ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಕೋವಿಡ್‌ ಸಾವು: ₹ 30 ಲಕ್ಷ ಪರಿಹಾರ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸ್ಸು ಮಾಡಿರುವ ₹339.48 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು.

ಕೋವಿಡ್ ಸಂದರ್ಭದಲ್ಲಿ ಕೆಲಸ ಒತ್ತಡದಿಂದ 35 ಜನ ಅಂಗನವಾಡಿ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. ಎರಡನೇ ಅಲೆಯಲ್ಲಿ ಹಲವರಿಗೆ ಸೋಂಕು ತಗುಲಿದೆ. ಮೃತ ಕುಟುಂಬದವರಿಗ ಪರಿಹಾರ ಸಿಕ್ಕಿಲ್ಲ. ಮೊಟ್ಟೆ ಖರೀದಿಯಲ್ಲಿ ಆಗಿರುವ ಅವ್ಯವಹಾರದ ತನಿಖೆ ನಡೆಸಬೇಕು. ಇಲಾಖೆ ವತಿಯಿಂದಲೇ ಮೊಟ್ಟೆ ಪೂರೈಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ ಮಾತನಾಡಿ, 2016 ರಿಂದ 7,304 ಜನ ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿ ಹೊಂದಿದ್ದಾರೆ. ಅವರಿಗೆ ಕೊಡಬೇಕಾಗಿದ್ದ ಇಡಗಂಟು ಕೂಡ ಸರ್ಕಾರ ಪರಿಗಣನೆ ಮಾಡಿಲ್ಲ. ಕೋವಿಡ್ ಸಂದರ್ಭದಲ್ಲಿ ಮೃತರಾದವರ ಕುಟುಂಬ ಸದಸ್ಯರಿಗೆ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆ ನೀಡಬೇಕು. ಕೋವಿಡ್‌ ನಿಂದ ಮೃತಪಟ್ಟವರಿಗೆ ₹30 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು, ಅಲ್ಲಿವರೆಗೂ ಮಾಸಿಕ ₹21 ಸಾವಿರ ವೇತನ ನೀಡಬೇಕು. ಸೇವಾ ಜೇಷ್ಠತೆಯ ಆಧಾರದಲ್ಲಿ ವೇತನ ನಿಗದಿ ಮಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ವೇತನ ಅಂತರ ಕಡಿಮೆ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೂ ಸಹಾಯಕಿಯರನ್ನು ನೇಮಿಸಬೇಕು. ಖಾಲಿ ಇರುವ ಸಹಾಯಕಿಯರು, ನೌಕರರು ಹಾಗೂ ಇಲಾಖೆ
ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಇಂದ್ರಮ್ಮ, ಖಜಾಂಚಿ ಜೆ.ಪಿ.ಶೈಲಜಾ, ರಾಜ್ಯ ಕಾರ್ಯದರ್ಶಿ ಜಯಂತಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್‌, ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು