ಹೊಳೆನರಸೀಪುರ: ‘ನ್ಯಾಯಾಲಯದಲ್ಲಿ ದರಕಾಸ್ತು ಜಮೀನು ವಿವಾದದ ತೀರ್ಪು ತಮ್ಮ ಪರ ಆಗಲಿಲ್ಲ ಎಂದು ಬೇಸತ್ತ ಸೋದರ ಸಂಬಂಧಿಗಳು ಹಳ್ಳಿಮೈಸೂರು ಹೋಬಳಿ ಗುಲಗಂಜಿಹಳ್ಳಿ ದಾಖಲೆಯ ಮೂಡಲಕೊಪ್ಪಲು ಗ್ರಾಮದಲ್ಲಿ ಗುರುವಾರ ರೈತ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೆಲೆಗಡಲೆ, ತೊಗರಿ, ಮೆಣಸಿನಕಾಯಿ ಬೆಳೆ ನಾಶ ಮಾಡಿದ್ದಾರೆ’ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಗ್ರಾಮದ ಜವರೇಗೌಡ (ದಿವಂಗತ) ಎಂಬುವವರಿಗೆ 1992/93ರಲ್ಲಿ ಸರ್ವೆ ನಂಬರ್ 18 ಹಾಗೂ 23ರಲ್ಲಿ 2.1 ಎಕರೆ ಜಮೀನು ದರಕಾಸ್ತಿನಲ್ಲಿ ದೊರೆತಿತ್ತು. ಅದರಲ್ಲಿ ಅವರು ಬೇಸಾಯ ಮಾಡುತ್ತಿದ್ದರು.ಜವರೇಗೌಡ ನಿಧನ ನಂತರ ಆ ಜಮೀನು ಪುತ್ರ ರಾಜೇಗೌಡ ಅವರ ಹೆಸರಿಗೆ ನಿಯಮದಂತೆ ವರ್ಗಾವಣೆ ಆಗಿತ್ತು. ಇವರು ಜಮೀನಿನಲ್ಲಿ ಮನೆ ಕಟ್ಟಿಕೊಂಡು, ಬ್ಯಾಂಕಿನಲ್ಲಿ ಸಾಲಪಡೆದು ಬೇಸಾಯ ಮಾಡುತ್ತಿದ್ದರು.
2018 ರಲ್ಲಿ ರಾಜೇಗೌಡರ ಚಿಕ್ಕಪ್ಪನ ಮಕ್ಕಳು ಈ ಜಮೀನಿನಲ್ಲಿ ನಮಗೂ ಭಾಗ ಬರಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಕೆಲದಿನಗಳ ಹಿಂದೆ ದಾವೆ ವಜಾ ಆಗಿತ್ತು.
ನ್ಯಾಯಾಲಯದಲ್ಲಿ ದಾವೆ ವಜಾ ಆಗಿ, ತೀರ್ಪಿನಲ್ಲಿ ಜಮೀನು ಸಿಗದೇ ಇದ್ದುದರಿಂದ ಬೇಸರಗೊಂಡ ರಾಜೇಗೌಡನ ಚಿಕ್ಕಪ್ಪನ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಗ್ರಾಮದ ಒಂದಿಬ್ಬರು ಸೇರಿ ರಾಜೇಗೌಡ ಮನೆಯಲ್ಲಿ ಇಲ್ಲದ ವೇಳೆ ಗೌಡನ ಪತ್ನಿ ಗೌರಮ್ಮ, ಅಜ್ಜಿ ಕಾಳಮ್ಮ ಅವರನ್ನು ಹೆದರಿಸಿ ಜೆಸಿಬಿ ಹಾಗೂ ಟ್ರಿಲರ್ ಅನ್ನು ನೆಲಕಡಲೆ, ತೊಗರಿ, ಮೆಣಸಿನಕಾಯಿ, ಸೀಮೆ ಹುಲ್ಲು ಬೆಳೆದಿದ್ದ ಜಮೀನಿನ ಮೇಲೆ ಓಡಾಡಿಸಿ ಬೆಳೆ ನಾಶ ಮಾಡಿದ್ದಾರೆ. ಬಂಡಿನ ಕಲ್ಲುಗಳನ್ನು ಒಡೆದು ಹಾಕಿದ್ದಾರೆ. ರಾಜೇಗೌಡ ಅವರ ದೂರಿನಂತೆ ಪೊಲೀಸರು ಬಂದು ದುಷ್ಕರ್ಮಿಗಳನ್ನು ಚೆದುರಿಸಿದ್ದಾರೆ. ಪೊಲೀಸರು ಸಕಾಲಕ್ಕೆ ಬರದಿದ್ದರೆ ಮನೆ, ತೆಂಗಿನ ಮರಗಳು, ಕಬ್ಬ ಬೆಳೆನ್ನು ಸಂಪೂರ್ಣ ನಾಶ ಮಾಡುತ್ತಿದ್ದರು ಎಂದು ರಾಜೇಗೌಡ ದೂರಿದ್ದಾರೆ.
ಚಿಕ್ಕಪ್ಪನ ಮಕ್ಕಳಾದ ತಾಯಮ್ಮ, ಸಾವಿತ್ರಮ್ಮ, ಕಾವೇರಮ್ಮ, ಸಾಕಮ್ಮ, ಅಳಿಯಂದಿರಾದ ರಾಮೇಗೌಡ, ರೇವಣ್ಣ ಹಾಗೂ ಇವರ ಮಕ್ಕಳಾದ ಕರಿಗೌಡ, ಸತೀಶ್‍ಗೌಡ, ಲೋಕೇಶ್, ರವಿಕುಮಾರ ಗ್ರಾಮದ ಶಿವಲಿಂಗೇಗೌಡ ಹಾಗೂ ಸಾಕರಾಜ ಕೃತ್ಯ ನಡೆಸಿ ನಷ್ಟ ಮಾಡಿದ ಬಗ್ಗೆ ರಾಜೇಗೌಡ ಹಳ್ಳಿಮೈಸೂರು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.