ದೀಪಕ್ ಶೆಟ್ಟಿ
ಜಾವಗಲ್: ಗ್ರಾಮದ ಸ್ಮಶಾನವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಸ್ಮಶಾನದ ಆವರಣದಲ್ಲಿ ಜಾಲಿ ಗಿಡ ಹಾಗೂ ಪಾರ್ಥೇನಿಯಂ ಗಿಡಗಳು ದಟ್ಟವಾಗಿ ಬೆಳೆದಿವೆ. ಅಂತ್ಯಸಂಸ್ಕಾರ ನೆರವೇರಿಸಲು ಸಾರ್ವಜನಿಕರು ಸ್ಮಶಾನದ ಒಳಗೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಸುಮಾರು 11ಸಾವಿರ ಜನಸಂಖ್ಯೆ ಇದ್ದು. ಮುಸ್ಲಿಮರಿಗೆ ಇರುವ ಪ್ರತ್ಯೇಕ ಸ್ಮಶಾನಗಳನ್ನು ಹೊರತುಪಡಿಸಿದರೆ, ಗ್ರಾಮದಲ್ಲಿ ಇನ್ನುಳಿದ ಎಲ್ಲ ಜಾತಿ ಜನಾಂಗದವರಿಗೂ ಇರುವುದು ಇದೊಂದೇ ಸ್ಮಶಾನ.
2019 ಹಾಗೂ 2020 ನೇ ಸಾಲಿನ ನರೇಗಾ ಯೋಜನೆ ಅಡಿ ಸ್ಮಶಾನವನ್ನು ಒಂದು ಬಾರಿ ಸ್ವಚ್ಛಗೊಳಿಸಿರುವುದನ್ನು ಹೊರತುಪಡಿಸಿದರೆ, ಈವರೆಗೂ ಸ್ಮಶಾನದ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಮೃತರ ಕುಟುಂಬಸ್ಥರೇ ಅಂತ್ಯಸಂಸ್ಕಾರಕ್ಕಾಗಿ ಜಾಗವನ್ನು ಸ್ವಚ್ಛಗೊಳಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮೃತದೇಹಗಳ ಅಂತ್ಯಕ್ರಿಯೆಗೆ ಸಹಾಯವಾಗುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಶೆಡ್‌ನ ಬಹುತೇಕ ತಗಡುಗಳು ತುಕ್ಕು ಹಿಡಿದು ಉದುರಿ ಹೋಗಿವೆ. ಮಳೆಗಾಲದಲ್ಲಿ ಅಂತ್ಯಕ್ರಿಯೆ ನಡೆಸಲು ಮೃತರ ಕುಟುಂಬಸ್ಥರು ಹರಸಾಹಸ ಮಾಡಬೇಕಾಗಿದೆ. ಸ್ಮಶಾನದಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಅಂತ್ಯಕ್ರಿಯೆಗೆ ಬರುವ ಮೃತರ ಸಂಬಂಧಿಗಳು ಬಿಸಿಲು ಹಾಗೂ ಮಳೆಯಲ್ಲಿ ನಿಂತು ಸಂಸ್ಕಾರ ನೆರವೇರಿಸುವಂತಾಗಿದೆ.
ಗ್ರಾಮದ ಈ ಸ್ಮಶಾನಕ್ಕೆ ಈವರೆಗೂ ಸುಸಜ್ಜಿತವಾದ ಕಾಂಪೌಂಡ್ ನಿರ್ಮಿಸದೇ ಇರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೇ ಕಸದ ತೊಟ್ಟಿಯ ಸೌಲಭ್ಯವು ಇಲ್ಲದ್ದರಿಂದ ಸ್ಮಶಾನದ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದ್ದು, ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿದೆ.
ಸ್ಮಶಾನದಲ್ಲಿ ನೀರಿನ ವ್ಯವಸ್ಥೆಯೂ ಇಲ್ಲದಾಗಿದೆ. ಪಕ್ಕದಲ್ಲಿರುವ ಗ್ರಾಮ ದೇವತೆಗಳಾದ ಕರಿಯಮ್ಮ ಹಾಗೂ ಪ್ಲೇಗಿನಮ್ಮ ದೇವಸ್ಥಾನದ ಬಳಿ ದನಗಳಿಗೆ ನೀರು ಕುಡಿಯಲು ನಿರ್ಮಿಸಲಾಗಿರುವ ತೊಟ್ಟಿಯಲ್ಲಿಯ ನೀರನ್ನು ಅಂತ್ಯಕ್ರಿಯೆ ಸಮಯದಲ್ಲಿ ಬಳಸಲಾಗುತ್ತಿದೆ.
ದೇವಾಲಯದ ಪಕ್ಕದಲ್ಲಿಯೇ ಕೊಳವೆಬಾವಿ ಇದ್ದರೂ, ಅಲ್ಲಿಂದ ಸ್ಮಶಾನಕ್ಕೆ ನೀರಿನ ಸೌಕರ್ಯ ಕಲ್ಪಿಸಲು ಈವರೆಗೂ ಸಾಧ್ಯವಾಗಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಮೃತದೇಹಗಳನ್ನು ಸುಡಲು ಮಾತ್ರ ಅವಕಾಶವಿದ್ದು, ಮೃತದೇಹಗಳನ್ನು ಹೂಳಲು ಯಾವುದೇ ಪರ್ಯಾಯ ವ್ಯವಸ್ಥೆಗಳು ಇಲ್ಲ. ಹಾಗಾಗಿ ಬಹುತೇಕ ಜನರು ತಮ್ಮ ಜಮೀನುಗಳಲ್ಲಿಯೇ ಮೃತದೇಹಗಳನ್ನು ಮಣ್ಣು ಮಾಡುತ್ತಿದ್ದಾರೆ.
ಗ್ರಾಮದ ಪ್ರತಿಯೊಂದು ಜಾತಿ ಹಾಗೂ ಧರ್ಮದ ಮೃತ ವ್ಯಕ್ತಿಗಳಿಗೆ ಮುಕ್ತಿ ನೀಡಬೇಕಾಗಿದ್ದ ಮುಕ್ತಿ ಧಾಮದ ಪರಿಸ್ಥಿತಿ ಶೋಚನೀಯವಾಗಿದ್ದು, ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಮಶಾನಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.
ಎಲ್ಲ ಸಮುದಾಯಗಳಿಗೂ ಇರುವುದೊಂದೇ ಸ್ಮಶಾನ ಮೃತದೇಹಗಳನ್ನು ಹೂಳಲು ವ್ಯವಸ್ಥೆ ಇಲ್ಲದೇ ತೊಂದರೆ ಸ್ಮಶಾನದ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಜನರ ಆಗ್ರಹ
ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು ಶೀಘ್ರವಾಗಿ ಸ್ಮಶಾನಕ್ಕೆ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.ಅರುಣ್ ಜಾವಗಲ್ ಗ್ರಾಮ ಪಂಚಾಯಿತಿ ಸದಸ್ಯ
ಮಳೆ ಬಂತೆಂದರೆ ಸ್ಮಶಾನದ ಒಳಗೆ ಕಾಲಿಡಲು ಸಾಧ್ಯವಾಗುವುದಿಲ್ಲ. ದೇವಾಲಯದ ಪಕ್ಕದಲ್ಲಿರುವ ಕೊಳವೆಬಾವಿಯಿಂದ ಸ್ಮಶಾನಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಬೇಕು.ದೇವರಾಜ್ ಜಾವಗಲ್ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.