ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಳಪತಿಗಳಿಗೆ ಬಿಸಿ ಮುಟ್ಟಿಸಿದ ಐಟಿ; ಐದು ಕಡೆ ರೇವಣ್ಣ ಆಪ್ತರ ಮನೆ ಮೇಲೆ ದಾಳಿ

ಏಕಕಾಲಕ್ಕೆ ದಾಳಿ, ದಾಖಲೆಗಳ ಪರಿಶೀಲನೆ
Last Updated 2 ಮೇ 2019, 15:45 IST
ಅಕ್ಷರ ಗಾತ್ರ

ಹಾಸನ: ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ದಳಪತಿಗಳು ಹಾಗೂ ಅವರ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಆದಾಯ ತೆರಿಗೆ (ಐಟಿ) ಇಲಾಖೆ ಮತ್ತೊಂದು ಶಾಕ್ ನೀಡಿದೆ.

ಬೆಳ್ಳಂಬೆಳ್ಳಗೆ ಜಿಲ್ಲೆಯ ಒಟ್ಟು ಐದು ಕಡೆ ಏಕ ಕಾಲದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಪ್ತರ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳ ತಂಡ, ಸಂಜೆವರೆಗೂ ಪರಿಶೀಲನೆ ನಡೆಸಿತು.

ಸಚಿವರ ರೇವಣ್ಣ ಅವರ ದೊಡ್ಡಪ್ಪನ ಮಗ ಹೊಳೆನರಸೀಪುರ ತಾಲ್ಲೂಕು ಹರದನಹಳ್ಳಿಯ ಎಚ್‌.ಎನ್‌.ದೇವೇಗೌಡ (ಪಾಪಣ್ಣಿ) ನಿವಾಸದ ಮೇಲೆ ದಾಳಿ ನಡೆಸಿದ ತಂಡ, ಸಂಜೆವರೆಗೂ ದಾಖಲೆಗಳ ಪರಿಶೀಲನೆ ನಡೆಸಿತು.

ಪಾಪಣ್ಣಿ ಅವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಹಾಲಿ ಎಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿದ್ದಾರೆ.

ಐದು ದಿನಗಳ ಹಿಂದೆ ಇದೇ ಹರದನಹಳ್ಳಿಯ ದೇವೇಗೌಡರ ಕುಲದೇವರು ಈಶ್ವರ ದೇವಾಲಯ ಮತ್ತು ಅರ್ಚಕರ ಮನೆ ಮೇಲೆ ಅಪರಿಚಿತರಿಬ್ಬರು ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿದ್ದರು. ಆದ ಕಾರಣ ದಾಳಿ ನಡೆಸಲು ಬಂದ ಐಟಿ ಅಧಿಕಾರಿಗಳಿಂದ ಫ್ಲೈಯಿಂಗ್ ಸ್ಕ್ವಾಡ್‌ ಅಧಿಕಾರಿ ಹೇಮಂತ್‌ ಅವರು ಮಾಹಿತಿ ಸಂಗ್ರಹಿಸಿದರು. ಬಳಿಕ ಅಧಿಕಾರಿಗಳು ಐಡಿ ಕಾರ್ಡ್‌ ತೋರಿಸಿದರು.

ಇನ್ನೊಂದೆಡೆ ಕ್ರಷರ್‌ ಮಾಲೀಕ ಎನ್‌.ಆರ್.ಅನಂತ ಕುಮಾರ್‌ ಅವರ ಹಂಗರಹಳ್ಳಿಯ ಜಲ್ಲಿ ಕ್ರಷರ್‌ ಕಚೇರಿ ಹಾಗೂ ಹಾಸನದ ವಿದ್ಯಾನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಇನ್ನೊಂದೆಡೆ ಹಾಸನದ ವಿದ್ಯಾನಗರದಲ್ಲಿರುವ ಗುತ್ತಿಗೆದಾರ ಕಾರ್ಲೆ ಇಂದ್ರೇಶ್ ಮನೆ, ರವೀಂದ್ರ ನಗರದಲ್ಲಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ನಿವಾಸ ಮತ್ತು ಹೌಸಿಂಗ್ ಬೋರ್ಡ್ ನಲ್ಲಿರುವ ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಅವರ ಮನೆಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದರು. ಪೊಲೀಸ್ ಭದ್ರತೆ ನಡುವೆ ಕೂಲಂಕಷ ಶೋಧ ನಡೆಸಿದರು.

ಕೆಲವು ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಮುಂಗಡವಾಗಿಯೇ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಲೋಕಸಭೆ ಚುನಾವಣೆಗೆ ಕೆಲವೇ ಗಂಟೆ ಬಾಕಿ ಇರುವಾಗಲೇ ಐಟಿ ಅಧಿಕಾರಿಗಳು ಸರಣಿಯೋಪಾದಿಯಲ್ಲಿ ದಾಳಿ ಮುಂದುವರಿಸಿರುವುದು ತಲ್ಲಣ ತಂದಿದೆ.

ಐಟಿ ದಾಳಿಗೆ ದಳಪತಿಗಳು ಸಹಜವಾಗಿಯೇ ಕೆಂಡಾಮಂಡಲವಾಗಿದ್ದು, 18 ರಂದು ನಡೆಯುವ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೀಳು ಮಟ್ಟಕ್ಕೆ ಇಳಿದ ಕೇಂದ್ರ

ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಯುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ರೇವಣ್ಣ, ‘ಇಷ್ಟು ಕೀಳು ಮಟ್ಟಕ್ಕೆ ಕೇಂದ್ರ ಸರ್ಕಾರ ಇಳಿಯಬಾರದು. ಪ್ರತಿಪಕ್ಷಗಳನ್ನು ಹಣಿಯುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆಹೀಗೆಲ್ಲಾ ಮಾಡೋ ಬದಲು, ಪೊಲೀಸರು, ಐಟಿ ಅಧಿಕಾರಿಗಳ ಮೂಲಕ ಪ್ರತಿ ಪಕ್ಷದವರನ್ನು ಎಲ್ಲಾದ್ರೂ ಕೂಡಿ ಹಾಕಿ ಚುನಾವಣೆ ನಡೆಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಚುನಾವಣಾ ಅಧಿಕಾರಿಗಳು ಯಾರದೋ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮವರ ಮನೆಗಳಲ್ಲಿ ಹಣ ಇದೆ. ಜೈಲಿಗೆ ಹೋಗಿದ್ದ ಯಡಿಯೂರಪ್ಪ ಮನೆಯಲ್ಲಿ ಏನೂ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಹೀಗೆಲ್ಲಾ ಮಾಡುವುದರಿಂದ, ಸುಳ್ಳು ಕೇಸು ಹಾಕುವುದರಿಂದ ನಮ್ಮ ಕುಟುಂಬವನ್ನು ಹೆದರಿಸಲು ಆಗುವುದಿಲ್ಲ’‍ ಎಂದು ತಿರುಗೇಟು ನೀಡಿದ ರೇವಣ್ಣ, ‘ಹಾಸನ ರಿಂಗ್ ರೋಡ್‌ನಲ್ಲಿ ₹ 7 ಕೋಟಿ ಹಣವನ್ನು ಬಿಜೆಪಿ ಸಾಗಿಸಿದೆ. ಬಿಜೆಪಿ ವಿರುದ್ಧ ನಾವು ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಪಕ್ಷಪಾತ ಮಾಡಲಾಗುತ್ತಿದೆ’ ಎಂದು ಗಂಭೀರ ಆರೋಪ ಮಾಡಿದರು.

ಪಟೇಲ್‌ ಬಳಿ ಜುಬ್ಬ, ಪಂಚೆ

ತರಕಾರಿ ಮಾರುವ ರಾಜೇಶ್ ಮನೆ, ಜುಬ್ಬ, ಪಂಚೆ ಆಸ್ತಿ ಹೊಂದಿರುವ ಪಟೇಲ್ ಶಿವರಾಂ, ಅರ್ಧ ಕೆ.ಜಿ ಮಟನ್ ಖರೀದಿ ಮಾಡದ ಸತೀಶ್, ಜಲ್ಲಿ ಕಲ್ಲು ಸಿಗುವ ಅನಂತು ಮನೆ ಮೇಲೆ ಐ.ಟಿ. ದಾಳಿ ನಡೆದಿದೆ ಎಂದು ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.

ತರಕಾರಿ ಮಾರಾಟ ಮಾಡಿ ದಿನಕ್ಕೆ ₹ 500 ಸಂಪಾದನೆ ಮಾಡುವ ರಾಜೇಶ್‌ ಅವರ ತಂದೆ ಜೆಡಿಎಸ್‌ ಕಾರ್ಯಕರ್ತ.
ಒಂದೇ ಪಕ್ಷದ ಮೇಲೆ ಟಾರ್ಗೆಟ್ ಮಾಡಿ, ಗೌಡರ ಕುಟುಂಬ ಮತ್ತು ಅವರ ಪಕ್ಷದ ಕಾರ್ಯಕರ್ತರ ಮನೆ ಮೇಲೆ ಮಾತ್ರ ದಾಳಿ ನಡೆಸಲಾಗುತ್ತಿದೆ. ನಮ್ಮ ಥಿಯೇಟರ್‌ ಚನ್ನಾಂಬಿಕ ಹಾಗೂ ಮನೆ ಹಿಂಭಾಗ ಹಾಸ್ಟೆಲ್‌ ಮೇಲೆ ದಾಳಿ ನಡೆದಿದೆ. ಮನೆಯೊಂದರಲ್ಲಿ ಮದುವೆಗೆ ತಂದಿದ್ದ ಎರಡು ಚೀಲ ರಾಜಮುಡಿ ಅಕ್ಕಿಯನ್ನು ತೆಗೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಅಂತ್ಯ ಕಾಲ ಬಂದಿದ್ದು, ದೇವರೆ ಶಿಕ್ಷೆ ಕೊಡುವ ಕಾಲ ಬರುತ್ತದೆ. ಜಿಲ್ಲಾ ಚುನಾವಣಾಧಿಕಾರಿ ಅವರು ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಒತ್ತಡಕ್ಕೆ ಮಣಿದು ಕೆಲಸ ನಿರ್ವಹಿಸುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ಎಲ್ಲವನ್ನು ಹೇಳುತ್ತೇನೆ’ ಎಂದು ಗುಡುಗಿದರು.

ಸಿಬಿಐ ತನಿಖೆ ನಡೆಸಲಿ

ರಾಜಕೀಯ ದುರುದ್ದೇಶದಿಂದಲೇ ಐಟಿ ದಾಳಿ ನಡೆಯುತ್ತಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ಅಭ್ಯರ್ಥಿ ಎ.ಮಂಜು, ಐಟಿ ಸ್ವಾಯತ್ತ ಸಂಸ್ಥೆ. ಅದರ ಕೆಲಸ ಅದು ಮಾಡುತ್ತಿದೆ. ಒಂದು ವೇಳೆ ರಾಜಕೀಯ ಕಾರಣ ಇದೆ ಎಂದಾದರೆ, ಸಿಬಿಐ ತನಿಖೆಗೆ ಆದೇಶ ಮಾಡಲಿ’ ಎಂದು ಸಿ.ಎಂ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT