೆ ಹಳೇಬೀಡು ವಸತಿಗೃಹದಲ್ಲಿ ಕಳೆದಿದ್ದೇನೆ. ಹಳೇಬೀಡಿನ ಯುವಕರೊಂದಿಗೆ ಅಪ್ಪನ ಕ್ರೀಡಾಸಕ್ತಿ, ವಸತಿ ಗೃಹ ಅಂಗಳದ ಅಮ್ಮನ ಕೈತೋಟ ಮರೆಯಲು ಸಾಧ್ಯವೇ ಇಲ್ಲ’ ಎಂದು ಅರಕಲಗೂಡು ಉಪ ನೋಂದಣಾಧಿಕಾರಿ ಕಚೇರಿ ಉದ್ಯೋಗಿ ಕೆ.ಸಿ.ಹರೀಶ ನೆನಪಿಸಿಕೊಳ್ಳುತ್ತಾರೆ.

ಮಾತೃ ಇಲಾಖೆಯಂತಿರುವ ಕಂದಾಯ ಇಲಾಖೆಗೆ ಸುಸಜ್ಜಿತ ಕಟ್ಟಡ ಅಗತ್ಯವಿದೆ. ಹೆಚ್ಚುವರಿ ಸರ್ಕಾರಿ ಜಾಗ ಇದ್ದಿದ್ದರೆ ಈ ವಸತಿ ಗೃಹವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಬಹುದಾಗಿತ್ತು
ಎಚ್.ಎಂ.ನಿಂಗಪ್ಪ ಗ್ರಾಮ ಪಂಚಾಯಿತಿ ಸದಸ್ಯ
ಹಳೇಬೀಡಿನ ಕೇಂದ್ರ ಸ್ಥಳದಲ್ಲಿ ನಿರ್ಮಾಣ ಆಗಲಿರುವ ಹೊಸ ಕಟ್ಟಡದಲ್ಲಿ ಸಾರ್ವಜನಿಕರಿಗೆ ಒಂದೇ ಸೂರಿನಡಿ ಎಲ್ಲ ಸಿಬ್ಬಂದಿ ಲಭ್ಯವಾಗಲಿದ್ದು ಸಾರ್ವಜನಿಕರಿಗೂ ಅನುಕೂಲ ಆಗಲಿದೆ
ಮಮತಾ ಎಂ. ಬೇಲೂರು ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT